ಬೆಳಗುಂಬ ವೆಂಕಟೇಶ್
Tumkuru: ಲೇ ಯಾರೂ ಹಸ್ಕೊಂಡು ಇರಬಾರದು. ಮೊದಲು ಊಟ, ಟೀ ಅಮೇಲೇನಿದ್ದರೂ ಕಷ್ಟದ ಮಾತು. ಹೀಗೆ ಹೇಳುತ್ತಿದ್ದ ಮಾಜಿ ಸಚಿವರಾದ
ಚೆನ್ನಿಗಪ್ಪನವರ ಮನೆ ಎಂದರೆ ಕಡು ಬಡವರಿಗೆ, ಜನ ಸಾಮಾನ್ಯರಿಗೆ ಯಾವಾಗಲೂ ತೆರೆದಿರುತ್ತಿದ್ದ ದೇವರ ಮನೆ.
ದೇವಸ್ಥಾನಗಳಲ್ಲಿ ಮೊದಲಿಗೆ ಕಷ್ಟ ಹೇಳಿಕೊಂಡು ನಂತರ ಪ್ರಸಾದವಾದರೆ ಈ ಜನಸಾಮಾನ್ಯರ ದೇವರ ಮನೆಯಲ್ಲಿ ಮೊದಲಿಗೆ ಪ್ರಸಾದ (ಊಟ) ನಂತರ ಕೋರಿಕೆಗಳ ಮಾತು.
ಲೇ ನನ್ನವ್ವನಿಗೆ ಎದೆ ಹಾಲು ಇರಲಿಲ್ಲ. ಪಕ್ಕದೂರಿನ ದಲಿತ ತಾಯಿ ಗಂಗವ್ವನ ಎದೆ ಹಾಲು ಕುಡಿದು ಬೆಳೆದವ ನಾನು. ಇಟ್ಟಿನ ತಪ್ಪಲೆಯ ಸೀಕೇ ನಮ್ಮ ಊಟ. ಹರಿದ ಚೆಡ್ಡಿಯೇ ನನ್ನ ಬಟ್ಟೆ ಎಂದು ನನ್ನೊಂದಿಗೆ ಯಾವಾಗಲೂ ನೆನಪು ಮಾಡಿಕೊಳ್ಳುತ್ತಿದ್ದ ಚೆನ್ನಿಗಪ್ಪ ಸಾಹೇಬರಿಗೆ ಯಾವ ರಾಜಕಾರಣಿಯೂ ಸಾಟಿ ಆಗಲಾರರು ಎಂದೇ ನನಗೆ ಅನ್ನಿಸುತ್ತಿದೆ.
ದಲಿತ ತಾಯಿ ಎದೆ ಹಾಲು ಕುಡಿದು ಬೆಳೆದ ಮಗ ಎಂಬುದನ್ನೂ ಅವರು ಸಾಯುವ ಕೊನೆವರೆಗೂ ಮರೆಯಲೇ ಇಲ್ಲ. ಬಡವರನ್ನು ಕಂಡರೆ ಅವರಿಗೆ ಅವರ ಅರಾಧ್ಯ ದೇವರಾದ ಹದ್ದಿನಕಲ್ಲು ಆಂಜನೇಯ ಸ್ವಾಮಿ ಕಂಡಷ್ಟೇ ಸಂತಸ. ಹೀಗಾಗಿಯೇ ಅವರ ಬಳಿ ಬಡವರು ಸಹಾಯ ಕೇಳಿದರೆ ತಮ್ಮ ಕೈಯಲ್ಲಿ ಇದ್ದುದ್ದನ್ನೆಲ್ಲ ಕೊಟ್ಟು ಬಿಡುತ್ತಿದ್ದರು. ಕೇಳಿದರೆ, ಆಂಜನೇಯ ಇದ್ದಾನೆ, ಅವನು ಕೊಡ್ತಾನೆ, ನಾನೇನು ಕೊಡೋದು ಅನ್ನೋರು.
ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿ ಆಗಿದ್ದ ಅವರಿಗೆ ಮಠದ ಬಗ್ಗೆ, ಶಿವಕುಮಾರ ಸ್ವಾಮಿಗಳ ಬಗ್ಗೆ ಇನ್ನಿಲ್ಲದ ಗೌರವ. ಮಠಕ್ಕೆ ಅವರು ಕೊಟ್ಟಿರುವಷ್ಟು ಅಕ್ಕಿಯನ್ನು ಯಾರೂ ಕೊಟ್ಟಿರಲಾರರು.
ನನನ್ನು ಬಲ್ಲೇ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಅವರು ಮೂರು ದಿನ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಬರುತ್ತೇನೆ ಎಂದು ಹೇಳಿದ್ದರು.
ನಾನು ಹುಷಾರು ತಪ್ಪಿದಾಗ ಅವರು ಮಾಡಿದ ಆರೈಕೆ ನಾನು ಮರೆಯಲಾರೆ. ಅವರ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲ.
ತಂದೆ ಹಾಕಿಕೊಟ್ಟ ದಾರಿಯಲ್ಲಿ ಅವರ ಮಗ, ಶಾಸಕ ಗೌರಿಶಂಕರ್ ಅವರು ನಡೆಯುವುದನ್ನು ನಾವು ಕಾಣುತ್ತಿದ್ದೇವೆ. ಚನ್ನಿಗಪ್ಪ ಸಾಹೇಬರನ್ನು ನಾವೆಂದೂ ಮರೆಯಲು ಸಾಧ್ಯವೇ ಇಲ್ಲ.
ಲೇಖಕರು ಚೆನ್ನಿಗಪ್ಪ ಅವರೊಂದಿಗೆ ತೀರಾ ಆತ್ಮೀಯತೆ ಹೊಂದಿದ್ದರು.