ತುಮಕೂರು: ಸಮನ್ವಯತೆ ಮೀರಿ ಸಾಮಾಜಿಕ ಸಂಕಟಗಳಿಗೆ ಕಾವ್ಯದ ಮೂಲಕ ಪ್ರತಿಸ್ಪಂದಿಸಿದ ಮೃದು ಮಾತಿನ ಕಣವಿ ಅವರು ಯುವ ಮನಸ್ಸುಗಳಿಗೆ ಕಾವ್ಯ ಪ್ರೀತಿಯನ್ನು ಕಲಿಸಿದವರು ಎಂದು ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಅಭಿಪ್ರಾಯಪಟ್ಟರು.
ನಗರದ ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಗುರುವಾರ ನಡೆದ ಹಿರಿಯ ಕವಿ ಚೆನ್ನವೀರ ಕಣವಿ ಅವರಿಗೆ ಕಾವ್ಯ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಸಾಹಿತ್ಯಿಕ ಪರಂಪರೆಗಳ ವಾಗ್ವಾದದ ಜೊತೆ ಇದ್ದಂತವರು ಚೆನ್ನವೀರ ಕಣವಿ. ಸದಾ ತಮಗನಿಸಿದ್ದನ್ನು ನೇರವಾಗಿ ಮಾತನಾಡುವ ಸಾಹಿತ್ಯದ ಶಕ್ತಿ ಅವರಿಗಿತ್ತು.
ಮೂಲತಃ ಧಾರವಾಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. ಜತೆಗೆ ಕನ್ನಡ ಸಾಹಿತ್ಯದ ಪರಂಪರೆಯೊಳಗೆ ಕಣ್ಮರೆಯಾಗಿದ್ದುಕೊಂಡು ಕಾವ್ಯ ಉಳುಮೆ ಮಾಡಿದವರು.
ನವೋದಯ, ನವ್ಯ, ದಲಿತ ಬಂಡಾಯ ಒಳಗೊಳಿಸಿಕೊಂಡು ಸಮನ್ವಯತೆಯನ್ನು ಮೀರದವರು. ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸುವ ಆಕಾಂಕ್ಷೆಯಿಂದ ಮಕ್ಕಳ ಕವಿತೆಗಳನ್ನು ಬರೆಯುತೀದ್ದರು. ಹನ್ನೆರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸೌಮ್ಯಾ ಕವಿಯಾದ ಕಣವಿಯವರು ರಾಜಕೀಯ, ಭ್ರಷ್ಟಾಚಾರ ಕುರಿತು ಖಾರವಾಗಿಯೇ ಕವಿತೆ ರಚಿಸಿ ಕಠೋರ ಟೀಕೆ ಮಾಡಿದವರು. ಕನ್ನಡ ನಾಡಿನಲ್ಲಿ ಕಾವ್ಯ ಸಂಸ್ಕೃತಿಯ ಜೊತೆಗೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿದ ಇವರ ನಿರ್ಗಮನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ಪ್ರಾಧ್ಯಾಪಕ ಪಿ.ಎಂ.ಗಂಗಾಧರಯ್ಯ ಮಾತನಾಡಿ ಚನ್ನವೀರ ಕಣವಿ ಅವರು ಸಮಕಾಲಿನ ವಾಸ್ತವ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಾಮಾಜಿಕ ಅಸಮಾನತೆ, ಶೋಷಣೆ ವಿರುದ್ಧ ಪ್ರತಿಭಟಿಸಿದವರು.ಸಹೃಯ ವಿಮರ್ಶಕರಾಗಿದ್ದ ಇವರು ಗೋಕಾಕ ಚಳುವಳಿಯಲ್ಲಿ ಕನ್ನಡಕ್ಕಾಗಿ ಜೈಲು ವಾಸ ಅನುಭವಿಸಿದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕ ಚನ್ನವೀರ ಕಣವಿ ಅವರ ಕೊಡುಗೆ ಅಪಾರವಾದುದು ಎಂದರು
ಚೆನ್ನವೀರ ಕಣವಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆಯಿಂದ ಕಾವ್ಯ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.