Publicstory. in
ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ರಂಗು ರಂಗಿನ ಚುನಾವಣಾ ಆಟ ಶುರು ಹಚ್ಚಿರುವ ಬಿಜೆಪಿಯೊಳಗೆ ಈಗ ಎರಡು ಹೋಳಾಗಿದೆಯೇ ಎಂಬ ಮಾತುಗಳು ಆ ಪಕ್ಷದ ಒಳಗೆ ಕೇಳಿ ಬರ ತೊಡಗಿವೆ.
ಕಾವೇರಿಕೊಳ್ಳದಲ್ಲಿ ಹೇಮಾವತಿ ಹೆಸರಿನಲ್ಲಿ ಒಂದಿಷ್ಟು ಜಾಗ ಮಾಡಿಕೊಂಡಿರುವ ಬಿಜೆಪಿ ಕೃಷ್ಣಾ ಕೊಳ್ಳದಲ್ಲಿ ಹೇಳ ಹೆಸರಿಲ್ಲವಾಗಿದೆ. ಪ್ರಧಾನಿ ಮೋದಿ ಹೆಸರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಪತಾಕೆ ಹಾರಿಸಿದರೂ ಅದಕ್ಕೆ ಅಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕಿಲ್ಲದ ಸ್ಥಿತಿ.
ಶಾಸಕ ಸತ್ಯನಾರಾಯಣ್ ಅವರ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದಲ್ಲಿ ತಾವರೆ ಅರಳಿಸುವ ತವಕವನ್ನು ಆ ಪಕ್ಷ, ಆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡರು ತೋರ ತೊಡಗಿದ್ದಾರೆ.
ಹಾಗೇ ನೋಡಿದರೆ ಈ ಭಾಗದಲ್ಲಿ ಪಾವಗಡದ ಶಿವಪ್ರಕಾಶ್ ಬಿಟ್ಟರೆ ಪಕ್ಷವನ್ನು ಕಟ್ಟಲು ಯಾರೂ ಪ್ರಯತ್ನಿಸಿರಲಿಲ್ಲ. ಶಿವಪ್ರಕಾಶ್ ಒಳ್ಳೆಯ ಮನುಷ್ಯ. ಆದರೆ ಅಧಿಕಾರ ಇದ್ದಾಗ ಅವರದೇ ಕೃಷ್ಣಾಕೊಳ್ಳದಲ್ಲಿ ಬಿಜೆಪಿಗೆ ನೆಲೆ ಒದಗಿಸಲು ಸಾಧ್ಯವಾಗಲಿಲ್ಲ.
ಬಿ.ಸುರೇಶಗೌಡರು ಕೂಸು ಹುಟ್ಟುವ ಮೊದಲೇ ಕುಲಾಬಿ ಹೊಲೆದರು ಎಂಬಂತೆ ತುಮಕೂರು ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಮಧುಗಿರಿ, ತುರುವೇಕೆರೆ ತಾಲ್ಲೂಕುಗಳಲ್ಲಿ ಯಾರಿಗೂ ತೋರಗೊಡದಂತೆ ಊರೂರು ತಿರುಗಿದರು. ಅದರ ಫಸಲನ್ನು ಸಂಸದ ಜಿ.ಎಸ್.ಬಸವರಾಜ್ ಚೆನ್ನಾಗಿಯೇ ಉಂಡರು.
ಪಾರ್ಟಿ ಕಟ್ಟುವಲ್ಲಿ, ರಾಜಕೀಯ ಮಾಡುವುದರಲ್ಲಿ ಸದ್ಯದ ಮಟ್ಟಿಗೆ ಸುರೇಶಗೌಡರನ್ನು ಮೀರಿಸುವ ನಾಯಕರು ಜಿಲ್ಲೆಯಲ್ಲಿ ಯಾವುದೇ ಪಕ್ಷದಲ್ಲೂ ಯಾರೂ ಇಲ್ಲ ಎಂಬುದನ್ನು ಯಾರೂ ಬೇಕಾದರೂ ಒಪ್ಪುತ್ತಾರೆ.
ನಾಲ್ಕು ದಶಕಗಳಿಂದ ಇಡೀ ಜಿಲ್ಲೆಯ ರಾಜಕಾರಣವನ್ನು ತನ್ನ ಬಿಗಿ ಹಿಡಿತದಲ್ಲೇ ಇಟ್ಟುಕೊಂಡಿರುವ ಸಂಸದ ಬಸವರಾಜ್ ಅವರೂ ಹೀಗಲೂ ಜಿಲ್ಲೆಯ ಮಟ್ಟಿಗೆ ರಾಜಕೀಯ ಹೀರೋನೆ ಸರಿ. ಅವರ ರಾಜಕೀಯದಾಟ, ಒಳ ಉದ್ದೇಶ ಏನೇ ಇರಲಿ ಅವರು ಕಣ್ಣಾಡಿಸಿದಂತೆ ಜಿಲ್ಲೆಯ ರಾಜಕಾರಣ ಮಗ್ಗಲು ಬದಲಿಸುತ್ತಿರುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವರ ಜಾತಿಯೂ ಅವರಿಗೆ ಬೆಂಬಲವಾಗಿಯೇ ನಿಂತಿದೆ ಎಂಬುದನ್ನು ಬೇರೇ ಹೇಳಬೇಕಾಗಿಲ್ಲ.
ಇದೆಲ್ಲದರ ನಡುವೆ ಶಿರಾದ ಉಪಚುನಾವಣೆ ನಡೆ ಮತ್ತೊಂದು ರಾಜಕೀಯ ಚದುರಂಗದಾಟಕ್ಕೆ ಅವಕಾಶ ಮಾಡಿಕೊಡಲಿದೆ ಎಂಬ ಮಾತುಗಳು ಈ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ನಾಯಕರ ಚಲನವಲನ ಗಮನಿಸಿದವರಿಗೆಲ್ಲ ಗೊತ್ತಾಗುವುದು ಕಷ್ಟವೇನಲ್ಲ.
ಕಾಂಗ್ರೆಸ್ ನ ಜಯಚಂದ್ರ ಅವರನ್ನು ಸೋಲಿಸುವುದು ಸಣ್ಣ ಮಾತೇನಲ್ಲ. ಅವರು ಶಿರಾಗಾಗಿ ಅನೇಕಾನೇಕ ಕೆಲಸಗಳನ್ನು ಮಾಡಿದ್ದಾರೆ. ಶಿರಾದ ಉಸ್ತುವಾರಿ ಸಚಿವರು ಎಂದು ನಿಂದನೆಗೆ ಒಳಗಾದರೂ ಅವರು ಶಿರಾಗೆ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಶಿರಾದ ಆಧುನಿಕ ನಿರ್ಮಾತೃ ಎಂದು ಅವರನ್ನು ಕರೆದರೂ ತಪ್ಪಿಲ್ಲ ಎನ್ನುವಷ್ಟು ಯೋಜನೆಗಳನ್ನು ಅವರು ಅಲ್ಲಿಗೆ ತಂದಿದ್ದಾರೆ. ಅವೆಲ್ಲ ಇನ್ನೂ ಜೀವ ಪಡೆಯಬೇಕಷ್ಟೇ.
ಕಳೆದ ಸಲ ಜಯಚಂದ್ರ ಸೋಲಿಗೆ ಜಯಚಂದ್ರ ಅವರೇ ಕಾರಣರಾದರು. ಆತ್ಮಾವಲೋಕನ ಮಾಡಿಕೊಂಡರೆ ಅವರ ಜನರೊಂದಿಗೇನೆ ಅವರು ನಡೆದುಕೊಂಡ ರೀತಿ ಅವರ ಕಣ್ಣಮುಂದೆ ಈಗ ಸುಳಿದಾಡಬಹುದೇನೋ?
ಈಗ ನಾವು, ಮತ್ತೇ ಬಿಜೆಪಿ ಕಡೆಗೆ ನೋಡೋಣ.
ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಪ್ರಬಲ ಪೈಪೋಟಿ ನೀಡಬಹುದು ಎಂಬುದಷ್ಟೇ ಈಗ ಚರ್ಚೆಯ ವಿಷಯವಾಗಿದೆ ಎನ್ನುತ್ತವೆ ಆ ಪಕ್ಷದ ಮೂಲಗಳು.
ತುಮಕೂರು ಜಿಲ್ಲೆಯ ರಾಜಕಾರಣದ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿರುವ ಸಚಿವ ಸೋಮಣ್ಣ ಅವರು ಉಪ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನೇ ವಹಿಸುತ್ತಿದ್ದಾರೆ. ಅದು ಹೇಗೆಂಬುದು ಬಿಜೆಪಿಯವರಿಗೆ ಚೆನ್ನಾಗಿಯೇ ಗೊತ್ತು. ಅದು ಅವರಲ್ಲಿ ಯಾರಾದರೂ ಒಬ್ಬರು ಬಹಿರಂಗವಾಗಿ ಹೇಳುವವರೆಗೂ ಕಾಯಬೇಕಷ್ಟೆ. ಸೋಮಣ್ಣ ಅವರ ಆಸಕ್ತಿ ಏನಿದೆಯೊ?
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಹೊಸ ಉಪಾಯವೂಂದನ್ನು ಸಹ ಗಳಸ್ಯಕಂಠಸ್ಯದ ಇಬ್ಬರು ನಾಯಕರು ಎಣೆದಿದ್ದಾರೆ. ಅದು ಫಲಕೊಟ್ಟರೆ ಶಾಸಕಿ ಪೂರ್ಣಿಮಾ ಅವರ ಪತಿ, ಗೊಲ್ಲ ಸಮುದಾಯದ ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ಕಾಡುಗೊಲ್ಲ, ಊರು ಗೊಲ್ಲರ ವಿಭಜನೆ ಬೇರೆ ವಿಷಯ.
ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಕ್ಕಿ ಅವರು ಸೋಲಲಿ, ಅಥವಾ ಗೆಲ್ಲಲಿ ಗುಬ್ಬಿ ಕ್ಷೇತ್ರಕ್ಕೆ ಹೊಸ ಲಿಂಗಾಯತ ನಾಯಕನ ಆಗಮನ ಜೋರಾಗಿಯೇ ಆಗಲಿದೆ. ರಾಜಕಾರಣ ಮಗ್ಗಲು ಬದಲಿಸಲಿದೆ.
ಗುಬ್ಬಿಗೆ ಮತ್ತೊಬ್ಬ ವಲಸೆ ಲಿಂಗಾಯತ ನಾಯಕರು ಬರಲಿದ್ದಾರೆ. ಈ ಮೂಲಕ ಮುಂದಿನ ವಿಧಾನಭಾ ಚುನಾವಣೆಯಲ್ಲಿ ಹೊಸ ಪ್ರಯೋಗಾದಾಟಕ್ಕೆ ಶಿರಾ ಚುನಾವಣೆ ಹಾಸುಗಲ್ಲು ಹಾಕುತ್ತಿದೆ.
ಕುಂಚಿಟಿಗರಿಗೆ ಟಿಕೆಟ್ ಕೊಡಬೇಕು ಎಂದು ಬಿಜೆಪಿಯಲ್ಲಿ ಕೆಲವರು ಪಟ್ಟು ಹಿಡಿದ್ದಾರೆ. ಆದರೆ ಯಡಿಯೂರಪ್ಪ ಯಾರ ಮಾತು ಕೇಳುತ್ತಾರೊ ಅವರು ಹೇಳಿದವರಿಗೆ ಟಿಕೆಟ್ ಸಿಗುವುದಂತು ಖಚಿತ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಸಚಿವ ಸುಧಾಕರ್ ಹೆಗಲಿಗೆ ಶಿರಾ ಚುನಾವಣೆಯ ಜವಾಬ್ದಾರಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಇಬ್ಬರು ನಾಯಕರು ಇನ್ನೂ ಪೀಲ್ಡಿಗೆ ಇಳಿದಿಲ್ಲ. ನಿಧನರಾದ ಸತ್ಯನಾರಾಯಣ್ ಅವರ ಮನೆಗಷ್ಟೇ ಭೇಟಿ ನೀಡಿ ಹೋಗಿದ್ದಾರೆ. ಇದರ ಹಿಂದಿರುವ ರಾಜಕಾರಣ ಇಲ್ಲಿ ಬೇರೆ ಹೇಳಬೇಕಾಗಿಲ್ಲ.
ಗೆಲ್ಲದ ಕ್ಷೇತ್ರದಲ್ಲಿ ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಜತೆಗೆ ಜೆಡಿಎಸ್ ಅನ್ನೂ ಹೆದರಿಸಬೇಕಾಗಿದೆ. ಎರಡೂ ಪಕ್ಷಗಳ ಮತಬುಟ್ಟಿಗೆ ಕೈ ಹಾಕಬೇಕಾಗಿದೆ. ಇದರ ಚಾಣಾಕ್ಷತ ಹೇಗೆ ಮೆರೆಯಲಿದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ.
ಇಲ್ಲವಾದರೆ ಈ ಸಲ ಶಿರಾ ಬಿಟ್ಟುಕೊಟ್ಟು ಮುಂದಿನ ಸಲ ಗುಬ್ಬಿ ಕ್ಷೇತ್ರದಲ್ಲಿ ಗೆಲ್ಲುವ ಆಟ ಕಟ್ಟಿದರೆ ಬಿಜೆಪಿಯವರಿಗೆ ಶಿರಾ ಗೆಲ್ಲುವುದಕ್ಕಿಂತಲೂ ಗುಬ್ಬಿ ಗೆಲ್ಲುವುದು ಸುಲಭವಾಗಬಹುದೇನೋ?