ಮಹೇಂದ್ರಕೃಷ್ಣಮೂರ್ತಿ,ಸತೀಶ್
ತುಮಕೂರು/ಬೆಂಗಳೂರು: ಕೊರೊನಾ ಸೋಂಕಿತರು ಸ್ಥಿರವಾಗಿದ್ದಲ್ಲಿ ಹೋಂ ಐಸೋಲೇಷನ್ (ಮನೆಯಲ್ಲೇ ಪ್ರತ್ಯೇಕ ವಾಸ) ಇರಬೇಕೆಂದು ಸರ್ಕಾರ ಹೇಳುತ್ತಿದೆ. ಹೋಂ ಐಸೋಲೇಷನ್ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಆದರೆ ಹೋಂ ಐಸೋಲೇಷನ್ ಎಂಬುದು ಬಡವರ ಪಾಲಿಗೆ ಮರೀಚಿಕೆಯಾಗುತ್ತಿದೆ ಮಾತ್ರವಲ್ಲ ಪ್ರಾಣ ಕಳೆದುಕೊಳ್ಳುವ ರಹದಾರಿಯೂ ಆಗುತ್ತಿದೆ.
- ಹೋಂ ಐಸೋಲೇಷನ್. ಕೋವಿಡ್ ಕೇರ್ ಸೆಂಟರ್ ನಲ್ಲಿ ನಲ್ಲಿ ತೀವ್ರವಾಗಿ ಅಸ್ವಸ್ಥರಾದವರು, ಉಸಿರಾಟಕ್ಕೆ ತೊಂದರೆಯಾದವರಿಗೆ ತಕ್ಷಣಕ್ಕೆ ಆಸ್ಪತ್ರೆಗಳಲ್ಲಿ ವೆಡ್, ಆಕ್ಸಿಜನ್ ಸಿಗದೇ ಹೋಗುತ್ತಿರುವ ಕಾರಣದಿಂದಾಗಿ ಜನರು ಹೋಂ ಐಸೋಲೇಷನ್,ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಲು ಹೆದರುವಂತಾಗಿದೆ.
ಹೀಗಾಗಿಯೇ ಬಲಾಢ್ಯರು, ಶ್ರೀಮಂತರು, ರಾಜಕೀಯ, ಅಧಿಕಾರಶಾಹಿಯ ಸಂಪರ್ಕ ಇರುವವರು ಅಗತ್ಯ ಇಲ್ಲದಿದ್ದರೂ ಆಸ್ಪತ್ರೆಗಳಿಗೆ ಮುಂಜಾಗ್ರತಾ ಕ್ರಮವಾಗಿ ದಾಖಲಾಗುತ್ತಿದ್ದಾರೆ. ಇವರಿಗೆ ಬೆಡ್ ನೀಡುತ್ತಿರುವ ಕಾರಣ ಹೋಂ ಐಸೋಲೇಷನ್ ನಿಂದ ಬಂದ ತೀವ್ರ ಸಮಸ್ಯೆಯಲ್ಲಿರುವರಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ ಎಂದು ಹಲವು ವೈದ್ಯರು ಹೇಳುತ್ತಿದ್ದಾರೆ.
ತುಮಕೂರಿನ ಬನಶಂಕರಿಯ ಶ್ರೀನಿವಾಸ್ ಹೋಂ ಐಸೋಲೇಷನ್ ನಲ್ಲಿ ಇದ್ದವರು. ಉಸಿರಾಟದ ಸಮಸ್ಯೆ ಕಾರಣ ಅವರು ತುಮಕೂರು ಜಿಲ್ಲಾಸ್ಪತ್ರೆಗೆ ಬಂದರೂ ಅವರಿಗೆ ಬೆಡ್ ಸಿಗಲಿಲ್ಲ. ಸಿದ್ಧಾರ್ಥ ಆಸ್ಪತ್ರೆಗೆ ಹೋದರೂ ಅಲ್ಲೂ ಬೆಡ್ ಸಿಗದೇ ಕೊನೆಗೆ ಪ್ರಾಣವನ್ನೇ ಕಳೆದುಕೊಂಡರು. ಇಂಥ ಘಟನೆಗಳಿಂದಾಗಿ ಜನರು ಕೂಡಲೇ ಆಸ್ಪತ್ರೆಗೆ ದಾಖಲಾಗಲು ದುಂಬಾಲು ಬೀಳುತ್ತಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ.
ಆಕ್ಸಿಜನ್ ಎಲ್ಲರಿಗೂ ಸಿಗಲಿದೆ ಎಂಬ ವಿಶ್ವಾಸ ಮೂಡಿಸುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ಕೀಲಾರದ ಧನಂಜಯ ಅವರು ಇದೇ ಕಥೆ. ಐಸೋಲೇಷನ್ ನಲ್ಲಿ ಇದ್ದವರು. ಉಸಿರಾಟದ ಸಮಸ್ಯೆಯಾದ ಕೂಡಲೇ ಅವರಿಗೂ ಬೆಡ್ ಸಿಗಲಿಲ್ಲ. ಎರಡು-ಮೂರು ಆಸ್ಪತ್ರೆ ಅಲೆದು ಕೊನೆಗೆ ನೆಲಮಂಗಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದೇ ಸಾಯುತ್ತಿದ್ದಾರೆ. ಇನ್ನೊಂದು ಹೋಂ ಐಸೋಲೇಷನ್ ನಲ್ಲಿ ಇದ್ದವರಿಗೂ ಬೆಡ್ ಲಭ್ಯವಾಗದೇ ಕೊನೆಯುಸಿರು ಎಳೆಯುತ್ತಿದ್ದಾರೆ.
ಹೋಂ ಐಸೋಲೇಷನ್ ನಲ್ಲಿ ಇದ್ದವರು ಕಡ್ಡಾಯವಾಗಿ ಆಕ್ಸಿಜನ್ ಅಳೆಯುವ ಆಕ್ಸಿಜನ್ ಮೀಟರ್ ಇಟ್ಟುಕೊಂಡಿರಬೇಕು. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಇದರ ಬೆಲೆ ಮೂರುವರೆ ಸಾವಿರದವರೆಗೂ ಇದೆ.
ಹೋಂ ಐಸೋಲೇಷನ್ ನಲ್ಲಿ ಇರುವ ಎಷ್ಟು ಸೋಂಕಿತರ ಬಳಿ ಆಕ್ಸಿಜನ್ ಅಳೆಯುವ ಸಾಧನ ಇದೆಯೇ ಎಂಬುದನ್ನು ಯಾವುದೇ ಜಿಲ್ಲಾಡಳಿತವೂ ಈವರೆಗೂ ನೋಡುವ ಗೋಜಿಗೆ ಹೋಗಿಲ್ಲ. ಎಷ್ಟು ಜನರ ಬಳಿ ಇದೆ? ಎಷ್ಟು ಜನರಿಗೆ ಸರ್ಕಾರವೇ ನೀಡಬೇಕು ಎಂಬ ಬಗ್ಗೆ ಯಾರಿಗೂ ಗೊತ್ತೇ ಇಲ್ಲ. ಇಂಥ ಸಣ್ಣಮಟ್ಟದ ಕೆಲಸಕ್ಕೂ ಹೈ ಹಾಕಿಲ್ಲ. ಹೋಂ ಐಸೋಲೇಷನ್ ಒಳಪಡುವವರು ಆಕ್ಸಿಜನ್ ಅಳೆಯುವ ಯಂತ್ರ ಇಟ್ಟುಕೊಂಡಿರಬೇಕು ಎಂದು ಸರ್ಕಾರ ಆದೇಶ ಹೊರಡಿಸದೆ. ಇಷ್ಟು ಮಾತ್ರ ಸಾಕೇ? ಹೋಗಲಿ ಆ ಸಾಧನವಾದರೂ ಸುಲಭವಾಗಿ ಸಿಗುತ್ತಿದೆಯೇ? ಅದನ್ನು ಕೊಳ್ಳುವ ಶಕ್ತಿ ಎಲ್ಲರಲ್ಲೂ ಇದೆಯೇ?
ಹೋಂ ಐಸೋಲೇಷನ್ ನಲ್ಲಿ ಇರುವವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೊತ್ತಿಲ್ಲದಿದ್ದರೆ ತಮಿಳುನಾಡು, ಆಂದ್ರಪ್ರದೇಶಕ್ಕೆ ಕಳುಹಿಸಿ ಅಲ್ಲಿ ಪಾಠ ಹೇಳಿಸಿಕೊಂಡು ಬರಬಹುದು. ಅವರಿಗೆ ತಿಳಿಯುತ್ತಿರುವುದು ನಮಗೆ ಏಕೆ ತಿಳಿಯುತ್ತಿಲ್ಲ.
ಹೋಂ ಐಸೋಲೇಷನ್ ನಲ್ಲಿ ಸಮಸ್ಯೆ ಬಿಗಡಾಯಿಸಿ ಜಿಲ್ಲಾಸ್ಪತ್ರೆಗೆ ಬರುವ ಎಷ್ಟು ರೋಗಿಗಳಿಗೆ ಕರ್ನಾಟಕ ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂಬುದನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ನೋಡಬೇಕಾಗಿದೆ.
- ಕರ್ನಾಟಕ ಆಯುಷ್ಮಾನ್ ಆರೋಗ್ಯ ಭಾಗ್ಯ ಯೋಜನೆಯಡಿ ಹೋಂ ಐಸೋಲೇಷನ್ನಿಂದ ಹೋದ ಎಷ್ಟು ರೋಗಿಗಳಿಗೆ ಖಾಸಗಿ ಆಸ್ಪತ್ತೆಗಳಲ್ಲಿ ಆಕ್ಸಿಜನ್ ನೀಡಲಾಗಿದೆ ಎಂಬ ಅಂಕಿ-ಅಂಶದ ಕಡೆಗಾದರೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಗಮನ ಹರಿಸಿದರೆ ಲೋಪದೋಷಗಳು ಕಂಡಬಂದಾವು.
ಹೋಂ ಐಸೋಲೇಷನ್ ನಲ್ಲಿ ಇರುವ ರೋಗಿಗಳ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪ್ರತಿ ದಿನ ಎರಡು ಸಲ ಆಕ್ಸಿಜನ್ ಮಟ್ಟ ನೋಡಬೇಕೆಂಬ ಆದೇಶವಿದೆ. ಒಬ್ಬೊಬ್ಬ ಆಶಾ ಕಾರ್ಯಕರ್ತೆ 100-200 ರೋಗಿಗಳನ್ನು ನೋಡಬೇಕಾದ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಅವರು ಎರಡು ಸಲ ಆಕ್ಸಿಜನ್ ಮಟ್ಟ ಪರೀಕ್ಷಿಸಬೇಕು ಎಂದು ಯಾರಾದರೂ ನಿರೀಕ್ಷಿಸಲು ಸಾಧ್ಯವಾ?