ತುಮಕೂರು: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಂಥೆಂತವರೊ ಸ್ಪರ್ಧಿಸುತ್ತಾರೆಂದು ಮೂಗು ಮುರಿಯುವ ಮಂದಿಗೆ ಕುಚ್ಚಂಗಿಪಾಳ್ಯದ ಅಭ್ಯರ್ಥಿಯನ್ನು ನೋಡಿದರೆ ಹುಬ್ಬೇರುತ್ತಾರೆ.
ಈ ಊರಿನ ಜನರಿಂದ ಕುಮಾರಣ್ಣ ಎಂದೇ ಕರೆಸಿಕೊಳ್ಳುವ ಕೆ.ವಿ. ಶಿವಕುಮಾರ್ ಅವರು ಇದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಚುನಾವಣಾ ಪ್ರಣಾಳಿಕೆಯೇ ಗಮನ ಸೆಳೆಯುತ್ತಿದೆ.
ಮೇಲ್ನೋಟಕ್ಕೆ ಯಾವುದೇ ಪಕ್ಷದ ಬೆಂಬಲಿತ ವ್ಯಕ್ತಿ ಅಲ್ಲ, ಅದರೆ ಎಲ್ಲ ಪಕ್ಷಗಳ ಜನರ ಬೆಂಬಲಿತ ವ್ಯಕ್ತಿ ಎಂದೇ ಬಿಂಬಿತಗೊಂಡಿದ್ದಾರೆ.
ನಾನು ಇದೂವರೆಗೂ ಯಾವುದೇ ಚುನಾವಣೆಗೆ ನಿಂತವನಲ್ಲ ಎನ್ನುವ ಅವರು ಊರುವರ ಅವರ ಬಗ್ಗೆ ಹೇಳುವ, ಮಾತನಾಡುವ ಮಾತುಗಳನ್ನೇ ಅವರದೇ ಗ್ರಾಮ್ಯ ಭಾಷೆಯಲ್ಲಿ ಕರಪತ್ರ ಮುದ್ರಿಸಿದ್ದಾರೆ.
ಊರಿನ ಹುಡುಗ್ರು ಹೇಳಿದ್ರು, ನಮ್ಮೂರ ಭಾಷೆಯಲ್ಲಿ ಮತ ಕೇಳಾಣ ಅಂದ್ರು. ಹೀಗಾಗಿ ನಮ್ಮೂರ ಭಾಷೆಯಲ್ಲೇ, ನಮ್ಮ ಜನ, ನನ್ನ ಬಗ್ಗೆ ಹೇಳುವುದನ್ನೇ ಕರಪತ್ರ ಮಾಡಿದ್ದೇನೆ ಎನ್ನುತ್ತಾರೆ ಈ ಕುಮಾರಣ್ಣ.
ನನ್ನದು ಟ್ರ್ಯಾಕ್ಟರ್ ಗುರುತು. ಇದು ರೈತನ ಸಂಕೇತವೂ ಹೌದು. ರೈತನಿದ್ದರೆ ದೇಶ. ಗ್ರಾಮದ ಜನರ ಅಭಿವೃದ್ಧಿ ಆಗದೇ ದೇಶ ಅಭಿವೃದ್ದಿ ಆಗುವುದು ಹೇಗೆ? ಬೀದಿಯಲ್ಲಿ ಕೆಟ್ಟುಹೋದ ಬಲ್ಬ ಬದಲಿಸುವುದೇ ಅಭಿವೃದ್ಧಿ ಯೇ? ಚರಂಡಿ ಮಾಡಿಕೊಡಲಷ್ಟೇ ಗ್ರಾಮ ಪಂಚಾಯಿತಿ ಸದಸ್ಯನ ಕೆಲಸವೇ? ಅದಕ್ಕಿಂತ ಮಿಗಿಲಾದ ಕೆಲಸ ನಾವು ಮಾಡಿ ತೋರಿಸಬೇಕಾಗಿದೆ. ಹೀಗಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎನ್ನುತ್ತಾರೆ ಅವರು.
ಸುಪ್ರೀಂಕೋರ್ಟ್ ಪ್ರಕಾರ, ಗ್ರಾಮ ಪಂಚಾಯತಿಗಳೇ ಸುಪ್ರೀಂ.ಇಲ್ಲಿ ತೆಗೆದುಕೊಂಡ ನಿರ್ಧಾರ ಬದಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಇಲ್ಲ, ಕೇಂದ್ರ ಸರ್ಕಾರಕ್ಕೂ ಇಲ್ಲ. ಹಾಗಾದರೆ, ಗ್ರಾಮ ಪಂಚಾಯತಿಗಳು ಈ ಕೆಲಸ ಮಾಡುತ್ತಿವೆಯೇ? ಎಂಬ ಮರುಪ್ರಶ್ನೆ ಅವರದು.
ನನ್ನ ಪ್ರಣಾಳಿಕೆಯೇ ನನ್ನ ಚಿಂತನೆಗಳನ್ನು ಹೇಳುತ್ತದೆ. ನನ್ನ ಪ್ರಣಾಳಿಕೆಯ ಅಂಶಗಳು ಜಾರಿಯಾದರೆ ಮಾತ್ರ ನಿಜವಾದ ಅರ್ಥದಲ್ಲಿ ಗ್ರಾಮ ಜನರ ಸಬಲೀಕರಣ ಸಾಧ್ಯ. ಜನರು ಸಹ ಈ ಹೊಸ ಪ್ರಯತ್ನ, ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಏನೀನಿ ಪ್ರಣಾಳಿಕೆಗಳು
1) ಎರಡೂ ಊರುಗಳ ಮಕ್ಕಳ ಆನ್ ಲೈನ್ ಶಿಕ್ಷಣವೂ ಸೇರಿದಂತೆ, ಗ್ರಾಮದ ಸರ್ವರ ಸದುದ್ದೇಶಗಳಿಗೆ ವೈ-ಫೈ ಅಳವಡಿಕೆಗೆ ಪಂಚಾಯಿತಿಯ ಮೂಲಕ ಪ್ರಯತ್ನಿಸುವುದು.
(2) ನಮ್ಮ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಹೊರಗಿನ ದಾನಿಗಳು ಮತ್ತು ಹಳೆಯ ವಿದ್ಯಾರ್ಥಿ ಸಂಘದಿಂದ ಉನ್ನತಿಕರಣ ಹಾಗೂ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್.
(3) ಹೈಸ್ಕೂಲ್ ನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನೆಡೆಸಲು ಎಕ್ಸ್ಪರ್ಟ್ ಉಪನ್ಯಾಸಕರಿಂದ ತರಬೇತಿ ನೀಡಿ,ಲಂಚವಿಲ್ಲದೇ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಅನುಕೂಲ ಕಲ್ಪಿಸುವುದು.
(4) ಗ್ರಾಮದ ನಿರುದ್ಯೋಗ ಯುವಕ-ಯುವತಿಯರಿಗಾಗಿ ಖಾಸಗಿ ಸಂಸ್ಥೆಗಳ ಜೊತೆಗೂಡಿ ಉದ್ಯೋಗ ತರಬೇತಿ ಮತ್ತು ಮೇಳ ಏರ್ಪಡಿಸುವುದು.
(5) ಮಕ್ಕಳು, ಕಲಾವಿದರು, ವಯಸ್ಸಾದ ಹಿರಿಯ ಜೀವಿಗಳು ಒಂದೇ ಕಡೆ ಕಲೆಯಲು ಇರುವ ಶಾಲೆಯ ಆವರಣದ ಸುತ್ತ ವಾಕಿಂಗ್ ಪಾಥ್, ಆರಾಮ ಕುರ್ಚಿಗಳನ್ನ ಅಳವಡಿಸಲು ನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸುವುದು.
(6)ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ವಿವಿಧ ಸಂಪನ್ಮೂಲ/ ವ್ಯಕ್ತಿಗಳಿಂದ ರಸೀದಿ ಮೂಲಕ ಹಣ ಸಂಗ್ರಹಿಸಿ ಉಸ್ತುವಾರಿ ಮುಖಂಡರಿಗೆ ತಲುಪಿಸುವುದು.
(7) ಪಾಳು ಬಿದ್ದಿರುವ ಹಳೆಯ ಶಾಲೆಯನ್ನು ನವೀಕರಣಗೊಳಿಸಿ ಕಲಾವಿದರು ಮತ್ತು ಮಕ್ಕಳು ತಮ್ಮ ಕಲೆ ಪ್ರದರ್ಶಿಸಲು ಅನುಕೂಲವಾಗುವಂತೆ ಮಾಡುವುದು.
ನಮ್ಮ ಕುಟುಂಬ ಮೊದಲಿನಿಂದಲೂ ಗ್ರಾಮದ ಸೇವೆಯಲ್ಲಿ ತೊಡಗಿಕೊಂಡಿದೆ. ರಾಜಕೀಯ ಶಕ್ತಿ ಜನರ ಸೇವೆ ಮಾಡಲು ಮತ್ತಷ್ಟು ಅವಕಾಶ ಸಿಗಲಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು. https://publicstory.in ಗೆ ತಿಳಿಸಿದರು.
ಇದೊಂದು ವಿಶೇಷ ಚಿಂತನೆ. ಈ ಸಲ ಎಲೆಕ್ಷನ್ ಜೋರಾಗಿದೆ. ಎಲ್ಲ ನೋಡಿ ಮತ ಹಾಕಬೇಕಾಗಿದೆ ಎನ್ನುತ್ತಾರೆ ಕುಚ್ಚಂಗಿ, ಕುಚ್ಚಂಗಿಪಾಳ್ಯದ ಜನರು.