ಆನಂದ ಎಸ್.ಎನ್.
ಎಲೈ ಮಾನವ, ಎಚ್ಚರದಿಂದಿರು
‘ನಾನು’ ಎಂದು ಬೀಗುವುದನು ಬಿಡು
ನಿನ್ನ ನಾಶಕ್ಕೆ ಕಣ್ಣಿಗೆ ಕಾಣದ
ಒಂದು ಕ್ರಿಮಿ ಸಾಕು; ಇದನು ತಿಳಿದು ಬದುಕು !
ವಿಶ್ವದ ಮಾನವನ ಜೀವನ ಬಿಕ್ಕಟ್ಟಿನಲ್ಲಿದೆ
ಬುದ್ಧಿವಂತಿಕೆ, ಬೆಳವಣಿಗೆ ಎಲ್ಲಾ ಕೈಕೊಟ್ಟಿದೆ
ಗಾಳಿ ನೀರು ಬೆಳಕು ಭೂಮಿ ಮಲಿನಗೊಂಡಿದೆ
ಯುದ್ಧದ ದೊಡ್ಡ ದೊಡ್ಡ ಅಸ್ತ್ರಶಸ್ತ್ರಗಳ ಶಕ್ತಿ ನಿಷ್ಕ್ರಿಯವಾಗಿದೆ
ಮಾನವನ ಜೀವ ಉಳಿಸಲು ಟ್ಯೂಬ್ ಗಳೊಳಗೆ ಶೋಧ ನಡೆದಿದೆ
ಈಗ ಸುಮ್ಮನಿರುವ ಕಾಲ ಬಂದಿದೆ
ಕ್ರಿಯೆಯಂತೆ ನಿಷ್ಕ್ರಿಯತೆಯೂ ಒಂದಿದೆ
ಒಬ್ಬರಿಂದ ಒಬ್ಬರಿಗೆ ಹರಡುವ ರೋಗದ ಮಧ್ಯೆ
ಒಬ್ಬರು ಹಿಂದೆ ಸರಿದು ಸುಮ್ಮನಿದ್ದರೆ
ಸರಪಳಿ ಕಳಚುವುದು; ಮಾನವಕುಲವೇ ಉಳಿಯುವುದು !
ಧೈರ್ಯವಂತ ಅವಿವೇಕಿಗಳಾಗಬೇಡಿ
ನಿರ್ಲಕ್ಷ್ಯದಿಂದ ಎಗ್ಗಿಲ್ಲದೆ ಎಲ್ಲೆಂದರಲ್ಲಿ ನುಗ್ಗಬೇಡಿ
ಭೀತಿಯಿಂದ ತಪ್ಪು ಕೆಲಸ ಮಾಡಬೇಡಿ
ಹೆಚ್ಚು ಕೆಲಸ, ಪ್ರಯಾಣಗಳನ್ನೆಲ್ಲಾ ಮುಂದೂಡಿ
‘ನಾವು ವಾಹಕಗಳು’ ಎಂಬುದನ್ನು ಮರೆಯಬೇಡಿ !
ಸ್ನೇಹ, ನಿಕಟತೆ ಸ್ವಲ್ಪ ಸಮಯ ತಪ್ಪಿಸಿ
ಇತರರಿಂದ ದೂರವಿರಲು ಮನಸುಹೃದಯ ಒಪ್ಪಿಸಿ
ಮುನ್ನೆಚ್ಚರಿಕೆ ಎಂದರೆ ಸರಿಯಾದ ಕೆಲಸ ಮಾಡುವುದು
ಅದೆಂದರೆ, ಎಲ್ಲರಿಂದ ದೂರ ಕಾಯ್ದುಕೊಳ್ಳುವುದು !
ಇದು ಅಂತರ್ಮುಖವಾಗಿ ತಿರುಗುವ ಸಮಯ
ಇದು ಜೀವನವನ್ನು ಹತ್ತಿರದಿಂದ ನೋಡುವ ಸಮಯ
ನಮ್ಮ ಅಸ್ತಿತ್ವದ ದುರ್ಬಲ ಸ್ವರೂಪವನ್ನು ಅರಿತುಕೊಳ್ಳುವ ಸಮಯ
ಬದುಕಿನ ‘ಬಿಜಿ’ಯಿಂದ ಬಿಡುಗಡೆಗೊಂಡು ಕಣ್ಣು ಮುಚ್ಚಿ
ಕುಳಿತುಕೊಳ್ಳುವ ಸಮಯ; ‘ಸತ್ಯದರ್ಶನ’ ಮಾಡಿಕೊಳ್ಳುವ ಸಮಯ !