Tumkuru: ಕೊರೊನಾ ವೈರಸ್‍ನಿಂದ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮ ಥೆರಪಿ ನೀಡುವ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ನಿಯಂತ್ರಣದ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಕರ್ನಾಟಕ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಡುತ್ತಿದೆ. ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಡಾ.ಯುಎಸ್ ವಿಶಾಲ್ ರಾವ್ ನೇತೃತ್ವದ ತಂಡ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಸಿದ್ಧರಾಗಿದ್ದಾರೆ ಎಂದರು.
ರಾಜ್ಯದಲ್ಲಿ 489 ಪಾಸಿಟಿವ್ ಪ್ರಕರಣಗಳಲ್ಲಿ 153 ಜನರು ಗುಣಮುಖರಾಗಿದ್ದಾರೆ. ಇವರನ್ನು ಸಂಪರ್ಕ ಮಾಡುತ್ತಿದ್ದೇವೆ. ಇವರು 15 ದಿನಕ್ಕೊಮ್ಮೆ ರಕ್ತ ನೀಡಬಹುದು.ಗುಣಮುಖರಾದವರು ಸ್ವಯಂ ಪ್ರೇರಣೆಯಿಂದ ಬಂದು ನಮಗೆ ಸಹಕಾರ ನೀಡಬೇಕು ಎಂದರು.
ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವರು, ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯವು ಕೋವಿಡ್-19ರ ನಿಯಂತ್ರಣದಲ್ಲಿ 11ನೇ ಸ್ಥಾನದಲ್ಲಿದೆ. ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸೇರಿದಂತೆ ಒಟ್ಟು 10 ಇಲಾಖೆಗಳ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲೆಗೆ ಅಗತ್ಯವಾದ 8000 ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣ ಬಂದಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದು, 1 ಗುಣಮುಖ, ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೈನ್ಮೆಂಟ್ ವಲಯವೆಂದು ಸೀಲ್‍ಡೌನ್ ಮಾಡಿರುವ ಕಡೆ ಹೆಚ್ಚಿನ ಬಂದೋಬಸ್ತ್ ಹೇರಬೇಕು ಎಂದರು.