Publicstory.in
ತುರುವೇಕೆರೆ: ತಾಲ್ಲೂಕಿನ ತೆಂಗು ಬೆಳೆಗಾರರ ಹಿತ ದೃಷ್ಟಿಯಿಂದ ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ನಾಳೆ ಮನವಿ ನೀಡಲು ಎಪಿಎಂಸಿ ಸದಸ್ಯರೊಟ್ಟಿಗೂಡಿ ನಿಯೋಗ ಹೋಗುವುದಾಗಿ ಶಾಸಕ ಮಸಾಲಜಯರಾಂ ಹೇಳಿದರು.
ತಾಲ್ಲೂಕಿನ ಮಾಯಸಂದ್ರ ಮತ್ತು ಡಿ.ಕಲ್ಕೆರೆ ಗ್ರಾಮದಲ್ಲಿ ಎಪಿಎಂಸಿಯ ರಾಷ್ಟೀಯ ಕೃಷಿ ವಿಕಾಸ್ ಯೋಜನೆಯಡಿಯ ತಲಾ 75 ಲಕ್ಷ ರೂಪಾಯಿಗಳ ವೆಚ್ಚದ ಗ್ರಾಮೀಣ ಸಂತೆಗಳ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ತೆಂಗು ಕ್ಷೇತ್ರದ ಜನರ ಪ್ರಧಾನ ವಾಣಿಜ್ಯ ಬೆಳೆಯ ಜೊತೆಗೆ ರೈತರ ಜೀವನಾಧಾರವೂ ಸಹ ಆಗಿದೆ. ಕೊರೊನಾ ಹಾಗು ಲಾಕ್ಡೌನ್ ನಿಂದ ಕೊಬ್ಬರಿಗೆ ಸೂಕ್ತ ಬೆಲೆ ಸಿಗದೆ ತೆಂಗುಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷೇತ್ರದ ಹಲವಾರು ರೈತರು ಕೊಬ್ಬರಿಗೆ ಸಕರ್ಾರದಿಂದ ಬೆಂಬಲ ಬೆಲೆ ಕೊಡಿಸಬೇಕೆಂದು ನನ್ನ ಬಳಿ ಪಟ್ಟುಹಿಡಿದಿದ್ದಾರೆ. ಹೀಗಾಗಿ ರೈತರ ಸಮಸ್ಯೆಗಳನ್ನು ಮುಖ್ಯ ಮಂತ್ರಿಗಳ ಬಳಿ ನಿವೇದಿಸಿಕೊಳ್ಳಲಾಗುವುದು ಎಂದರು.
ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲೇ ಎರಡನೆ ಹಂತದ ಹೇಮಾವತಿ ನೀರು ಹರಿಸಿರುವುದು ಇದೇ ಮೊದಲು. ಹೀಗಾಗಲೇ ಮಾಯಸಂದ್ರ ಕೆರೆ ಸೇರಿದಂತೆ ಕೆಲ ಕೆರೆಗಳು ತುಂಬಿ ಒಂದೆರಡು ದಿನಗಳಲ್ಲಿ ಕೋಡಿ ಬೀಳಲಿವೆ ಎಂದರು.
ನಾಳೆಯಿಂದ ಸಿ.ಎಸ್.ಪುರ ಹೋಬಳಿಗೆ ನೀರು ಹರಿಯಲಿದ್ದು ಇನ್ನೂ 20 ದಿನಗಳ ಕಾಲ ಕ್ಷೇತ್ರದಾದ್ಯಂತ ಹೇಮಾವತಿ ನೀರು ಹರಿಯಲಿದ್ದು ಬಾಕಿ ಉಳಿದಿರುವ ಕೆರೆಗಳನ್ನು ತುಂಬಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಎಪಿಎಂಸಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಕೊಬ್ಬರಿಗೆ ಈಗಿರುವ ಮೂಲ ಬೆಲೆಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 2000 ರೂಪಾಯಿಗಳ ಪ್ರೋತ್ಸಾಹ ಧನ ನೀಡಿದರೆ ಒಟ್ಟು 14300 ರೂಪಾಯಿಗಳ ಬೆಲೆ ರೈತರಿಗೆ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ನರಸಿಂಹ, ಸದಸ್ಯರುಗಳಾದ ಪ್ರಸನ್ನ, ವಿ.ಟಿ.ವೆಂಕಟರಾಮು, ಕಾಂತರಾಜು, ನಾಗರಾಜು, ವಿಜಯೇಂದ್ರ, ಇಂದ್ರಮ್ಮ, ಲೋಕೇಶ್, ಮಧುಸೂದನ್ ಕಾರ್ಯದರ್ಶಿ ವೆಂಕಟೇಶ್ ಗುತ್ತಿಗೆದಾರರುಗಳಾದ ರಾಜೇಶ್, ಧನಪಾಲ್ ಜಿ.ಪಂ.ಮಾಜಿ ಸದಸ್ಯ ಎನ್.ಆರ್.ಜಯರಾಂ, ಸುರೇಶ್ ಮತ್ತು ಮುಖಂಡರುಗಳು ಇದ್ದರು.