ನವದೆಹಲಿ; ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಎಲೆಕ್ಟೋರಲ್ ಬಾಂಡ್ ದೊಡ್ಡ ಹಗರಣ ಎಂದು ಆರೋಪಿಸಿದರು.
ಸುಮಾರು ಹದಿನೈದು ನಿಮಿಷ ಸದನದ ಬಾವಿಯಲ್ಲೇ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ ನಂತರ ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಿಗೆ ಹೋಗಿ ಕುಳಿತರು.
ಚುನಾವಣಾ ದೇಣಿಗೆ ದೊಡ್ಡ ಹಗರಣವಾಗಿದೆ. ದೇಶವನ್ನು ಲೂಟಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಚನ್ ಚೌದರಿ ಆಗ್ರಹಿಸಿದರು.
ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಸದಸ್ಯರು ಬಾವಿಗೆ ಬಂದ ಪ್ರತಿಭಟಿಸಿ ಸದನದ ಗೌರವ ಕಳೆಯಬೇಡಿ. ಇದು ತಪ್ಪು. ಕ್ರೀಡಾಪಟುಗಳ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಬಾವಿಗೆ ಇಳಿದು ಸಭಾಧ್ಯಕ್ಷರೊಂದಿಗೆ ಮಾತನಾಡುವುದು ಸರಿಯಲ್ಲ ಎಂದು ಸ್ಪೀಕರ್ ತಿಳಿಸಿದರು.
ಸದನಕ್ಕೆ ಘನತೆ ಮತ್ತು ಗೌರವವಿದೆ. ಇದನ್ನು ಲೋಕಸಭಾ ಸದಸ್ಯರು ಕಾಪಾಡಬೇಕು. ನಾನು ಹೊಸ ಸದಸ್ಯ. ನೀವು ಹಿರಿಯರು ಇದ್ದೀರಿ. ನೀವು ಸದನದ ಬಾವಿಗೆ ಬರಬೇಡಿ ಎಂದು ಮನವಿ ಮಾಡಿದರು.
ಕಲಾಪ ಸುಸೂತ್ರವಾಗಿ ನಡೆಯಲು ಪ್ರತಿಪಕ್ಷಗಳು ಸಹಕರಿಸುತ್ತವೆ. ನಮಗೆ ಚರ್ಚೆ ಮಾಡಲು ಅವಕಾಶ ಕೊಡಿ. ಸ್ಪೀಕರ್ ನಮಗೆ ಸಹಕರಿಸಬೇಕು ಎಂದು ಕೇಳಿಕೊಂಡರು.