Publicstory. in
Tumkuru: ವಿದೇಶದಿಂದ ತುಮಕೂರು ನಗರಕ್ಕೆ ಬಂದಿರುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾವಹಿಸಿದೆ. ಕೊರೊನ ಸೋಂಕು ವ್ಯಾಪಕವಾಗಿ ಹರಡಿರುವ ದೇಶಗಳಿಂದ ನಗರಕ್ಕೆ ಬಂದಿರುವುದೇ ಇದಕ್ಕೆ ಕಾರಣ. ಕೊರೋನ ವೈರಸ್ ಪಾಸಿಟಿವ್ ಇರುವ ರೋಗಿಗಳು ಈವರೆಗೂ ಪತ್ತೆಯಾಗಿಲ್ಲ. ಆದರೂ ಅವರನ್ನು ಪ್ರತ್ಯೇಕ ಕೋಣೆಗಳಲ್ಲಿರುವಂತೆ ಎಚ್ಚರಿಕೆ ವಹಿಸಲಾಗಿದೆ ಮತ್ತು ಪರೀಕ್ಷೆ ನಡೆಸಲಾಗುತ್ತಿದೆ.
ಸೌದಿ ಅರೇಬಿಯಾ, ಬ್ಯಾಂಕಾಕ್, ವರ್ಜೇನಿಯಾ, ಅಮೆರಿಕಾ, ಇಂಡೋನೇಶಿಯಾದ ಬಾಲಿ, ಮಲೇಶಿಯಾ, ಒಮನ್, ಜರ್ಮನಿ, ದುಬೈ, ಮೆಕ್ಕಾ ಮದೀನಾ, ಚೀನಾ, ಇಟಲಿ, ಅಮೆರಿಕಾ ಸಂಯುಕ್ತ ಸಂಸ್ಥಾನ, ಕುವೈಟ್, ನೇಪಾಳ್, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ ತುಮಕೂರು ನಗರಕ್ಕೆ ಬಂದಿದ್ದಾರೆ.
ವಿದೇಶದಿಂದ ಬಂದಿರುವವರಲ್ಲಿ ದುಬೈ, ಸೌದಿ ಅರೇಬಿಯದಿಂದ ಬಂದಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ತುಮಕೂರಿನ ಮುಸ್ಲಿಂ ಬಾಹುಳ್ಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ.
ಆದರೆ ಈವರೆಗೂ ಇವರಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.
ಸೌದಿಅರೇಬಿಯಾ-9, ದುಬೈ-6 ಅಮೆರಿಕಾ-4, ಇಂಡೋನೇಶಿಯಾ-3, ಇಟಲಿ-3, ಚೀನಾ, ನೇಪಾಳ್, ಮೆಕ್ಕ ಜರ್ಮನಿ ತಲಾ ಒಬ್ಬೊಬ್ಬರು ತುಮಕೂರಿಗೆ ಬಂದಿದ್ದಾರೆ. ಇವರೆಲ್ಲರೂ ಕ್ಯಾತ್ಸಂದ್ರ, ಸೋಮೇಶ್ವರಪುರಂ, ಕೆ.ಆರ್.ಬಡಾವಣೆ, ನಜರಾಬಾದ್, ಸದಾಶಿವನಗರ, ಚಿಕ್ಕಪೇಟೆ, ಸಪ್ತಗಿರಿ ಬಡಾವಣೆ, ಸಂತೇಪೇಟೆ, ಕುರಿ ಪಾಳ್ಯ- ಹೀಗೆ ಎಲ್ಲೆಡೆ ವಾಸವಿದ್ದು ಅವರ ಮೇಲೆ ನಿಗಾ ಇಡಲು ವೈದ್ಯರನ್ನು ನೇಮಕ ಮಾಡಲಾಗಿದೆ.
Publicstory. in ನೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ವಿದೇಶಗಳಿಂದ ಬಂದವರನ್ನು ಅವರ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ಇಡಲಾಗಿದೆ. ಕೊರೊನ ವೈರಸ್ ಹರಡಿರುವ ಯಾವುದೇ ಪ್ರಕರಣ ಇದುವರೆಗೆ ಪತ್ತೆಯಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಕೊರೋನ ರೋಗಿಗಳಿಗೆ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಿದ್ದು ಅವರನ್ನು ನೋಡಿಕೊಳ್ಳಲು 10 ಹಾಸಿಗೆಗಳನ್ನು ಇಡಲಾಗಿದೆ ಎಂದರು.
ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ಜನ ಸೇರುವ ಹೋಟೆಲ್ ಬಂದ್ ಮಾಡುವಂತೆ ಅದೇಶಿಸಿದ್ದರೂ ಎಲ್ಲಾ ಹೋಟೆಲ್‌ಗಳ ಬಾಗಿಲು ತೆಗೆದು ವ್ಯಾಪಾರ ನಡೆಸುತ್ತಿವೆ. ಸಭೆ ಸಮಾರಂಭಗಳು, ಸಿನಿಮಾ ಹಾಲ್‌ಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಮತ್ತು ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ರಾತ್ರಿ ಬೀದಿಬದಿಯಲ್ಲಿ ತಿಂಡಿತಿನಿಸುಗಳನ್ನು ಮಾರುವವರಿಗೆ ಪಾಲಿಕೆಯ ಅದೇಶ ಕೂಲಿ ಹುಟ್ಟದಂತೆ ಮಾಡಿದೆ.
ಇಟಲಿ, ಚೀನ ಅಮೇರಿಕಾ ಮೊದಲಾದ ಕಡೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ತೀವ್ರ ಪ್ರಾಣ ಹಾನಿ ಮಾಡಿದೆ. ಆದರೆ ಭಾರತದಲ್ಲಿ ಮಾತ್ರ ಇದುವರೆಗೂ ಮೂವರು ಬಲಿಯಾಗಿದ್ದು 13ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ.