ಮಹೇಂದ್ರ ಕೃಷ್ಣಮೂರ್ತಿ
ಬೆಂಗಳೂರು: ಕೊರೊನಾ ರೋಗಿಗಳಿಗೆ ಬೆಡ್, ಐಸಿಯು ಮೀಸಲಿಡುವ ವಿಷಯದಲ್ಲಿ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಾ ಸೆಡ್ಡುಹೊಡೆಯುತ್ತಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಏಕಾಏಕಿ ಮನೆ ಆರೈಕೆ ಪ್ಯಾಕೇಜ್ ಘೋಷಣೆ ಮಾಡಿರುವುದು ಮಾತ್ರ ಹುಬ್ಬೇರುವಂತೆ ಮಾಡಿದೆ.
ಖಾಸಗಿ ಆಸ್ಪತ್ರೆಗಳು ಈ ರೀತಿ ಮನೆ ಆರೈಕೆ ಪ್ಯಾಕೇಜ್ ಗೆ ನಿಗದಿ ಮಾಡಿರುವ ದರಕ್ಕೆ ಕಡಿವಾಣ ಹಾಕದಿದ್ದರೆ ನಾಯಿಕೊಡೆಗಳಂತೆ ಮನೆ ಆರೈಕೆ ಪ್ಯಾಕೇಜ್ ನೀಡುವ ಆಸ್ಪತ್ರೆಗಳು ಹುಟ್ಟಿಕೊಳ್ಳಲಿವೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ -23017ರ ಅಡಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸಾ ವೆಚ್ಚವನ್ನು ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ಅಧಿಕಾರವನ್ನಾದರೂ ಆರೋಗ್ಯ ಸಚಿವರು ಬಳಸಿಕೊಂಡು ಬಡ ರೋಗಿಗಳ ನೆರವಿಗೆ ಬರಬೇಕಾಗಿದೆ.
ಕೊಲಂಬಿಯಾ ಏಷ್ಯಾ, ಮಣಿಪಾಲ್ ಅಪೋಲೊ, ಸಾಕ್ರಾ, ಅಸ್ಟರ್, ನಾರಾಯಣ ಹೆಲ್ತ್, ವಿಕ್ರಂ ಸೇರಿದಂತೆ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳು ಈ ಮನೆ ಆರೈಕೆ ಪ್ಯಾಕೇಜ್ ಅನ್ನು ಪ್ರಕಟಿಸಿವೆ. ಇದಕ್ಕೆ ಈ ಆಸ್ಪತ್ರೆಗಳ ಸರ್ಕಾರದ ಜತೆ ಮಾತನಾಡಿ, ಚರ್ಚಿಸಿ ಈ ನಿರ್ಧಾರ ಕೈಗೊಂಡಿವೆಯೋ? ಇಲ್ಲವೇ ಈ ಆಸ್ಪತ್ರೆಗಳೇ ಸೇರಿಕೊಂಡು ಈ ನಿರ್ಣಯಕ್ಕೆ ಬಂದವೇ ಎಂಬ ಬಗ್ಗೆ ಈ ಆಸ್ಪತ್ರೆಗಳಾಗಲೀ, ಕೋವಿಡ್ ನಿರ್ವಹಣೆಯ ಹೊಣೆಹೊತ್ತುಕೊಂಡಿರುವ ವೈದ್ಯರು ಆಗಿರುವ ಆರೋಗ್ಯ ಸಚಿವ ಡಾ,ಸುಧಾಕರ್ ಅವರಾಗಲೀ ಇನ್ನೂ ಏನನ್ನು ಹೇಳಿಲ್ಲ.
ಈ ಆಸ್ಪತ್ರೆಗಳ ಪ್ಯಾಕೇಜ್ ದರಗಳಲ್ಲೂ ವ್ಯತ್ಯಾಸಗಳಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳನ್ನು ಹಿಂಬಾಲಿಸಿ ರಾಜ್ಯದ ಬೇರೆಬೇರೆ ನಗರ, ಪಟ್ಟಣಗಳ ಸಣ್ಣ,ಪುಟ್ಟ ಖಾಸಗಿ ನರ್ಸಿಂಗ್ ಹೋಂಗಳು ಇದೇ ರೀತಿಯ ಪ್ಯಾಕೇಜ್ ಗಳನ್ನು ಘೋಷಿಸಬಹುದು. ಇದಕ್ಕೆ ಈಗಾಗಲೇ ತಯಾರಿ ಮಾಡಿಕೊಂಡಿರಲೂ ಬಹುದೇನೋ?
ಈಗ, ಬೆಂಗಳೂರಿನ ಈ ಖಾಸಗಿ ಆಸ್ಪತ್ರೆಗಳು ಘೋಷಿಸಿರುವ ಪ್ಯಾಕೇಜ್ 4 ಸಾವಿರದಿಂದ 20 ಸಾವಿರ ರೂಪಾಯಿವರೆಗೂ ಇದೆ. ಇದರಲ್ಲಿ ನ್ಯೂಟ್ರಿಷಿಯನ್, ನರ್ಸ್ ಗಳ ಸೇವೆ, ಪಿಜಿಷಿಯನ್ ಸೇವೆ, ಮಾಸ್ಕ, ಕಿಟ್ ಗಳನ್ನು ಒಳಗೊಂಡಿದೆ. ಆಸ್ಪತ್ರೆಗಳ ಪ್ರಕಟಣೆಯಂತೆ, ರೋಗಿಗಳಿಗೆ ನೇರವಾಗಿ ವಿಡಿಯೊ ಸಂವಾದದ ಮೂಲಕ ಸಲಹೆ ನೀಡಲಾಗುವುದು ಎಂದು ಹೇಳಿವೆ.
ಈ ಪ್ಯಾಕೇಜ್ ಅನ್ನು ಯಾವ ಆಧಾರದಲ್ಲಿ ಘೋಷಿಸಲಾಗಿದೆ ಎಂದು ಖಾಸಗಿ ಆಸ್ಪತ್ರೆಗಳು ಹೇಳಿಲ್ಲ. ಹೆದರಿ ಕಂಗಾಲಾಗಿರುವ ರೋಗಿಗಳಿಂದ ಹಣ ಮಾಡುವ ದಂಧೆ ಅದರೂ ಆಶ್ಚರ್ಯಪಡಬೇಕಾಗಿದೆ. ಈ ಹಿಂದೆ ಡೆಂಗಿ ಜ್ವರ ಹೆಚ್ಚಾದಾಗ, ಕೊರೊನಾ ಆರಂಭದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ ದರ ನಿಗದಿ ಮಾಡಿ ಸರ್ಕಾರ ಖಾಸಗಿ ಆಸ್ಪತ್ರೆಗಳ ಹಣ ಪೀಕುವಿಕೆ ಕಡಿವಾಣ ಹಾಕಿತ್ತು. ಅದೇ ಮಾದರಿ ಈಗಲೂ ಅನುಸರಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್.
ಕೊರೊನಾ ನಿಯಂತ್ರಣದಲ್ಲಿ ಈ ಪ್ಯಾಕೇಜ್ ಗಳ ದಾರಿ ಸರಿಯೇ ಎಂಬುದನ್ನು ಸಚಿವರೇ ಹೇಳಬೇಕು. ಈಗಾಗಲೇ ಹೆದರಿಹೋಗಿರುವ ಜನರು ಈ ಖಾಸಗಿ ಆಸ್ಪತ್ರೆಗಳ ಪ್ಯಾಕೇಜ್ ಗೆ ಮುಗಿಬಿದ್ದರೆ ಅಚ್ಚರಿ ಏನಿಲ್ಲ. ಸರ್ಕಾರದ ನೀತಿ-ನಿಯಮಗಳ ಪಾಲನೆಯಲ್ಲಿ ಅಸಡ್ಡೆ ತೋರುತ್ತಿರುವ ಖಾಸಗಿ ಆಸ್ಪತ್ರೆಗಳು ತಾವೇ ಮುಂದಾಗಿ ಈ ಮನೆ ಆರೈಕೆಯ ಪ್ಯಾಕೇಜ್ ಮಾಡಿರುವುದರ ಹಿಂದೆ ಹಣ ಮಾಡುವ ಉದ್ದೇಶವೇ ಹೆಚ್ಚಿರುವಂತಿದೆ ಎನ್ನುತ್ತಾರೆ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಪುಗೌಡ.
ಇನ್ನೂ, ಈ ಆಸ್ಪತ್ರೆಗಳ ವಿಧಿಸುವ ಚಿಕಿತ್ಸೆಯ ದರ ಮಿತಿ ನಿರ್ಧರಿಸುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇದೆಯೋ, ಇಲ್ಲವೋ ಎಂಬ ಬಗ್ಗೆ ಡಾಕ್ಟರ್ ಸಚಿವರೇ (ಡಾ. ಸುಧಾಕರ) ನಾಡಿನ ಜನರಿಗೆ ತಿಳಿಸಬೇಕು ಎಂದು ಅವರು ಗೇಲಿ ಮಾಡಿದರು.
ಮತ್ತೊಂದು ಪ್ರಶ್ನೆ?
ಈ ರೀತಿ ಖಾಸಗಿ ಆಸ್ಪತ್ರೆಗಳ ಪ್ಯಾಕೇಜ್ ನಲ್ಲಿ ಮನೆ ಆರೈಕೆ ಪಡೆಯುವ ರೋಗಿಗಳ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ಐಸಿಯು, ಆಮ್ಲಜನಕ ವ್ಯವಸ್ಥೆಗಾಗಿ ಈ ಖಾಸಗಿ ಆಸ್ಪತ್ರೆಗಳು ಹಾಸಿಗಳನ್ನು ಪ್ರತ್ಯೇಕವಾಗಿ ಮೀಸಲು ಇಡಲಿವೆಯೇ ಅಥವಾ ಅಂತ ಸಂದರ್ಭದಲ್ಲಿ ಹಾಸಿಗೆ, ಐಸಿಯು, ಆಮ್ಲಜನಕ ಲಭ್ಯವಿದ್ದರೆ ಮಾತ್ರವೇ ಈ ಮನೆ ಆರೈಕೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲಾಗುತ್ತದೆಯೇ ಎಂಬ ಬಗ್ಗೆ ಖಾಸಗಿ ಆಸ್ಪತ್ರೆಗಳ ಪ್ರಕಟಣೆಯಲ್ಲಿ ಯಾವುದೇ ವಿವರ ಇಲ್ಲ.
ಮನೆ ಆರೈಕೆ ಪಡೆಯುವ ರೋಗಿಗಳೊಂದಿಗೆ ಪರಸ್ಪರ ಒಡಂಬಡಿಕೆಯಲ್ಲಿ ಮಾತಿನ ರೂಪದ ಭರವಸೆಯನ್ನು ಖಾಸಗಿ ಆಸ್ಪತ್ರೆಗಳು ನೀಡಿವೆಯೇ ಎಂಬುದು ಈವರೆಗೂ ಗೊತ್ತಾಗಿಲ್ಲ.
ಒಂದು ವೇಳೆ ಈ ರೀತಿಯಾದರೆ, ಸರ್ಕಾರ ಮೀಸಲಿಡಬೇಕು ಎಂದು ಹೇಳಿರುವ ಬೆಡ್ ಹಾಗೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರುವ ರೋಗಿಗಳಿಗೆ ನೀಡುವ ಬೆಡ್ ವಿಷಯದಲ್ಲಿ ತಾರತಮ್ಯವಾದರೆ ಅದನ್ನು ಸರಿಪಡಿಸಲು ಡಾಕ್ಟರ್ ಸಚಿವರು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ನಾಡಿನ ಜನರಿಗೆ ತಿಳಿಸುವುದು ಒಳಿತು.
ಕೊರೊನಾ ಆರಂಭದಲ್ಲಿ ಅಲ್ಲಲ್ಲಿ ತೆಗೆದಿದ್ದ ಕೊರೊನಾ ಆರೈಕೆ ಕೇಂದ್ರಗಳು ಏನಾದವು ? ಈ ಹಿಂದೆ ಶಾಲೆಗಳು, ಹಾಸ್ಟೆಲ್ ಗಳು, ಖಾಸಗಿ ಕಾಲೇಜುಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ಶಾಲಾ-ಕಾಲೇಜುಗಳು ನಡೆಯುತ್ತಿವೆ. ಹೀಗಾಗಿ ಕೊರೊನಾ ಕೇಂದ್ರಗಳ ಕಥೆ ಏನು ಎಂಬ ಪ್ರಶ್ನೆಗೂ ಉತ್ತರಬೇಕಾಗಿದೆ.
ಈ ಹಿಂದೆ ಕೊರೊನಾ ಕೇಂದ್ರಗಳ ನಿರ್ವಹಣೆಗಾಗಿ ಸೃಷ್ಟಿಸಿದ್ದ ಮೂಲಭೂತ ಸೌಕರ್ಯಗಳು, ಸಲಕರಣೆಗಳ ವೆಚ್ಚ ಎಷ್ಟಾಗಿತ್ತು. ಈಗ ಅವೆಲ್ಲವೂ ಏನಾಗಿವೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಿದರೆ ಕೊರೊನಾ ನಿರ್ವಹಣೆಯ ವೈಫಲ್ಯ, ಹಣ ದುರುಪಯೋಗ ಜನರಿಗೆ ತಿಳಿಯಲಿದೆ.