ರಂಗನಕೆರೆ ಮಹೇಶ್
ಕೊರೊನಾ ಮಹಾಮಾರಿಯಿಂದಲೂ ಪಾಠ ಕಲಿಯದಿದ್ದರೆ ಮುಂದೆ ದೇವರೇ ಗತಿ…..?ಈ ಮಾತನ್ನು ಬಹು ದುಂಖದಿಂದ ಹೇಳುತ್ತಿದ್ದೇನೆ…
ಏಕೆಂದರೆ ಮಾನವ ಪ್ರಕೃತಿಯ ಮೇಲೆ ಮಾಡುತ್ತಿರುವ ಮಾಡುತ್ತಿರುವ ಅನೈತಿಕ ಅತ್ಯಾಚಾರ ಇಂತಹದೊಂದು ಭಯ ಹುಟ್ಟಿಸಿದೆ. ಮಾನವ ತನ್ನ ಸ್ವಾರ್ಥಕ್ಕೊಸ್ಕರ ಮಾಡುತ್ತಿರುವ ಒಂದೊಂದು ಹೀನ ಕೃತ್ಯಗಳ ಪಟ್ಟಿ ದೊಡ್ಡದೇ ಆದೀತು.
ಅಂತಹ ಪಟ್ಟಿಗೆ ಸೇರ್ಪಡೆ ಗುಡ್ಡಗಳಿಗೆ ಬೆಂಕಿಯಿಡುವುದು. ಅದಕ್ಕೊಂದು ತಾಜಾ ಉದಾಹರಣೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬಹುತೇಕ ಗುಡ್ಡಗಳು ಹಗಲು-ರಾತ್ರಿಯೆನ್ನದೆ ಹೊತ್ತಿ ಉರಿಯುತ್ತಿರುವುದು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮದಲಿಂಗನ ಕಣಿವೆಯ ಗುಡ್ಡಗಳಿಂದ ಹಿಡಿದು ಬೋರನಕಣಿವೆ ಜಲಾಶಯ ಮಾರ್ಗವಾಗಿ ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕುಗಳ ಗಡಿ ಭಾಗದವರೆಗೆ ಗುಡ್ಡಗಳ ಸಾಲು ಇದೆ.
ಈ ಮಾರ್ಗದಲ್ಲಿ ನೂರಾರು ಗುಡ್ಡಗಳಿದ್ದು ಪ್ರತಿ ವರ್ಷ ಬೇಸಿಗೆ ಬಂತೆಂದರೆ ಸಾಕು ಬೆಂಕಿಗೆ ಆಹುತಿಯಾಗುತ್ತಿವೆ. ಸಣ್ಣ ಗುಡ್ಡಗಳಿಂದ ಹಿಡಿದು ದೊಡ್ಡ ಗಾತ್ರದ ಗುಡ್ಡಗಳಿಗೂ ಕರುಣೆಯಿಲ್ಲದೆ ಬೆಂಕಿ ಹಚ್ಚುತ್ತಿದ್ದಾರೆ.
ಬೆಂಕಿಯಿಂದ ಸಾವಿರಾರು ಸಸ್ಯ ಪ್ರಬೇಧಗಳು, ನೂರಾರು ಸಣ್ಣ ಪುಟ್ಟ ಜಾತಿಯ ಕಾಡುಪ್ರಾಣಿಗಳು, ಸರಿಸೃಪಗಳು ಮತ್ತು ಅವುಗಳ ಮೊಟ್ಟೆ ಮರಿಗಳು ಬೆಂಕಿಯಲ್ಲಿ ಬೆಂದು ಹೋಗುತ್ತಿವೆ. ಇವುಗಳ ಜತೆ ಅರಣ್ಯ ಇಲಾಖೆಯ ಮರಗಳು, ಪ್ರತಿ ವರ್ಷ ನೆಡುತ್ತಿರುವ ಸಸಿಗಳು ಬೆಂಕಿಯಲ್ಲಿ ನಲುಗಿ ಹೋಗುತ್ತಿವೆ.
ಇನ್ನೂ ಬಾದೆ ಹುಲ್ಲುಗಾವಲು ಸಂಪೂರ್ಣ ಸುಟ್ಟು ಕರಕಲಾಗುತ್ತಿದೆ. ಗುಡ್ಡಗಳಿಗೆ ಇಡುವ ಬೆಂಕಿಯಿಂದ ಕಾಡಂಚಿನಲ್ಲಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವ ರೈತರ ಮನೆಗಳು ಸಹ ಬೆಂಕಿಗೆ ನಾಶವಾಗುತ್ತಿವೆ.
ಗುಡ್ಡಗಳಿಗೆ ಬೆಂಕಿಯಿಡುವ ಪರಿಪಾಠ ಇಂದಿನದಲ್ಲವಾದರೂ ಅನಾದಿ ಕಾಲದಿಂದಲೂ ಬೆಂಕಿಯಲ್ಲಿ ಬೇಯುತ್ತಲೇ ಇವೆ. ಗುಡ್ಡಗಳಲ್ಲಿನ ಬಾದೆ ಹುಲ್ಲು ಮುಂಗಾರು ಮಳೆ ಬಿದ್ದ ತಕ್ಷಣ ಹುಲುಸಾಗಿ ಚಿಗುರುತ್ತದೆ ಎಂಬ ಮೂಢನಂಬಿಕೆಯಿಂದ ಕುರಿಗಾಹಿಗಳಾದರೆ, ಗುಡ್ಡಗಳಿಗೆ ಶಿಕಾರಿಗೆ ಹೋಗುವ ಬೇಟೆಗಾರರು, ಗುಡ್ಡಗಳ ಪಕ್ಕ ರಸ್ತೆಯಿದ್ದು ಜನರು ಸಂಚರಿಸುವ ವೇಳೆ ಧೂಮಪಾನಕ್ಕೆ ಬಳಸುವ ಬೆಂಕಿಯನ್ನು ನಂದಿಸದೆ ಎಸೆಯುವವರ ಪಾಲೂ ಇದೆ.
ಬಹು ಮುಖ್ಯವಾಗಿ ಗುಡ್ಡಗಳಿಗೆ ಬೆಂಕಿ ಬೀಳುವುದು ಗುಡ್ಡಗಳ ಸಮೀಪ ಕೃಷಿ ಭೂಮಿ ಹೊಂದಿರುವ ರೈತರಿಂದ ಎಂಬುದು ಗುಟ್ಟಾಗಿ ಉಳಿದಿಲ್ಲ. ಕಾಡುಪ್ರಾಣಿಗಳು ಜಮೀನಿಗೆ ಬಾರದಂತೆ ಹಾಕುವ ಬೆಂಕಿಯಿಂದ ಪ್ರಾರಂಭವಾಗುವ ರೈತರ ಆಸೆ ಒತ್ತುವರಿವರೆಗೂ ಹೋಗಿ ಬಿಡುತ್ತದೆ.
ನಮ್ಮ ರೈತರ ಭೂದಾಹ ಎಷ್ಟಿದೆಯೆಂದರೆ ಯಾರಿಗೂ ಕಾಣದಂತೆ ರಾತ್ರೋರಾತ್ರಿ ಸಾವಿರಾರು ಮರಗಳನ್ನು ಬೆಂಕಿಯಿಟ್ಟು ಸುಡುತ್ತಿದ್ದಾರೆ. ಒಮ್ಮೊಮ್ಮೆ ಕಣ್ಣಿಗೆ ಕಂಡರೂ ಮೂಕ ಪ್ರೇಕ್ಷಕರಾಗುವ ಸಂದಿಗ್ದ ಒದಗಿದೆ. ಗುಡ್ಡಗಳಿಗೆ ಇಡುವ ಬೆಂಕಿ ಕಾಡಿನ ನಾಶದ ಜತೆ ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂಬ ಅರಿವೆ ಇಲ್ಲದೆ ಜನರು ಅನಾಗರೀಕರಂತೆ ವರ್ತಿಸುತ್ತಾರೆ.
ನಾನು ಇಲ್ಲಿ ಯಾರನ್ನೂ ದೂಷಿಸುತ್ತಿಲ್ಲ. ಆದರೆ ಬೇಸಿಗೆ ಬಂತೆಂದರೆ ಹಗಲು-ರಾತ್ರಿಯೆನ್ನದೆ ಹೊತ್ತಿ ಉರಿಯುವ ಗುಡ್ಡಗಳನ್ನು ನೋಡಿದರೆ ಮಾನವನ ಅಂತ್ಯ ಸಮೀಪವಾಗುತ್ತಿರಬಹುದೇ ಎಂಬ ಅನುಮಾನ ಮೂಡುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಅನೇಕ ಸಂಘ-ಸಂಸ್ಥೆಗಳ ನೆರವಿನೊಂದಿಗೆ ನಮ್ಮೂರ ಸುತ್ತಮುತ್ತಲಿನ ಗುಡ್ಡಗಳಿಗೆ ಬೀಜದುಂಡೆ ಹಾಗೂ ಬೀಜ ಬಿತ್ತುವ ಕೆಲಸ ಮಾಡುತ್ತಾ ಬಂದಿದ್ದೇನೆ. ಪ್ರತಿ ವರ್ಷ ಮಳೆಗಾಲದಲ್ಲಿ ಬಿತ್ತಿದ ಬೀಜಗಳು ಹುಲುಸಾಗಿ ಬೆಳೆದು ಬೇಸಿಗೆ ಕಳೆಯುವುದರೊಳಗೆ ಸುಟ್ಟು ಕರಕಲಾಗುತ್ತಿವೆ.
ಪರಿಸರ ಸಮತೋಲನ ಮಾಡುವ ನನ್ನಂತಹ ನೂರಾರು ಪರಿಸರಾಕ್ತರ ಶ್ರಮ ನೀರಲ್ಲಿ ಹುಣಸೆ ತೊಳೆದಂತಾಗುತ್ತಿದೆ. ಮೊನ್ನೆ ಸ್ನೇಹಿತರೊಬ್ಬರು ಕರೆ ಗುಡ್ಡಗಳಿಗೆ ಬೆಂಕಿಯಿಡುವುದನ್ನು ಅರಣ್ಯ ಇಲಾಖೆ ತಪ್ಪಿಸುವಲ್ಲಿ ಸಂಪೂರ್ಣ ಸೋತಿದೆ ಎಂಬ ಆರೋಪ ಮಾಡಿ ಪತ್ರಿಕೆ ಸುದ್ದಿ ಬರೆಯಿರಿ ಎಂದು ಒತ್ತಾಯಿಸಿದರು.
ಆದರೆ ನನಗೀಗ ಜನರನ್ನು ದೂರಬೇಕೋ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳನ್ನು ದೂರಬೇಕೋ ಎಂಬ ದ್ವಂದ್ವ ಆರಂಭವಾಗಿದೆ. ಕೊನೆಗೆ ಗುಡ್ಡಗಳಿಗೆ ಇಡುವ ಬೆಂಕಿಯನ್ನು ತಪ್ಪಿಸಲು ಮುಂದೆ ದೇವರೇ ಯಾವುದಾರೂ ಮಾರಿ ರೂಪ ತಾಳಬಹುದೇನೋ… ಇಂದಿನ ವಿಶ್ವ ಭೂ ದಿನಕ್ಕೆ ಈ ಲೇಖನ ಅರ್ಪಣೆ.