Publicstory. in
ತುಮಕೂರು: ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಾವು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ರೈತರು ತಮ್ಮ ಹಣ್ಣುಗಳನ್ನು ನೇರವಾಗಿ ಗ್ರಾಹಕರ ಕೈಗೆಟಕುವ ದರದಲ್ಲಿ ಸ್ಥಳೀಯವಾಗಿ ಸಣ್ಣ-ಸಣ್ಣ ಮಾರುಕಟ್ಟೆಗಳ ಮೂಲಕ ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ. ಹಾಗೂ ಗ್ರಾಹಕರೂ ಸಹ ಮಾವಿನ ಹಣ್ಣು ಖರೀದಿಸಿ ಸವಿಯಬಹುದಾಗಿದೆ ಎಂದರು.
ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮಾವಿನ ಹಣ್ಣು ಸವಿಯಲು ಜನ ಹಿಂಜರಿಯುತ್ತಾರೆ. ಆದರೆ ರೈತರೇ ರಾಸಾಯನಿಕ ಬಳಸದೆ ನೈಸರ್ಗಿಕ ಮತ್ತು ಸಾಂಪ್ರದಾಯಿಕವಾಗಿ ಮಾಗಿಸಿದ ಹಣ್ಣುಗಳಿಗೆ ಬೇಡಿಕೆ ಇದೆ ಎಂದು ಸಚಿವರು ನುಡಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮೇಯರ್ ಫರೀದಾ ಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾಕಲ್ಯಾಣ್, ಮಹಾನಗರಪಾಲಿಕೆ ಆಯುಕ್ತ ಟಿ. ಭೂಬಾಲನ್, ತೋಟಗಾರಿಕೆ ಉಪನಿರ್ದೇಶಕ ರಘು, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಗೌಡ, ಆಶ್ಟ್ರಿಚ್ ಕಂಪನಿ ವ್ಯವಸ್ಥಾಪಕ ನೀಲೇಶ್ ಮತ್ತಿತರ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.