Pavagada: ಅಡುಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸುಮಾರು 40 ಸಾವಿರ ಲೀಟರ್ ಗ್ಯಾಸ್ ಸೋರಿಕೆಯಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮುರರಾಯನಹಳ್ಳಿ ಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ಗೊತ್ತಿಲ್ಲದ ಜನರು ತೀವ್ರ ಆತಂಕಗೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಜನರಲ್ಲಿನ ಆತಂಕ ನಿವಾರಣೆಗೆ ಯತ್ನಿಸಿದರು. ಆದರೂ ಜನರು ಸ್ವಯಂಪ್ರೇರಿತರಾಗಿ ಗ್ರಾಮ ತೊರೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ..
ದೊಮ್ಮತ್ತಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುರರಾಯನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆಯಿತು. ಪರಿಣಾಮ ಗ್ಯಾಸ್ ಟ್ಯಾಂಕರ್ ಮುಚ್ಚಳ ಬಿಚ್ಚಿಕೊಂಡು ನೀರಿನಂತೆ ಹರಿಯತೊಡಗಿತು. ಸುಮಾರು ನಾಲ್ಕು ಗಂಟೆ ಕಾಲ ನೀರು ಧುಮಿಕ್ಕುವಂತೆ ಹರಿಯಿತು. ಗ್ಯಾಸ್ ಸುತ್ತಲಿನ ಪರಿಸರದಲ್ಲಿ ಹರಡಿದ್ದರಿಂದ. ಜನರ ಕಣ್ಣು ಉರಿಯತೊಡಗಿವೆ. ಇದರಿಂದ ಮತ್ತಷ್ಟು ಭೀತಿಗೊಂಡಿದ್ದಾರೆ.
ಸ್ಥಳೀಯ ನಿವಾಸಿ ಈ.ಶಿವಣ್ಣ ಮಾತನಾಡಿ, ಅಗ್ನಿಶಾಮಕದಳದ ಸಿಬ್ಬಂದಿ ಬಂದಿದೆ. ಗ್ಯಾಸ್ ವ್ಯಾಪಿಸದಂತೆ ತಡೆಯುವ ಪ್ರಯತ್ನದಲ್ಲಿ ತೊಡಗಿದೆ. ಆದರೂ ಜನರು ಹೆದರಿಕೊಂಡಿದ್ದು ಒಬ್ಬೊಬ್ಬರೇ ಗ್ರಾಮ ತೊರೆಯುತ್ತಿದ್ದಾರೆ ಅಗ್ನಿಶಾಮಕ ದಳದ ಸಿಬ್ಬಂದಿ ಮನವರಿಕೆ ಮಾಡಿದರೂ ಒಂದು ವಾರದ ಮಟ್ಟಿಗೆ ಬೇರೆ ಕಡೆ ವಾಸ ಮಾಡಲು ತರೆಳುತ್ತಿದ್ದಾರೆ. ಮುಂದೆ ಏನಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕ ಗ್ರಾಮಸ್ಥರದ್ದು ಎಂದು ನಾನುಗೌರಿ.ಕಾಮ್ ಗೆ ದೂರವಾಣಿಯಲ್ಲಿ ತಿಳಿಸಿದರು.
ಅಪಾರ ಪ್ರಮಾಣದ ಗ್ಯಾಸ್ ಸೋರಿಕೆಯಾಗಿರುವುದರಿಂದ ಪರಿಸರಕ್ಕೆ ಏನಾದರೂ ಅಪಾಯವಾಗಬಹುದೇ? ಜನರಿಗೆ ತೊಂದರೆಯಾಗಬಹುದೇ ಎಂಬುದನ್ನು ಅಧ್ಯಯನ ಮಾಡಲು ಬೆಂಗಳೂರಿನಿಂದ ತಜ್ಞರ ತಂಡ ವೊಂದು ಬರುತ್ತಿದೆ. ಬಂದು ಸಂಫೂರ್ಣ ಮಾಹಿತಿ ಕಲೆಹಾಕಿ ಅಗತ್ಯ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ. ವೆಲ್ಟಿಂಗ್ ಮಾಡುವ ಗ್ಯಾಸ್ ಇರಬಹುದು ಎಂದು ಅಗ್ನಿಶಾಮಕ ದಳ ಹೇಳುತ್ತಿದ್ದರೆ, ತಹಶೀಲ್ದಾರ್ ವರದರಾಜು ‘ಅದು ಎಚ್.ಪಿ. ಗ್ಯಾಸ್. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿದೆ. ಪರಿಸ್ಥಿತ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟೀಕರಣ ನೀಡಿದರು.
ಗ್ಯಾಸ್ ಸೋರಿಕೆಯು ಸುತ್ತಲ ಮೂರ್ನಾಲ್ಕು ಗ್ರಾಮಗಳಿಗೆ ಪರಿಣಾಮ ಬೀರಿದೆ. ಕೆಟ್ಟ ವಾಸನೆ ಬರುತ್ತಿದೆ. ಗ್ಯಾಸ್ ಸೋರಿಕೆ ಅಪಾಯದಿಂದ ಗ್ರಾಮದ ಒಬ್ಬೊಬ್ಬರೇ ತೊರೆದು ಬೇರೆ ಕಡೆ ಹೋಗುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಜನರಿಗೆ ಅಭಯ ನೀಡಬೇಕು. ಜನರಲ್ಲಿರುವ ಆತಂಕ ದೂರಮಾಡುವ ಕೆಲಸ ಮಾಡಬೇಕಾಗಿದೆ.