ಅಮೃತ್ ಮಹಲ್ ಕಾವಲ್ ನ ಎತ್ತಿನಹೊಳೆ ನಾಲಾ ಕಾಮಗಾರಿ ಬಳಿ ಗಾಯಗೊಂಡು ನರಳುತ್ತಿರುವ ಕೃಷ್ಣಮೃಗ
ವಿಶೇಷ ವರದಿ: ಶ್ರೀಕಾಂತ್ ಕೆಳಹಟ್ಟಿ
Tipturu: ಇಲ್ಲಿಗೆ ಸಮೀಪದ ಅಮೃತ್ ಮಹಲ್ ಕಾವಲ್ ನಲ್ಲಿ ವಿ.ವಿ.ಯ ಅನುಮತಿ ಇಲ್ಲದೇ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯು ಈ ಹುಲ್ಲುಗಾವಲಿನ ಜೀವ ವೈವಿಧ್ಯತೆಗೂ ಧಕ್ಕೆ ತರಲಿದೆ ಎಂಬ ಆತಂತ ಎದುರಾಗಿದೆ.
ಅತಿ ವಿಶೇಷ ಹುಲ್ಲುಗಾವಲುಗಳಲ್ಲಿ ಇದೂ ಒಂದು. ಇಲ್ಲಿ ಕೇವಲ ಅಮೃತ್ ಮಹಲ್ ಹಸುಗಳ ತಳಿ ಅಭಿವೃದ್ಧಿ ಮಾತ್ರ ನಡೆಯುತ್ತಿಲ್ಲ, ಜೀವ ವೈವಿಧ್ಯತೆಯ ಆಗರವೇ ಆಗಿದೆ.
ಚಿತ್ರ; ಸಂತೋಷ್ ಕೊನೇಹಳ್ಳಿ
ಇಲ್ಲಿನ ಜೀವ ವೈವಿಧ್ಯತೆ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿ ಗಮನ ಸೆಳೆಯಬೇಕಾಗಿದ್ದ ಹುಲ್ಲುಗಾವಲು ಈಗ ಎತ್ತಿನ ಹೊಳೆಯ ಅವೈಜ್ಞಾನಿಕ ಕಾಮಗಾರಿಗೆ ಸಿಲುಕಿ ಮತ್ತಷ್ಟು ಅಪಾಯ ಮೈಮೇಲೆ ಎಳೆದುಕೊಳ್ಳುವ ಸ್ಥಿತಿಗೆ ತಲುಪಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಮಹಲ್ ಹುಲ್ಲುಗಾವಲು ಹಲವು ರೀತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿದೆ. ಅಳಿವಿನಂಚಿನಲ್ಲಿರುವ ಜೀವಿಗಳು ಇಲ್ಲಿ ವಾಸಿಸುತ್ತಿವೆ. ಅವುಗಳ ಪೈಕಿ ಕೃಷ್ಣಮೃಗ ಸಂತತಿಯೂ ಒಂದು. ಹುಲಿಗೆ ಸಿಕ್ಕ ಮಾನ್ಯತೆ ಕೃಷ್ಣಮೃಗಗಳಿಗೂ ದೊರೆತಿದೆ. ಈ ಹಿನ್ನೆಲೆಯಲ್ಲಿ ಅಮೃತ ಮಹಲ್ ಹುಲ್ಲುಗಾವಲನ್ನು ಕೃಷ್ಣಮೃಗ ಸಂರಕ್ಷಣಾ ತಾಣ ಮಾಡಬೇಕೆಂಬ ಕೂಗು ಜೋರಾಗಿದೆ.
ಈಗಾಗಲೇ ತಿಪಟೂರು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ 10 ಕೋಟಿ ರೂಪಾಯಿ ವೆಚ್ಚದ ಯೋಜನಾ ವರದಿಯನ್ನು ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಕೃಷ್ಣಮೃಗಗಳನ್ನು ಬೇಟೆಯಾಡದಂತೆ ಅರಣ್ಯ ಇಲಾಖೆ ಬೇಟೆ ನಿಗ್ರಹ ದಳವನ್ನೂ ನಿಯೋಜಿಸಿತು ಆದರೆ ರಾಜ್ಯ ಸರ್ಕಾರ ಮಾತ್ರ ಕೃಷ್ಣಮೃಗ ಸಂರಕ್ಷಣಾ ತಾಣ ಮಾಡುವ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯ ಪರಿಸರವಾದಿ ಗಳನ್ನು ಸಿಟ್ಟಿಗೇಳಿಸಿದೆ.
ಹುಲ್ಲುಗಾವಲಿನಲ್ಲಿರುವ ಪ್ರಾಣಿ ಪಕ್ಷಿಗಳು
ತಿಪಟೂರಿನ ಕೊನೇಹಳ್ಳಿ ಅಮೃತ್ ಮಹಲ್ ಹುಲ್ಲುಗಾವಲು ವನ್ಯಜೀವಿ ಹಾಗು ಜೀವವೈವಿದ್ಯ ತಾಣ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಶೆಡ್ಯೂಲ್ 1ರ ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಕೃಷ್ಣಮೃಗಗಳ ಕುರಿತು ದಾಖಲಾಗಿದೆ. ಅಂತಹ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳು ಈ ಹುಲ್ಲುಗಾವಲಿನಲ್ಲಿ ಜೀವಿಸುತ್ತಿದ್ದು ಇವುಗಳ ಸಂರಕ್ಷಣೆ ಅರಣ್ಯ ಇಲಾಖೆಯ ಜವಾಬ್ದಾರಿ ಆಗಿದೆ.
ಆದರೆ ಎತ್ತಿನಹೊಳೆ ಮುಖ್ಯ ಕಾಲುವೆಯು ಈ ಹುಲ್ಲುಗಾವಲಿನಲ್ಲಿ ಹಾದುಹೋಗಲಿದೆ. ಕಾವಲನ್ನು ಎರಡು ಭಾಗವಾಗಿ ಸೀಳುವುದರಿಂದ ವನ್ಯಜೀವಿಗಳ ಓಡಾಟ ಮತ್ತು ಆಹಾರಕ್ಕೆ ತೊಂದರೆಯಾಗಲಿದೆ. ಇಡೀ ಹುಲ್ಲುಗಾವಲಿನಲ್ಲಿ ಸ್ವಚ್ಛಂದವಾಗಿ ಮೇಯ್ದುಕೊಂಡು ಜೀವಿಸುತ್ತಿದ್ದ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಈ ನಾಲಾ ಕಾಮಗಾರಿ ಅಡ್ಡಿಯಾಗಲಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಆಗ ವನ್ಯಜೀವಿಗಳು ಅನಿವಾರ್ಯವಾಗಿ ರೈತರ ಹೊಲಗಳಿಗೆ ನುಗ್ಗಲು ಅವಕಾಶವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಅರಣ್ಯ ಇಲಾಖೆ ಹುಲ್ಲುಗಾವಲನ್ನು ವಿಭಜಿಸುವ ನಾಲೆಯ ಬಗ್ಗೆ ಮೌನವಹಿಸಬಾರದು ಎನ್ನುತ್ತಾರೆ ರೈತ ಸಂಘದ ದೇವರಾಜ್.
ಹುಲ್ಲುಗಾವಲು ಜೀವವೈವಿಧ್ಯತೆ ಸಂರಕ್ಷಣೆ ಹಾಗು ಅಧ್ಯಯನ ಕಾರ್ಯದಲ್ಲಿ ತೊಡಗಿರುವ ಮೈತ್ರೇಯ ಪರಿಸರ ಅಧ್ಯಯನ ಕೇಂದ್ರದ ತಂಡ ನಶಿಸುತ್ತಿರುವ ಹುಲ್ಲುಗಾವಲು ಪರಿಸರ ವ್ಯವಸ್ಥೆಗೆ ಕಳವಳ ವ್ಯಕ್ತಪಡಿಸಿದೆ.
ಹುಲ್ಲುಗಾವಲು ಪರಿಸರ ವ್ಯವಸ್ಥೆ ನಾಶವಾದರೆ ಕೃಷ್ಣಮೃಗ, ತೋಳ, ಕತ್ತೆ ಕಿರುಬ, ಗುಳ್ಳೆನರಿ, ನರಿ, ಗ್ರೇಟ್ ಇಂಡಿಯನ್ ಬಸ್ಟರ್ಡ್, ಶಾರ್ಟ್ ಟೊಡ್ ಸ್ನೇಕ್ ಈಗಲ್, ಕಲ್ಲು ಗೌಜುಗ, ಲ್ಯಾಪ್ ವಿಂಗ್, ಡವ್, ಲಾರ್ಕ್, ಬುಷ್ ಚಾಟ್, ಪ್ಯಾಡಿ ಫೀಲ್ಡ್ ಪಿಪಿಟ್, ಲಾರ್ಜ್ ಗ್ರೇ ಬ್ಯಾಬಲರ್, ಮುನಿಯ, ಸ್ಯಾಂಡ್ ಗ್ರೌಸ್, ಇಂಡಿಯನ್ ಕರ್ಸರ್, ಟಿಟ್ಟಿಬ, ಲೆಸ್ಸರ್ ಫ್ಲಾರಿಕಾನ್ ಜಾತಿಯ ಪಕ್ಷಿಸಂಕುಲ, ಉರಗಗಳು, ಸಸ್ತನಿಗಳು ಹಾಗೂ ಕೀಟಗಳು ಇತಿಹಾಸ ಪುಟ ಸೇರಲಿವೆ ಎಂದು ಆತಂಕ ವ್ಯಕ್ತಪಡಿಸಿದೆ.
ಎತ್ತಿನಹೊಳೆ ಕಾಮಗಾರಿ ಮಾಡುವುದರಿಂದ ಇಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ಧಕ್ಕೆಯಾಗಲಿದೆ. ಹೀಗಾಗಿ ಪ್ರಾಣಿಗಳಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕು. ನಾಲೆಗೆ ತಂತಿ ಬೇಲಿ ವ್ಯವಸ್ಥೆ ಮಾಡಬೇಕು. ಆಹಾರಕ್ಕಾಗಿ ಆ ಕಡೆಯಿಂದ ಈಕಡೆಗೆ ಓಡಾಡಲು ವನ್ಯಜೀವಿ ಕಾರಿಡಾರ್ ನಿರ್ಮಾಣವಾಗಬೇಕು ಎನ್ನುತ್ತಾರೆ.
ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲಿನ ಜೀವವೈವಿಧ್ಯದ ಮೌಲ್ಯಮಾಪನ ನಡೆಸಿರುವ ಮೈತ್ರಯ ಪರಿಸರ ಅಧ್ಯಯನ ಸಂಸ್ಥೆಯ ಸದಸ್ಯರು ಈ ಕಾಮಗಾರಿಯಿಂದ ಇಲ್ಲಿನ ಹುಲ್ಲುಗಾವಲು ಪರಿಸರ ವ್ಯವಸ್ಥೆಗೆ ಭಾರಿ ಧಕ್ಕೆ ಬರಲಿದೆ ಎಂದು ಮೈತ್ರಯ ಕಳವಳ ವ್ಯಕ್ತಪಡಿಸಿದ್ದಾರೆ.
ಹುಲ್ಲುಗಾವಲು ವೃದ್ಧಿಯಾಗಬೇಕು. ಜೀವವೈವಿಧ್ಯತೆ ಹೆಚ್ಚಾಗಬೇಕು. ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ಸಂರಕ್ಷಣೆ ಮಾಡಬೇಕು. ಆ ಮೂಲಕ ವನ್ಯಜೀವಿ ಜೀವವೈವಿಧ್ಯವನ್ನು ಸಂರಕ್ಷಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.