ತುಮಕೂರು: ಕೋವಿಡ್ ಆಸ್ಪತ್ರೆಯ ಹೆಸರು ಕೇಳಿದರೆ ಗಾವುದ ದೂರ ಓಡುವ ಸನ್ನಿವೇಶ ಇರುವಾಗ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತನ್ನೊಬ್ಬನಿಗೆ ಧೈರ್ಯ ಹೇಳಿರುವ ವಿಡಿಯೊ ಈಗ ರಾಜ್ಯದಾದ್ಯಂತ ವೈರಲ್ ಆಗಿದೆ.
ಗ್ರಾಮಾಂತರ ಕ್ಷೇತ್ರದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕಿನ ಕಾರಣ ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಕ್ಷೇತ್ರದ ಮೊದಲ ಪ್ರಕರಣ.
ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿ ರೋಗಿಯನ್ನು ಭೇಟಿಯಾಗಿರುವ ಸುರೇಶಗೌಡರು, ಯಾವುದೇ ಭಯಕ್ಕೆ ಒಳಗಾಗದೆ ದೈರ್ಯದಿಂದ ಇರಬೇಕು. ಹೆದರಬಾರದು. ಏನು ಆಗಿಲ್ಲ ಎಂದು ಹೇಳುವುದು ವಿಡಿಯೊದಲ್ಲಿದೆ.
ಇಂತ ಅಪರೂಪದ ದೈರ್ಯಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಕೊಂಡಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು ವಲಯದಲ್ಲೂ ಸಹ ಸಹ ಪ್ರಶಂಸೆ ವ್ಯಕ್ತವಾಗತೊಡಗಿದೆ.
ಲಾಕ್ ಡೌನ್ ಸಡಿಲಿಕೆಯ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.ಕೊರೊನಾ ಜತೆಯಲ್ಲೇ ಬದುಕು ನಡೆಸಬೇಕಾಗಿದೆ. ಇಂತ ಸಂದರ್ಭದಲ್ಲಿ ಮಾಜಿ ಶಾಸಕರ ಭೇಟಿ ದೊಡ್ಡ ರೂಪಾಂತರಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಮಟ್ಟಿಗೆ ಹೇಳುವುದಾದರೆ, ಸ್ವತಃ ಆರೋಗ್ಯ, ವೈದ್ಯಕೀಯ ಸಚಿವರು ಸಹ ಈವರೆಗೆ ಒಬ್ಬ ರೋಗಿಯನ್ನೂ ಮಾತನಾಡಿಸುವ ಧೈರ್ಯ ತೋರಿಲ್ಲ. ಇಂಥ ಸನ್ನಿವೇಷದಲ್ಲಿ ಮಾಜಿ ಶಾಸಕರೊಬ್ಬರ ಈ ನಡೆ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
ಫೇಸ್ ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಜನರಿಂದ ಭಾರೀ ಪ್ರಶಂಸೆಗೂ ಒಳಗಾಗಿದೆ.
ನಿಜವಾದ ಜನ ನಾಯಕ. ಜನರು ಸಾಯುತ್ತಿರುವಾಗ ಎಲ್ಲರೂ ಮನೆಯೊಳಗೆ ಸೇರಿದ್ದರೆ ಇವರು ಆಸ್ಪತ್ರೆಗೆ ಭೇಟಿ ನೀಡಿರುವುದು ಜನರ ಮೇಲೆ ಇಟ್ಟಿರುವ ನಿಜವಾದ ಪ್ರೀತಿಗೆ ಸಾಕ್ಷಿ ಎಂದು ಬೆಟ್ಟೇಗೌಡ ಎಂಬುವವರು ಬರೆದುಕೊಂಡಿದ್ದಾರೆ.
ಇನ್ನೂ, ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಹ ಮಾಜಿ ಶಾಸಕರ ನಡೆಯನ್ನು ಕೊಂಡಾಡುತ್ತಿದ್ದಾರೆ.
ಸೋಂಕಿತರ ಬಗ್ಗೆ, ಅವರ ಮನೆಯವರ ಬಗ್ಗೆ ಭಯಭೀತಿಯನ್ನು ಜನರು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕರೊಬ್ಬರು ರೋಗಿಗೆ ಧೈರ್ಯ ಹೇಳಲು ಬಂದಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ಬಂದಂತಾಗಿದೆ. ರೋಗಿಗಳಲ್ಲಿ ರೋಗದ ವಿರುದ್ಧ ಹೋರಾಟ ಮಾಡುವ ಶಕ್ತಿ ಹೆಚ್ಚಲಿದೆ ಎನ್ನುತ್ತಾರೆ ವೈದ್ಯರು.
ಕೊರೊನಾ ಸೋಂಕಿತರನ್ನು ಪಿಪಿಇ ಕಿಟ್ ಬಳಸಿ ಯಾರೂ ಬೇಕಾದರೂ ಭೇಟಿಯಾಗಬಹುದು. ರೋಗಿಗಳ ಸಂಬಂಧಿಕರು ಬರಬಹುದು. ಆದರೆ ಹೆದರಿಕೊಂಡು ಯಾರೂ ಬರುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ನಾವು ಹೇಳಿದರೂ ರೋಗಿಗಳ ಸಂಬಂಧಿಗಳು ಹತ್ತಿರ ಸುಳಿಯುವುದಿಲ್ಲ ಎಂದು ಜಿಲ್ಲಾಶಸ್ತ್ರ ಚಿಕಿತ್ಸಕ ಟಿ.ಎ.ವೀರಭದ್ರಯ್ಯ https://publicstory.in/ ಗೆ ತಿಳಿಸಿದರು.