Thursday, November 21, 2024
Google search engine
Homeಜಸ್ಟ್ ನ್ಯೂಸ್ಕೊರೋನಕ್ಕೆ ಇಂದು ಬಲಿಯಾದ ವಿಶ್ರಾಂತ ಐಪಿಎಸ್ ಅಧಿಕಾರಿ ಕೆವಿಆರ್ ಟ್ಯಾಗೂರ್ ಎಂಬ ಜೀವನೋತ್ಸಾಹಿ ನೆನೆದು

ಕೊರೋನಕ್ಕೆ ಇಂದು ಬಲಿಯಾದ ವಿಶ್ರಾಂತ ಐಪಿಎಸ್ ಅಧಿಕಾರಿ ಕೆವಿಆರ್ ಟ್ಯಾಗೂರ್ ಎಂಬ ಜೀವನೋತ್ಸಾಹಿ ನೆನೆದು

ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಕೆ.ವಿ.ಆರ್. ಟ್ಯಾಗೋರ್ ಅವರು ಕೊರೋನಕ್ಕೆ ತುತ್ತಾಗಿ ಅಕಾಲಿವಾಗಿ ನಿಧನರಾಗಿದ್ದಾರೆ. ಬಹುಮುಖ ವ್ಯಕ್ತಿತ್ವದ ಐಪಿಎಸ್ ಅಧಿಕಾರಿಯಾಗಿದ್ದ ಅವರದ್ದು ಗೃಹ ಇಲಾಖೆ ಮಾತೃ ಇಲಾಖೆಯಾಗಿದ್ದರೂ ವಾರ್ತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಖ್ಯಾತಿ ಪಡೆದಂತೆ, ತಾವು ಕಾರ್ಯ ನಿರ್ವಹಿಸಿದ ಈ ಎರಡೂ ಇಲಾಖೆಗಳಲ್ಲೂ ಟ್ಯಾಗೋರ್ ಒಳ್ಳೆಯ ಹೆಸರು ಗಳಿಸಿದ್ದ ಜನಾನುರಾಗಿ. ಯಾವ ಪೊಲೀಸ್ ಅಧಿಕಾರಿಯೂ ಇವರಷ್ಟು ಜನಪ್ರಿಯರಾಗಿರಲಿಲ್ಲ ಎಂಬುದು ಗಮನಾರ್ಹ.

ವಿವಿಧ ಮಟ್ಟದ ಯುವಜನ ಮೇಳ ಮತ್ತು ಯುವಜನೋತ್ಸವ ಸಂಘಟಿಸುವಲ್ಲಿ ಇವರ ಕರಾರುವಕ್ಕಾದ ಯೋಜನೆ ಮತ್ತು ಸ್ನೇಹಶೀಲವಾದ ನಡೆವಳಿಕೆ, ಈ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾಗಿದ್ದವು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾಗಿದ್ದ ವೇಳೆ ಅದೆಷ್ಟೋ ಯುವಜನರು ಇವರ ಸಮ್ಮೋಹಕ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು. ಜೊತೆಗೆ, ಆರಾಧಿಸಲುತೊಡಗಿದ್ದರು. ಇದನ್ನು ನಾನು ಕಣ್ಣಾರೆ ಕಂಡ ಸತ್ಯ. ಹಲವಾರು ವಿಷಯಗಳ ಬಗ್ಗೆ ಅಪಾರ ಜ್ಞಾನ ಸಂಪತ್ತು ಹೊಂದಿದ್ದ ಟ್ಯಾಗೂರ್ ಅವರು ಸದಾ ಹಸನ್ಮುಖಿ. ಪ್ರಖಂಡ ವಾಗ್ಮಿಗಳೂ ಆಗಿದ್ದ ಅವರು, ಯಾವುದೇ ವಿಷಯವಾದರೂ ಅದ್ಭುತವಾಗಿ ಮಾತನಾಡಿ ಚಿಂತನೆಯ ಬೀಜಗಳ ಬಿತ್ತುತ್ತಿದ್ದರು. ಯಾವುದೇ ಇಲಾಖೆಗೆ ಹೋದರೂ ಎಲ್ಲರೊಡನೆ ಬೆರೆತು ಒಂದಾಗುವ ಗುಣ ಅವರಲ್ಲಿ ಹಾಸುಹೊಕ್ಕಾಗಿತ್ತು. ಉನ್ನತ ಅಧಿಕಾರಿ, ಕೆಳಹಂತದ ಸಿಬ್ಬಂದಿ ಎಂದು ಯಾವತ್ತಿಗೂ ತಾರತಮ್ಯ ಮಾಡುತ್ತಿರಲಿಲ್ಲ. ದಕ್ಷತೆ ಮತ್ತು ಪ್ರಾಮಾಣಿಕತೆ ಅವರ ವೃತಿ ಕಾರ್ಯದ ವಿಶಿಷ್ಟ ಶೈಲಿಯಾಗಿತ್ತು.

ವಾರ್ತಾ ಇಲಾಖೆಯ ಬಗ್ಗೆ ಅಪಾರ ಒಲವಿಟ್ಟುಕೊಂಡಿದ್ದ ಅವರು, ಎರಡು ಬಾರಿ ಇದರ ಆಯುಕ್ತರಾಗಿದ್ದರು. ಆಗ ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಇಲಾಖೆಗೆ ಕಾಯಕಲ್ಪ ನೀಡಿದರು. ಯಾವುದೇ ಕಾರ್ಪೊರೇಟ್ ಕಂಪನಿಯ ಕಚೇರಿಗೆ ಕಡಿಮೆ ಇಲ್ಲದಂತೆ ಆಧುನಿಕವೂ ಸುಸಜ್ಜಿತವೂ ಆದ ವಾರ್ತಾ ಇಲಾಖೆಯ ನೂತನ ಕಟ್ಟಡವನ್ನು ನಿರ್ಮಾಣ‌ ಮಾಡಿದ್ದು ಅವರ ದಕ್ಷ ಮತ್ತು ಕ್ರಿಯಾಶೀಲ ಆಡಳಿತಕ್ಕೆ ಹಿಡಿದ ಕನ್ನಡಿ. ನನ್ನೂರಿನ ವಿಶ್ರಾಂತ ಐಎಎಸ್ ಅಧಿಕಾರಿ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ. ತಿಮ್ಮೇಗೌಡರ ಅನುಗಾಲದ ಜೀವನಾಡಿ ಗೆಳೆಯರಾಗಿದ್ದ ಕೆ.ವಿ.ಆರ್. ಟ್ಯಾಗೂರ್ ಕಲೆ, ಸಾಹಿತ್ಯ, ಜಾನಪದ, ಸಂಗೀತದಂತಹ ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಅದಮ್ಯ ಆಸಕ್ತಿ ಮತ್ತು ಪ್ರೀತಿಯಿಟ್ಟುಕೊಂಡಿದ್ದರು.

ನಮ್ಮ ಟಿ. ತಿಮ್ಮೇಗೌಡರ ಜೊತೆಗೆ ನಮ್ಮೂರಿಗೆ ಹಲವಾರು ಬಾರಿ ಭೇಟಿ ಕೊಟ್ಟಿದ್ದ ಟ್ಯಾಗೂರ್ ಅವರು, ಆದಿಚುಂಚನಗಿರಿ ಮಠದ ನಿಕಟವರ್ತಿಗಳಾಗಿದ್ದರು. ಕೃಷಿಕ್ ಸರ್ವೋದಯ ಫೌಂಡೇಷನ್ ಮತ್ತು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಜೊತೆಗೆ ಒಡನಾಟವಿಟ್ಟುಕೊಂಡಿದ್ದರು. ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಹಲವಾರು ಸಾಂಸ್ಕೃತಿಕ ಮತ್ತು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಂಡು ನನ್ನ ಅಣ್ಣ ಜೀವನ್ಮುಖಿ ಸುರೇಶ್ ಮತ್ತು ನನ್ನನ್ನು ತುಂಬಾ ಪ್ರೊತ್ಸಾಹಿಸುತ್ತಿದ್ದರು. ವೃತ್ತಿಯಿಂದ ವಿಶ್ರಾಂತರಾದರೂ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆ.ಎ.ಎಸ್. ಮತ್ತು ಎ.ಎ.ಎಸ್. ಪರೀಕ್ಷಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಯಾವುದೇ ಹಮ್ಮು ಬಿಮ್ಮು ಇಲ್ಲದ ಸಜ್ಜನಿಕೆಯ ಮನೋಭಾವದ ಜೀವನೋತ್ಸಾಹಿಯಾಗಿದ್ದರು.

ಕೆ.ವಿ.ಆರ್. ಟ್ಯಾಗೂರ್ ಎಂಬ ಹೆಸರಿದ್ದ ಅವರನ್ನು ಉತ್ತರ ಭಾರತದ ಕಡೆಯ ಐಪಿಎಸ್ ಅಧಿಕಾರಿ ಎಂದೇ ನಾನು ಭಾವಿಸಿದ್ದೆ. ಹಾಗೆಯೇ, ತುಂಬಾ ಜನರು ಸಹ ಭಾವಿಸಿದ್ದರು. ಜೊತೆಗೆ, ಅವರ ಹೆಸರಿನ ಬಗ್ಗೆ ಎಲ್ಲರಿಗೂ ಕುತೂಹಲವೂ ಇತ್ತು. ಇವರು ಖ್ಯಾತ ಕವಿ ರವೀಂದ್ರನಾಥ್ ಟಾಗೋರ್ ಅವರ ಕುಟುಂಬದ ಮೂಲದವರಿರಬಹುದೆಂದು. ಆದರೆ, ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಹಳ್ಳಿಯವರು. ಸ್ವಾತಂತ್ರ್ಯ ಹೋರಾಟಗಾರರೂ ಶಾಸಕರೂ ಆಗಿದ್ದ ಅವರ ತಂದೆ ವೀರಣ್ಣಗೌಡರು ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಮೇಲಿನ ಅಭಿಮಾನದ ದ್ಯೋತಕವಾಗಿ ತಮ್ಮ ಮಗನಿಗೆ ‘ಟ್ಯಾಗೂರ್’ ಎಂಬ ಹೆಸರನ್ನು ಇಟ್ಟಿದ್ದರು. ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಚದುರಿ ಹೋಗಿದ್ದ ಮಲೆನಾಡಿನ ಜನರನ್ನು ಸಂಘಟಿಸಿ, ಆಗಾಗ ಅವರೆಲ್ಲರನ್ನೂ ಒಂದೆಡೆ ಸೇರಿಸಿ ಸಾಂಸ್ಕೃತಿಕ ಹಬ್ಬದ ಮೂಲಕ ಸಂಭ್ರಮಿಸುವ ಕೆಲಸ ಮಾಡುತ್ತಿದ್ದರು. ಯುವಜನರ ಪಾಲಿಗಂತೂ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇಂತಹ ಕ್ರಿಯಾಶೀಲ ವ್ಯಕ್ತಿ ಕೋವಿಡ್ ಮಾರಿಗೆ ಬಲಿಯಾದದ್ದು ಬಹಳ ನೋವಿನ ಸಂಗತಿ. ಅವರ ಹಸನ್ಮುಖಿ ವ್ಯಕ್ತಿತ್ವ ಮನದ ಸ್ಮೃತಿಪಟಲದಲ್ಲಿ ಹಸಿರಾಗಿದೆ.

*ಹೋಗಿ ಬನ್ನಿ ಸರ್…ಅಂತಿಮ ನಮನಗಳು….*

*ಟಿ. ಸತೀಶ್ ಜವರೇಗೌಡ, ಮಂಡ್ಯ*

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?