ಕಲೆಯಲ್ಲಿ ತೊಡಗಿಸಿಕೊಂಡು ಅಭ್ಯಾಸ ಮಾಡುವುದರಿಂದ ಏಕಾಗ್ರತೆ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಭಿವೃದ್ಧಿ ಅಧಿಕಾರಿ ಕೆ.ಹೆಚ್. ಅಂಬಿಕಾ ತಿಳಿಸಿದರು.
ತುಮಕೂರಿನ ಬಾಲಭವನದಲ್ಲಿ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಆಯ್ಕೆ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು. 9-16 ವರ್ಷ ವಯೋಮಾನದ ಮಕ್ಕಳಿಗಾಗಿ ಸೃಜನಾತ್ಮಕ ಕಲೆ/ಸೃಜನಾತ್ಮಕ ಬರವಣಿಗೆ/ ಸೃಜನಾತ್ಮಕ ಪ್ರದರ್ಶನ ಕಲೆ/ವಿಜ್ಞಾನದಲ್ಲಿ ನೂತನ ಆವಿಷ್ಕಾರ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಕಲಾಶ್ರೀ ಶಿಬಿರವು ಸಹಕಾರಿಯಾಗಿದೆ. ಸೋಲು-ಗೆಲುವು ಮುಖ್ಯವಲ್ಲ. ಶಿಬಿರದಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಪ್ರತಿಯೊಂದು ಮಗುವೂ ಶಿಬಿರದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಬಾಲಭವನದ ಸದಸ್ಯ ಎಂ.ಬಸವಯ್ಯ ಮಾತನಾಡಿ ಬೇರೆಯವರಿಗೆ ಆನಂದ ನೀಡುವ ಶಕ್ತಿ ಕಲಾವಿದರಿಗೆ ಇರುತ್ತದೆ. ಮಕ್ಕಳು ತಮ್ಮ ಪ್ರತಿಭೆಯನ್ನು ಹೊರತಂದು ಸಾಧನೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ. ಏಕಾಗ್ರತೆ, ಧ್ಯಾನ, ಮೌನ, ಪರಿಶ್ರಮದಿಂದ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟದ ಕಲಾಶ್ರೀ ಶಿಬಿರಕ್ಕೆ ಆಯ್ಕೆಯಾದ ಮಕ್ಕಳಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.