ತುಮಕೂರು:
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ.
ತುಮಕೂರು ತಾಲ್ಲೂಕಿನ ಜಕ್ಕೇನಹಳ್ಳಿ ವಾಸಿಯಾದ ಮಹಿಳೆಯನ್ನ ಕೊರಟಗೆರೆ ತಾಲ್ಲೂಕಿನ ಕತ್ತಿನಾಗೇನಹಳ್ಳಿಗೆ ಮದುವೆ ಮಾಡಿಕೊಡಲಾಗಿತ್ತು. ಮಹಿಳೆ, ಗಂಡ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ತಾಲ್ಲೂಕಿನ ಅಳಾಲಸಂದ್ರದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಂದಿಗೆ ಮಹಿಳೆಯ ತಂದೆ, ಅಣ್ಣ ಕೂಡ ಇದ್ದರು.
ಅನಾರೋಗ್ಯ ಕಾರಣದಿಂದ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾಗ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದ ವೇಳೆ ಮಹಿಳೆಗೆ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ.
ತವರು ಮನೆ ಜಕ್ಕೇನಹಳ್ಳಿಯಲ್ಲಿದ್ದ ಮಹಿಳೆಯನ್ನು ತುಮಕೂರು ಕೊವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದರೊಂದಿಗೆ ಮಹಿಳೆಯ ಮಕ್ಕಳು, ಗಂಡ, ತಂದೆ ಹಾಗೂ ಅಣ್ಣನನ್ನು ತುಮಕೂರು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮಹಿಳೆ 50 ಜನ ಪ್ರಥಮ ಹಂತದ ಸಂಪರ್ಕ ಹಾಗೂ 70 ಜನ ದ್ವಿತೀಯ ಹಂತದ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಪ್ರಥಮ ಸಂಪರ್ಕದಲ್ಲಿದ್ದವರನ್ನು ಕೊರಟಗೆರೆ ತಾಲ್ಲೂಕಿನ ರೆಡ್ಡಿಕಟ್ಟೆಬಾರೆ ಮುರಾರ್ಜಿ ವಸತಿಶಾಲೆ ಹಾಗೂ ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಹಂತದ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಮಹಿಳೆ ಕೆಲಸ ಮಾಡುತ್ತಿದ್ದ ತೋಟದ ಮಾಲೀಕ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಗಿಂದ್ಹಾಗೆ ತೋಟಕ್ಕೆ ಬಂದು ಹೋಗುತ್ತಿದ್ದರಿಂದ ಮಹಿಳೆಗೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ.
ಸೋಂಕಿತ ಮಹಿಳೆ ಕತ್ತಿನಾಗೇನಹಳ್ಳಿಯ ಮಹಿಳಾ ಸಂಘದ ಹಣ ಕಟ್ಟಲು ಬಂದಿದ್ದ ವೇಳೆ ಸಂಘದ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.