Friday, November 22, 2024
Google search engine
Homeಜನಮನಕೊರೊನಾ ಅಲ್ಲ, ಮಾಹಿತಿಮಾರಿಯ ರುದ್ರ ನರ್ತನ

ಕೊರೊನಾ ಅಲ್ಲ, ಮಾಹಿತಿಮಾರಿಯ ರುದ್ರ ನರ್ತನ

ನಾಗೇಶ ಹೆಗಡೆ


‘ಝೋನರಿಸಂ’ ಎಂದರೇನು ಗೊತ್ತೆ? ಸತ್ಯವನ್ನೇ ಹೇಳಿ ದಾರಿತಪ್ಪಿಸುವುದು!
1997ರಲ್ಲಿ ಅಮೆರಿಕದ ಹೈಸ್ಕೂಲ್ ಹುಡುಗನೊಬ್ಬ ಅಂದಿನ ವಿಜ್ಞಾನ ಸ್ಪರ್ಧೆಗೆಂದು ಒಂದು ಉಪನ್ಯಾಸ ಕೊಟ್ಟ. DHMO ಎಂಬ ರಾಸಾಯನಿಕ ವಸ್ತು ಅದೆಷ್ಟು ಅಪಾಯಕಾರಿ ಎಂಬುದನ್ನು ವಿವರಿಸಿದ. ಈ ಕೆಮಿಕಲ್ ನಿಂದಾಗಿ ಅಮೆರಿಕದ ಸಾವಿರಾರು ಜನರು ಪ್ರತಿ ವರ್ಷವೂ ಸಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಾವಿನಂಚಿಗೆ ಬಂದವರ ಕ್ಯಾನ್ಸರ್ ಗಡ್ಡೆಯಲ್ಲೂ ಅದು ಪತ್ತೆಯಾಗಿದೆ; ಆಕಾಶದಿಂದ ಸುರಿಯುವ ಆಸಿಡ್ ಮಳೆಯಲ್ಲೂ ಅದು ಕಂಡುಬಂದಿದೆ ಎಂದ.

DHMO ಸೋಂಕಿದರೆ ಕಬ್ಬಿಣ ಮತ್ತಿತರ ಕೆಲವು ಲೋಹಗಳು ಸುಟ್ಟುಹೋಗುತ್ತವೆ. ನೀವು ಅದರ ಕಣಗಳನ್ನು ನಿಷ್ಕಾಳಜಿಯಿಂದ ಸೇವಿಸಿದರೆ ಹೊಟ್ಟೆ ಉಬ್ಬರಿಸಿ ಬೆವರು ಕಿತ್ತು ಬರುತ್ತದೆ, ಮೂತ್ರವಿಸರ್ಜನೆಗೆ ಓಡಬೇಕಾಗುತ್ತದೆ.

ಅದು ನಿಮ್ಮನ್ನು ಸುಡಬಹುದು. ಅಷ್ಟೇಕೆ, ಅದರ ಹಬೆ ನಮ್ಮ ಶ್ವಾಸಕೋಶಕ್ಕೆ ತುಸು ದೊಡ್ಡ ಪ್ರಮಾಣದಲ್ಲಿ ಹೊಕ್ಕರೆ ಸಾವು ನಿಶ್ಚಿತ. ಚಟದಂತೆ ಅದನ್ನೇ ಅವಲಂಬಿಸಿದವರು, ಕೊನೆಕೊನೆಗೆ ಪೂರೈಕೆ ನಿಂತರೆ ಬದುಕುವುದೇ ಕಷ್ಟವಾಗುತ್ತದೆ. ನಮ್ಮ ದೇಶದ ಎಲ್ಲ ಕೆರೆಯಲ್ಲೂ ಅದು ಕಂಡುಬಂದಿದೆ. ಸರೋವರ, ನದಿಗಳಲ್ಲಿ ಅಷ್ಟೇ ಏಕೆ, ನಲ್ಲಿಯಲ್ಲೂ ಅದು ಪತ್ತೆಯಾಗಿದೆ….

ಅಷ್ಟೊಂದು ಬಗೆಯ ಸಾವುನೋವಿಗೆ ಕಾರಣವಾಗಬಲ್ಲ ಆ DHMO ರಸಾಯನ ಸಂಯುಕ್ತದ ಪೂರ್ಣ ಹೆಸರು dihydrogen monoxide.

ಆತ ಹೇಳಿದ್ದೆಲ್ಲವೂ ವೈಜ್ಞಾನಿಕ ಸತ್ಯವೇ ಆಗಿತ್ತು. ಅದರಲ್ಲಿ ಯಾವುದೂ ಉತ್ಪ್ರೇಕ್ಷೆ ಇರಲಿಲ್ಲ. Nathan Zohner ನಾಥಾನ್ ಝೋನರ್ ಎಂಬ ಹೆಸರಿನ ಆ ಹುಡುಗ ತನ್ನ ಉಪನ್ಯಾಸವನ್ನು 50 ವಿದ್ಯಾರ್ಥಿಗಳ ಕ್ಲಾಸಿನಲ್ಲಿ ಮಂಡಿಸಿ, ಕೊನೆಗೆ ಇಂಥ ಅಪಾಯಕಾರಿ ಕೆಮಿಕಲ್‌ಗೆ ನಿಷೇಧ ಹಾಕಬೇಕೊ ಬೇಡವೊ ಎಂದು ಪ್ರಶ್ನಿಸಿದ.
43 ಮಕ್ಕಳು (86%) ‘ನಿಷೇಧಿಸಬೇಕು’ ಎಂದರು.

ತಮಾಷೆ ಏನೆಂದರೆ, ಆ ರಸಾಯನ ಸಂಯುಕ್ತಕ್ಕೆ H2O ಅಥವಾ ಸರಳ ಇಂಗ್ಲಿಷ್ನಲ್ಲಿ ವಾಟರ್ ಎನ್ನುತ್ತಾರೆ. ಕನ್ನಡದಲ್ಲಿ ಅದು ನೀರು! ಎರಡು ಜಲಜನಕ ಮತ್ತು ಒಂದು ಆಮ್ಲಜನಕದ ಅಣುಗಳಿರುವ ಸಂಯುಕ್ತವಸ್ತು ಅದು. ಹಾಗಾಗಿ ಅದನ್ನು ಡೈಹೈಡ್ರೊಜೆನ್‌ ಮೊನಾಕ್ಸೈಡ್‌ ಎಂತಲೂ ಕರೆಯಬಹುದು.

ಈಗ ಮತ್ತೊಮ್ಮೆ ಆ ಹುಡುಗ ಹೇಳಿದ್ದೆಲ್ಲವನ್ನೂ ಓದಿ. ಅವೆಲ್ಲವೂ ಸತ್ಯ ತಾನೆ?

ಈ ನೈಜ ಘಟನೆಯ ಬಗ್ಗೆ Washington Post ಪತ್ರಿಕೆಗೆ ಜೇಮ್ಸ್ ಗ್ಲಾಸ್ಮನ್ ಎಂಬಾತ ಬರೆದ. ಸುತ್ತುಬಳಸಿದ ಸತ್ಯದ ಮಾತುಗಳಿಂದಲೇ ದಾರಿ ತಪ್ಪಿಸುವ ಅಥವಾ ತೀರ ಸುಲಭವಾಗಿ ಮೋಸಗೊಳಿಸುವ ಈ ತಂತ್ರಕ್ಕೆ ಆತ ‘ಝೋನರಿಸಂ’ ಎಂದು ಆ ಝೋನರ್ ಹುಡುಗನ ಹೆಸರನ್ನೇ ಇಟ್ಟ.

ಹಾಗೆ ನೋಡಿದರೆ, ಇದು ಝೋನರ್‌ನ ಒರಿಜಿನಲ್‌ ಕಾಪಿರೈಟ್ ಐಡಿಯಾ ಏನಲ್ಲ. 1983ರಲ್ಲಿ ಅಮೆರಿಕದ ಮಿಶಿಗನ್ ರಾಜ್ಯದ Durand Express ಎಂಬ ವಾರಪತ್ರಿಕೆಯಲ್ಲಿ ಇದು ಮೊದಲು ದಾಖಲಾಗಿತ್ತು. DHMOದಿಂದಾಗುವ ಎಲ್ಲ ಅಪಾಯಗಳನ್ನೂ ಪಟ್ಟಿಮಾಡಿತ್ತು. “…inhalation of this chemical “nearly always results in death,” ಎಂದು ಕೂಡ ಬರೆದಿತ್ತು. ಅದು ಏಪ್ರಿಲ್ 1ರ ಮೂರ್ಖರ ದಿನದಂದು ಪ್ರಕಟವಾಗಿದ್ದರಿಂದ ಜಾಣರು ಅದನ್ನೊಂದು ತಮಾಷೆ ಎಂಬಂತೆ ಓದಿಕೊಂಡರು.

ಯಾಕೊ, ಕೊರೊನಾ ಕುರಿತಂತೆ ದಿನನಿತ್ಯದ ‘ಭಯಾನಕ’ ವರದಿಗಳನ್ನು ಗ್ರಹಿಸುವಾಗಲೆಲ್ಲ ಝೋನರಿಸಂ ನೆನಪಿಗೆ ಬರುತ್ತಿದೆ. ಸತ್ಯವನ್ನು ಹೇಳುತ್ತಲೇ ಯಾರೆಲ್ಲ ನಮ್ಮ ದಾರಿ ತಪ್ಪಿಸುತ್ತಾರೆ! ವೈರಸ್ಸು, ಬ್ಯಾಕ್ಟೀರಿಯಾ ಸದಾಕಾಲ ನಮ್ಮೊಂದಿಗೆ ಇವೆ. ಉಪಕಾರಿ ವೈರಸ್‌ಗಳು ತುಂಬ ಇವೆ. ನಮ್ಮ ಕಫ, ಸಿಂಬಳದಲ್ಲೇ ಅವಿತಿರುವ ವೈರಸ್ ಬಗ್ಗೆ ಗೊತ್ತೆ? ಅದು ನಮಗೆ ಅಪಾಯ ತರಬಲ್ಲ ಬ್ಯಾಕ್ಟೀರಿಯಾಗಳನ್ನು ಅಲ್ಲೇ ಹಿಡಿದು ನುಂಗಿಹಾಕುತ್ತಿರುತ್ತದೆ. ಅದಕ್ಕೆ ಬ್ಯಾಕ್ಟೀರಿಯಾಫೇಜಿಸ್ ಎನ್ನುತ್ತಾರೆ. ಅದರ ಅರ್ಥವೇ ‘ಬ್ಯಾಕ್ಟೀರಿಯಾವನ್ನು ನುಂಗುವ’ ವೈರಸ್ ಅಂತ.

ಈಗ ಈ ನುಂಗುಬಾಕ ವೈರಸ್‌ಗಳನ್ನು (ಫೇಜಿಸ್‌ಗಳನ್ನು) ಅಷ್ಟಿಷ್ಟು ಬದಲಾಯಿಸಿ ಔಷಧವನ್ನಾಗಿ ಬಳಸಲಾಗುತ್ತಿದೆ. ಬೇರೆ ಗತಿ ಇಲ್ಲ! ಈಗೀಗ ಬಹಳಷ್ಟು ಆಂಟಿಬಯಾಟಿಕ್ ಔಷಧಗಳು ಯೂಸ್‌ಲೆಸ್ ಆಗುತ್ತಿವೆ; ಏಕೆಂದರೆ ಅವನ್ನೇ ಜಾಸ್ತಿ ಬಳಸಿ ಬಳಸಿ, ಬ್ಯಾಕ್ಟೀರಿಯಾಗಳೇ ಪ್ರತಿರೋಧ ಬೆಳೆಸಿಕೊಂಡು ಬಲಾಢ್ಯ ಆಗಿವೆ. ಅಂಥವುಗಳನ್ನು ಬಗ್ಗುಬಡಿಯಲು ಹೀಗೆ ಫೇಜಿಸ್‌ಗಳನ್ನು ದುಡಿಸಿಕೊಳ್ಳಲಾಗುತ್ತಿದೆ.

ಮಕ್ಕಳಿಗೆ ವೈರಸ್‌ಗಳು ದಾಳಿ ಮಾಡುವುದು ಒಳ್ಳೆಯದೆಂದೇ ವೈದ್ಯವಿಜ್ಞಾನಿಗಳು ಹೇಳುತ್ತಾರೆ. ಅವು ಎಳೆಯರಲ್ಲಿ ರೋಗ ನಿರೋಧಕ ಶಕ್ತಿಯನ್ನು (ರೋ.ಶ.) ಹೆಚ್ಚಿಸುತ್ತವೆ. ಮತ್ತೆ ಕೆಲವು ವೈರಸ್‌ಗಳು ನಮ್ಮ ದೇಹದೊಳಗೆ ಸೇರಿದ, ರೋಗಕಾರಕ ವೈರಸ್‌ಗಳನ್ನು ಬಗ್ಗುಬಡಿಯುತ್ತವೆ.

ಪೆಗಿವೈರಸ್ ಎಂಬುದೊಂದಿದೆ. ಅದು ನಮ್ಮೊಳಗಿದ್ದರೂ ನಮಗೆ ಏನೂ ಅಪಾಯ ಉಂಟುಮಾಡುವುದಿಲ್ಲ. ಆದರೆ ಆ ವೈರಸ್ ಇದ್ದವರಿಗೆ ಏಡ್ಸ್ ರೋಗ ಬಂದಿದ್ದರೆ ಅವರು ದೀರ್ಘ ಕಾಲ ಬದುಕುತ್ತಾರೆ ಎನ್ನುವುದು ಗೊತ್ತಾಗಿದೆ.

ರೋಗಕಾರಕ ವೈರಸ್‌ಗಳಲ್ಲಿ ತುಂಬ ಕ್ರೂರವಾದವೂ ಇವೆ. ಎಬೊಲಾ, ಝೀಕಾ ಅಂಥವು. ಆದರೆ ಕೊರೊನಾ ವೈರಸ್ ಅಷ್ಟೇನೂ ಭೀಕರ ಅಲ್ಲ. ಆರೋಗ್ಯವಂತ ವ್ಯಕ್ತಿಗಳಿಗೆ ಅದು ಜಾಸ್ತಿ ತೊಂದರೆ ಕೊಡುವುದಿಲ್ಲ. ಈಚೆಗೆ ನಮ್ಮ ದೇಶದಲ್ಲೇ ನಡೆದ ಸಮೀಕ್ಷೆಯ ಪ್ರಕಾರ ಶೇಕಡಾ 22ರಷ್ಟು ಜನರಿಗೆ ವೈರಸ್ ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಆದರೆ ಅವರ ರಕ್ತದಲ್ಲಿ ಬಡಿದಾಟದ ಕುರುಹುಗಳು ಕಂಡುಬಂದಿವೆ.

ಅಂಥವರ ದೇಹದಲ್ಲಿ ಕೊರೊನಾ ಥೇಟ್‌ ಬೆಕ್ಕಿನ ಮರಿಯಂತೆ ತೆಪ್ಪಗೆ ಕೂತಿರುತ್ತದೆ. ತನ್ನ ಸ್ವಭಾವವನ್ನೇ ಮರೆತು!

ಕೊರೊನಾದ ಸ್ವಭಾವ ಏನು ಹೇಳಿ? ನಮ್ಮ ಗಂಟಲು-ಮೂಗಿನಲ್ಲಿ ತುರಿಕೆ ಉಂಟುಮಾಡಿ ‘ಆಕ್ಷೀ…’ ಎಂದು ಸೀನುವಂತೆ ಮಾಡುವುದು. ಆ ಮೂಲಕ ನಮ್ಮ ದೇಹದಿಂದ ತಾನೇ ಹನಿರೂಪದಲ್ಲಿ ಸಿಡಿದು ಆಚೆಗಿನ ಇನ್ನೊಬ್ಬರ ದೇಹಕ್ಕೆ ಹೋಗುವುದು. ಹಾಗೆ ಮಾಡುವ ಮೂಲಕ ಅದು ತನ್ನ ಪ್ರಸಾರ ಸಂಖ್ಯೆಯನ್ನು (ಟಿಆರ್ಪಿಯನ್ನು ಎನ್ನಿ!) ಹೆಚ್ಚಿಸಿಕೊಳ್ಳುತ್ತದೆ.

ಗಟ್ಟಿ ಮನುಷ್ಯರಲ್ಲಿ ಹೊಕ್ಕ ಕೊರೊನಾ ಆ ಗುಣವನ್ನೇ ಕಳೆದುಕೊಂಡು ತೆಪ್ಪಗೆ ಕೂತಿರುತ್ತದೆ. ಯಾಕೊ ಗೊತ್ತಿಲ್ಲ.

ಸಾಮಾನ್ಯ ನೆಗಡಿಗೆ ಕಾರಣವಾಗುವ ಮಾಮೂಲು ವೈರಸ್ ಕೂಡ ದುರ್ಬಲರನ್ನು/ಅತಿವೃದ್ಧರನ್ನು ಬಲಿ ತೆಗೆದುಕೊಳ್ಳುತ್ತದೆ. ಪ್ರತಿ ವರ್ಷ 12-15 ಸಾವಿರ ಜನರು ಇಂಥ ಮಾಮೂಲು ನೆಗಡಿ ವೈರಸ್ಸಿನಿಂದ ಸಾಯುತ್ತಾರೆಂದು ಡಾ. ಬಿ.ಎಂ. ಹೆಗ್ಡೆ ಹೇಳುತ್ತಾರೆ. ಅಂಥ ಸಾವು ನಮ್ಮ ಸುತ್ತಮುತ್ತ ಸಂಭವಿಸಿದರೂ ನಾವು ಗಮನಿಸಿರುವುದಿಲ್ಲ ಅಷ್ಟೆ. ‘ಹುಷಾರಿರಲಿಲ್ಲ/ವಯಸ್ಸಾಗಿತ್ತು’ ಎಂದುಕೊಳ್ಳುತ್ತೇವೆ.

ಎಷ್ಟೊಂದು ಹಿರಿಯ ನಾಗರಿಕರು ಹೀಗೆ ಸಾವಪ್ಪುತ್ತಾರೆ. ಪದ್ಮಭೂಷಣ ಡಾ. ಎಚ್ ನರಸಿಂಹಯ್ಯ ಹೀಗೆಯೇ ಕಾಲವಶರಾದರು. ಶ್ವಾಸಕೋಶದ ಸೋಂಕಿನಿಂದಲೇ ಸಾವಪ್ಪಿದ ಹಿರಿಯರು ನಿಮಗೂ ಗೊತ್ತಿರಬಹುದು. ಆ ಬಗೆಯ ನೆಗಡಿಗೆ ಕಾರಣವಾಗುವುದೂ ಕೊರೊನಾ ವೈರಸ್ ಎಂತಲೇ 1980ರ ದಶಕದಲ್ಲೇ ಮಿತ್ರ ಕೊಳ್ಳೇಗಾಲ ಶರ್ಮ ‘ತರಂಗ’ದಲ್ಲಿ ಲೇಖನ ಬರೆದಿದ್ದರು. ಈಗಿನ ನಾವೆಲ್ ಕೊರೊನಾ ಅದರ ಹೊಸರೂಪ. ತುಸು ಜಾಸ್ತಿ ಅಂಟುಗುಣ ಇದಕ್ಕಿದೆ ಮತ್ತೇನಿಲ್ಲ. ಇದಕ್ಕೆ ಹೆದರಿಕೊಂಡರೆ ದೇಹದ ರೋ.ಶ. ಕಡಿಮೆಯಾಗಿ ಕೋವಿಡ್ ಉಗ್ರವಾಗುತ್ತದೆ. ಈಗ ಎಲ್ಲ ತಜ್ಞರೂ ಅದನ್ನೇ ಹೇಳುತ್ತಿದ್ದಾರೆ.

ಹೆದರಿಕೆಯನ್ನು ಹೆಚ್ಚಿಸುವ ಮಾಧ್ಯಮಗಳು ತುಸು ಜೋರಾಗಿ ‘ಝೋನರಿಸಂ’ ತಮ್ಮಟೆ ಬಾರಿಸುತ್ತಿವೆ ಎಂದು ನಿಮಗೂ ಅನ್ನಿಸುತ್ತಿಲ್ಲವೆ?

ಕೋವಿಡ್ ನಿಂದ (ಅಥವಾ ಅದರ ಭಯದಿಂದ) ತುಸು ಜಾಸ್ತಿ ಜನ ಸಾಯುತ್ತಿದ್ದಾರೆ. ನಾವೆಲ್ಲರೂ ಎಚ್ಚರವಾಗಿರಬೇಕು; ಮುಖವಾಡ ಧರಿಸಿ ಓಡಾಡಬೇಕು (ಅದರಿಂದ ವಾಯುಮಾಲಿನ್ಯದ ಪರಿಣಾಮವೂ ತಗ್ಗುತ್ತದೆ); ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು (ಅದರಿಂದ ಕ್ಯೂಗಳಲ್ಲಿನ ನೂಕು ನುಗ್ಗಲೂ ತಪ್ಪುತ್ತದೆ); ಕೈಕಾಲು ಮುಖ ತೊಳೆಯುತ್ತಿರಬೇಕು (ಅದನ್ನು ಪೂರ್ವಿಕರು ಹಿಂದೆಯೇ ಹೇಳಿದ್ದಾರೆ). ಸಣ್ಣಪುಟ್ಟ ನೆಗಡಿ-ಕೆಮ್ಮಿಗೆಲ್ಲ ಡಾಕ್ಟರ್ ಬಳಿ ಓಡುವ, ಇಲ್ಲವೆ ಆಂಟಿಬಯಾಟಿಕ್ ನುಂಗುವ ಅಭ್ಯಾಸ ಇರಬಾರದು (ಹಿಂದೆಲ್ಲ ಆ ಅಭ್ಯಾಸ ಇರಲಿಲ್ಲ). ಮನೆಯಲ್ಲೇ ವಿಶ್ರಾಂತ ಸ್ಥಿತಿಯಲ್ಲಿರಬೇಕು.

ಮನೆಯಲ್ಲೇ ಕೋವಿಡ್ ಕಾಯಿಲೆಯಿಂದ ಗತಿಸಿದವರ ಅಂಕಿಸಂಖ್ಯೆಗಳೇ ಪ್ರಕಟವಾಗುತ್ತಿಲ್ಲ; ಹಾಗೆ ಮನೆಯಲ್ಲಿ ಕೋವಿಡ್‌ನಿಂದ ಸಾಯುವವರು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಯಾಕೆ ಹೇಳಿ? ನಮ್ಮ ಆಸ್ಪತ್ರೆಗಳೆಂದರೆ ನಾನಾ ಬಗೆಯ ವೈರಸ್ಸುಗಳ, ಬ್ಯಾಕ್ಟೀರಿಯಾಗಳ ಸಂತೆ.

ಈಗ ಪ್ರಚಲಿತವಿರುವ ಅಂಕಿಸಂಖ್ಯೆಗಳ ಬಗ್ಗೆ ನನಗೆ ನಾನಾ ಬಗೆಯ ಸಂದೇಹ ಕಾಡುತ್ತಿವೆ. ನಮ್ಮ ದೇಶದಲ್ಲಿ ಕೋವಿಡ್ ನಿಂದ ಗತಿಸಿದವರ ಸಂಖ್ಯೆ 30 ಸಾವಿರ ಮುಟ್ಟುತ್ತಿದೆಯಂತೆ. ಇವರಲ್ಲಿ ಸಾಮಾನ್ಯ ನೆಗಡಿಯಿಂದ ಸತ್ತವರ (ಈ ನಾಲ್ಕು ತಿಂಗಳಲ್ಲಿ 5 ಸಾವಿರ ಜನ) ಸಂಖ್ಯೆಯನ್ನು ವಜಾ ಮಾಡಬೇಕೋ ಬೇಡವೊ?

ನಮ್ಮ ದೇಶದಲ್ಲಿ ಸರಾಸರಿ ಪ್ರತಿವರ್ಷ ಪ್ರತಿ ಸಾವಿರ ಜನರಲ್ಲಿ ಏಳು ಜನರು ಸಾಯುತ್ತಾರೆ. ಆ ಅಂದಾಜು ಲೆಕ್ಕದ ಪ್ರಕಾರ ಬೆಂಗಳೂರಿನಲ್ಲಿ ನಾಲ್ಕು ತಿಂಗಳಲ್ಲಿ ಏನಿಲ್ಲೆಂದರೂ 15-20 ಸಾವಿರ ಜನರು ಗತಿಸಿರಬೇಕು. ಅವರನ್ನೆಲ್ಲ ಬದಿಗಿಟ್ಟು ಕೊರೊನಾದಿಂದ 750 ಜನರ ಸಾವನ್ನಷ್ಟೇ ಎತ್ತಿ ಹೇಳಲಾಗುತ್ತಿದೆ. ಹಾಗಿದ್ದರೆ ಇವರೆಲ್ಲ ಬರೀ ಕೋವಿಡ್19ರಿಂದ ಸತ್ತಿದ್ದಾರೆಯೆ? ಹೃದಯಾಘಾತ, ಕಿಡ್ನಿವೈಫಲ್ಯ, ಕ್ಯಾನ್ಸರ್ ಇತ್ಯಾದಿಗಳಿಂದಾಗಿ ಗತಿಸಿದವರು ಇದರಲ್ಲಿ ಸೇರಿದ್ದಾರೆಯೆ?

ಅವರ ದೇಹದಲ್ಲಿ ಕೊರೊನಾ ಯಾವ ಹಾನಿಯನ್ನೂ ಮಾಡದೆ ಗಪ್‌ಚಿಪ್ ಕೂತಿದ್ದರೂ ಅದನ್ನೇ ಅಪರಾಧಿ ಎಂದು ಬಿಂಬಿಸಬೇಕೆ? ಅಂಥವರನ್ನೂ ಕೊರೊನಾ ‘ಮೃತ್ಯುಪಾಶ’ದಲ್ಲಿ ಬಂಧಿಸಿ, ಅನಾಥ ಶವವಾಗಿ ಬಿಸಾಕಿದ್ದು ಯಾವ ಶಕ್ತಿ ಗೊತ್ತೆ? ಇದೇ ಝೋನರಿಸಂ.

ಟಿವಿ, ಕಂಪ್ಯೂಟರ್, ಮೊಬೈಲ್ ಪರದೆಗಳ ಮೇಲೆ ಗಂಟೆಗಂಟೆಗೂ ಯಾರು ಅಂಕಿಸಂಖ್ಯೆಗಳನ್ನು ಸುರಿಯುತ್ತಿದ್ದಾರೊ, ಅವು ಎಲ್ಲಿಂದ ಬಂತೆಂತಲೂ ಯಾರೂ ಹೇಳುತ್ತಿಲ್ಲ. (ಈ ಲೇಖನದ ಆರಂಭದಲ್ಲಿ ಕೊಟ್ಟ ಕಾರ್ಟೂನನ್ನು ಮೀಮ್‌ me.me ಎಂಬ ವೆಬ್‌ಸೈಟಿನಿಂದ ಪಡೆದಿದ್ದು. ಮೀಮ್‌ ಅಂದರೆ ಮಿದುಳಿಗೆ ವಿಚಾರವೈರಸ್‌ಗಳನ್ನು ತುಂಬುವುದು).
ಅಂಕಿಸಂಖ್ಯೆ ವಿಚಾರ ಬಂದಾಗ ಕಾಝಿರಂಗಾ ಉದಾಹರಣೆ ನೋಡಿ. ಅಲ್ಲಿ ಮುಳುಗಡೆ ಆಗಿದ್ದರಿಂದ 116 ವನ್ಯಜೀವಿಗಳು, ಅದರಲ್ಲೂ 13 ಘೇಂಡಾಗಳು ಸತ್ತವೆಂದು ನಿನ್ನೆ ಟಿವಿಗಳಲ್ಲಿ ಚರ್ಚೆ ನಡೆಯಿತು. ಆದರೆ ಸತ್ತ ಪ್ರಾಣಿಗಳ ಲೆಕ್ಕ ಹೇಗೆ ಸಿಕ್ಕಿತು? ಸುಮಾರು 850 ಚದರ ಕಿ.ಮೀ. ವಿಸ್ತೀರ್ಣದ ಆ ಉದ್ಯಾನದ ಬಹುಭಾಗ ನೀರಲ್ಲಿ ಮುಳುಗಿದ್ದಾಗ ಯಾರು ಡ್ರೋನ್ ಮೇಲೆ ಹೋಗಿ ಇಷ್ಟು ಶೀಘ್ರವಾಗಿ ಅಂಕಿಸಂಖ್ಯೆಗಳನ್ನು ಎತ್ತಿ ತಂದರು? ಡ್ರೋನ್‌ನಲ್ಲಿ ಅವು ಕಾಣುತ್ತವೆಯೆ? ಎಷ್ಟು ಸಾವಿರ ಬೋಟ್‌ಗಳಲ್ಲಿ ಅದೆಷ್ಟು ಲಕ್ಷ ಮುಳುಗುವೀರರು, ಗಣತಿ ಸೈನಿಕರು ಹೋಗಿ ಸಮೀಕ್ಷೆ ಮಾಡಿದರೊ? ಯಾರೂ ಪ್ರಶ್ನೆ ಮಾಡುತ್ತಿಲ್ಲ.

ಆ ಅಷ್ಟೂ ಪ್ರಾಣಿಗಳು ಸತ್ತಿದ್ದು ಹೇಗೆ ಗೊತ್ತೆ? ನೆರೆಯಿಂದಲ್ಲ, ಝೋನರಿಸಂನಿಂದ.
ಕೊರೊನಾ ಸೋಂಕುಮಾರಿ 50 ವರ್ಷಗಳ ಹಿಂದೆ ಬಂದಿತ್ತೆಂದು ಊಹಿಸಿಕೊಳ್ಳಿ. ಆಗ ಟಿವಿ ಇರಲಿಲ್ಲ; ಕಂಪ್ಯೂಟರ್ ಇರಲಿಲ್ಲ. ಕ್ಷಣಕ್ಷಣದ ಗ್ರಾಫ್ ಇರುತ್ತಿರಲಿಲ್ಲ. ಹಾಗಾಗಿ ಈ ಮಟ್ಟದ ಸಾಮಾಜಿಕ ಗಾಬರಿ, ಪ್ರಧಾನಿಯವರ ‘ಘಂಟಾ’ಘೋಷ ಇರುತ್ತಿರಲಿಲ್ಲ; ಬಾಲ್ಕನಿದೀಪ ಇರುತ್ತಿರಲಿಲ್ಲ.

ಆಗೆಲ್ಲ ಕೊರೊನಾ ಸಾಂಕ್ರಾಮಾರಿ ತಾನೇ ಮುಸುಕು ಹಾಕಿಕೊಂಡು ಗೂಢಚಾರಿಣಿ ಥರಾ ಬರಬೇಕಿತ್ತು ತಾನೆ? ಈ ಥರಾ ಲಾಕ್‌ಡೌನ್ ಮುಚ್ಚಳ ಹಾಕೋದು, ತೆರೆಯೋದು, ಕಾರ್ಮಿಕರು ಹೌಹಾರಿ ಮನೆಯ ಹಾದಿ ಹಿಡಿಯುವುದು -ಯಾವುದೂ ಇರುತ್ತಿರಲಿಲ್ಲ.

ಮಾರಿಗೆ ಬೆದರಿ ಇಷ್ಟೊಂದು ಆತ್ಮಹತ್ಯೆಗಳು, ಹೃದಯಾಘಾತಗಳು ನಡೆಯುತ್ತಿರಲಿಲ್ಲವೇನೊ. ಹೆಚ್ಚೆಂದರೆ ಪ್ರತಿ ಮನೆಯ ಬಾಗಿಲ ಮೇಲೆ ‘ನಾಳೆ ಬಾ’ ಎಂಬ ಸೀಮೆಸುಣ್ಣದ ಬರಹ ಇರುತ್ತಿತ್ತು. ಗತಿಸಿದ ಯಾರೂ ಹೀಗೆ ಅನಾಥವಾಗಿ, statiಸ್ಟಿಕ್ಕಾಗಿ ಹೋಗುತ್ತಿರಲಿಲ್ಲ. ಏಕೆಂದರೆ ಆಗ ಝೋನರಿಸಂ ಹಾವಳಿ ಅಷ್ಟಾಗಿರಲಿಲ್ಲ.

ಈಗ ಕಾಣುತ್ತಿರುವ ವಿಕಾರಗಳೆಲ್ಲ ಮಾಹಿತಿಕ್ರಾಂತಿಯ ರುದ್ರನರ್ತನವೇ ತಾನೆ?

ಮನುಕುಲವನ್ನು ಕಂಗೆಡಿಸಿದ ನಿಜವಾದ ಸಾಂಕ್ರಾಮಿಕ ಅದು -ಮಾಹಿತಿಮಾರಿ! ಅದೇ ಇಂದು ಕೊರೊನಾ ಸುನಾಮಿಯನ್ನು ಸೃಷ್ಟಿಸಿದೆ. ಲಕ್ಷಾಂತರ ಉದ್ಯಮಗಳು ನೆಲ ಕಚ್ಚಿವೆ. ಅದೆಷ್ಟೊ ಕೋಟಿ ಮಂದಿ ನೆಲೆ ಕಳೆದುಕೊಂಡಿದ್ದಾರೆ.
ಆದರೆ ಇಲೆಕ್ಟ್ರಾನಿಕ್ ಮಾಹಿತಿ ಉದ್ಯಮ (ICT) ಮೆಡಿಕಲ್ ಉದ್ಯಮ, ಮತ್ತು ಅದರ ಬಾಲ ಹಿಡಿದು ಪ್ಲಾಸ್ಟಿಕ್ ಉದ್ಯಮ ಸಿಕ್ಕಾಪಟ್ಟೆ ಮೇಲೇಳುತ್ತಿವೆ. ಅವಕ್ಕೆ ಭುಜಬಲ ಕೊಟ್ಟಿದ್ದು ಇದೇ ಝೋನರಿಸಂ.

ಈ ಮೂರೂ ಸೇರಿ ತೋಳೇರಿಸಿ ನಮ್ಮೆಲ್ಲರ ರಕ್ಷಕನ ವೇಷ ಧರಿಸಿ ನಿಂತಿವೆ.

ಜಗತ್ತಿನ ಏಳುನೂರು ಕೋಟಿ ಜನರ ತೋಳಿಗೆ ಸೂಜಿ ಚುಚ್ಚಿದ ನಂತರವೇ ಇವು ಹೊಸವೇಷ ತೊಡಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?