ತುಮಕೂರು:ತುಮಕೂರು –ಪಾವಗಡ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಬೇಕು. ಅಪಘಾತಗಳನ್ನು ತಪ್ಪಿಸಬೇಕು. ಖಾಸಗಿ ಬಸ್ ಗಳ ಬದಲಿಗೆ ಸರ್ಕಾರಿ ಬಸ್ ಗಳ ಸಂಚಾರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೊರಟಗೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಈ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿದೆ. ಅತಿ ವೇಗವಾಗಿ ಸಂಚರಿಸುತ್ತವೆ. ಖಾಸಗಿ ಬಸ್ ಗಳ ನಡುವೆ ತೀವ್ರ ಪೈಪೋಟಿ ಇದೆ. ಇದರಿಂದ ಅಪಘಾತಗಳಾಗಿ ಸಾವು ಸಂಖ್ಯೆ ಹೆಚ್ಚುತ್ತಿದೆ. ಇದುವರೆಗೂ ಖಾಸಗಿ ಬಸ್ ಗಳೇ ಹೆಚ್ಚು ಅಪಘಾತಕ್ಕೆ ಒಳಗಾಗಿವೆ.
ಕಳೆದ ಕೆಲ ದಿನಗಳ ಹಿಮದೆ ಜಟ್ಟಿ ಅಗ್ರಹಾರ ಬಳಿ ಬಸ್ ದುರಂತ ನಡೆದಿದೆ. ಊರುಕೆರೆ ಗೇಟ್ ನಲ್ಲಿ ಆದ ದುರಂತದಿಂದ ಸಾಕಷ್ಟು ಜನರ ಜೀವನ ಅಸ್ತವ್ಯಸ್ಥವಾಗಿದೆ. ಈ ರಸ್ತೆಯಲ್ಲಿ ಸಾಕಷ್ಟು ದುರಂತಗಳು ಸಂಭವಿಸಿವೆ. ಆದ್ದರಿಂದ ಖಾಸಗಿ ಬಸ್ ಗಳಿಗೆ ಬ್ರೇಕ್ ಹಾಕಬೇಕು ಎಂದು ಜಾಥಾ ನಿರತರು ಆಗ್ರಹಿಸಿದರು.
ತುಮಕೂರು-ಪಾವಗಡ ರಸ್ತೆಯಲ್ಲಿ ಸಂಚರಿಸುವ ಬಹುತೇಕ ಖಾಸಗಿ ಬಸ್ ಗಳಿಗೆ ಪರವಾನಿಗೆ ಇಲ್ಲ. ಪರವಾನಿಗೆ ಇರುವ ಬಸ್ ಗಳ ಸಂಖ್ಯೆ ಕಡಿಮೆ ಇದೆ. ಅಧಿಕಾರಿಗಳು ಮತ್ತು ಬಸ್ ಮಾಲಿಕರು ಶಾಮೀಲಾಗಿ ಜನರ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಪರಿಗಣಿಸಿಲ್ಲ.
ರಸ್ತೆಯಲ್ಲಿ ಯಾವ ಕಡೆಯೂ ಹುಬ್ಬುಗಳನ್ನು ನಿರ್ಮಿಸಿಲ್ಲ. ಇದರಿಂದ ಗ್ರಾಮಗಳ ಬಳಿಯೂ ವೇಗವಾಗಿ ಬಸ್ ಗಳು ಸಂಚರಿಸುತ್ತವೆ. ಇವುಗಳಿಗೆ ಕಡಿವಾಣ ಹಾಕಲು ಪ್ರತಿ ಗ್ರಾಮದ ಸಮೀಪವು ಹಂಪ್ಸ್ ಗಳನ್ನು ನಿರ್ಮಿಸಬೇಕು. ಕೆಲ ಬಸ್ ಗಳು ಕೆಲ ಗ್ರಾಮಗಳಲ್ಲಿ ನಿಲ್ಲಿಸುವುದಿಲ್ಲ. ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಮತ್ತು ಮಕ್ಕಳನ್ನು ಹತ್ತಿಸಿಕೊಳ್ಳುವುದಿಲ್ಲ. ಇದರಿಂದ ಬಸ್ ಸಂಚರಿಸುತ್ತಿದ್ದರೂ ಓಡಾಟಕ್ಕೆ ಕಷ್ಟವಾಗಿದೆ ಎಂದು ದೂರಿದರು.
ಖಾಸಗಿ ಬಸ್ ಗಳನ್ನು ನಿಷೇಧಿಸಿ ಸರ್ಕಾರಿ ಬಸ್ ಗಳನ್ನು ಓಡಿಸಬೇಕು ಎಂದು ಜಾಥಾನಿರತರು ಒತ್ತಾಯಿಸಿದರು. ಜಾಥಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಜಯಕರ್ನಾಟಕ, ದಲಿತ ಸಂರಕ್ಷಣ ಸಮಿತಿ, ಅಖಂಡ ಕರ್ನಾಟಕ ರಕ್ಷಣಾ ಸೇವಾದಳ, ಕರುನಾಡ ಕೇಸರಿ ಯುವ ವೇದಿಕೆ, ಮಾದಿಗ ದಂಡೋರ ಸಮಿತಿ, ವಿಷ್ಣು ಯುವ ಸಮಿತಿ ಜಗ್ಗೇಶ್ ಅಭಿಮಾನಿ ಬಳಗ ಹೀಗೆ ಹಲವು ಸಂಘಟನೆಗಳು ಜಾಥಾದಲ್ಲಿ ಭಾಗವಹಿಸಿದ್ದವು.