ಸಂಸದ ಜಿ.ಎಸ್. ಬಸವರಾಜು ಬುಧವಾರ ತುಮಕೂರು ನಗರದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ವೀಕ್ಷಿಸಿದರು.
ಸರ್ಕಾರ ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಸಮಗ್ರ ಅಂಕಿ-ಅಂಶಗಳ ಕ್ರೂಢೀಕೃತ ಮಾಹಿತಿ ಅತ್ಯಗತ್ಯ. ಹಾಗಾಗಿ ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳ ಭೌಗೋಳಿಕ ಗುರುತು ಮಾಹಿತಿಗಾಗಿ ಬೇಸ್ ಮ್ಯಾಪ್ ತಯಾರಿಸಲು ಉದ್ದೇಶಿಸಿದೆ.
ಪ್ರತಿಯೊಂದು ಇಲಾಖೆ ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಮಂಜೂರಾತಿ ಹಂತದಲ್ಲಿರುವ, ಹೊಸ ಪ್ರಸ್ತಾವನೆಗಳು ಹಾಗೂ ಪುನರ್ ನವೀಕರಣ ಯೋಜನೆಗಳ ಪ್ರಗತಿ ಅಂಕಿ-ಅಂಶಗಳನ್ನು ದೂರ ಸಂವೇದನಾ ಇಲಾಖೆ ಮೂಲಕ ಸಂಗ್ರಹಿಸಿ ದಾಖಲಿಸಿ ಬೇಸ್ ಮ್ಯಾಪ್ ತಯಾರಿಸಬೇಕು ಎಂದರು.
ಪ್ರತೀ ಗ್ರಾಮದ ಕೆರೆ-ಕಟ್ಟೆ, ಕೊಳವೆಬಾವಿ, ತೆರೆದ ಬಾವಿ, ಜನಸಂಖ್ಯೆ, ಕುಟುಂಬ, ರಸ್ತೆ, ಮನೆ, ಕೃಷಿಭೂಮಿ, ಸರ್ಕಾರಿ ಜಮೀನು, ಶಾಲೆ, ಮರ-ಗಿಡ, ಅಂಗನವಾಡಿ ಕೇಂದ್ರ, ಆಸ್ಪತ್ರೆ, ಸಂಘ-ಸಂಸ್ಥೆ, ವಿವಿಧ ಇಲಾಖೆಗಳ ಅಧಿಕಾರಿ/ನೌಕರರು ಹಾಗೂ ಮತ್ತಿತರ ಅಂಕಿ-ಅಂಶಗಳ ಸ್ಥಿತಿ-ಗತಿ ಅರಿತು ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ.
ಪಂಚಾಯತಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಾರಂಭಿಸಲಾಗಿರುವ ಮಿಷನ್ ಅಂತ್ಯೋದಯ ಕಾರ್ಯಕ್ರಮಕ್ಕೆ ಪೂರಕವಾಗಿ ನೆರವಾಗಬೇಕು ಎಂದು ಸೂಚಿಸಿದರು.