Publicstory. in
ತುಮಕೂರು: ಮಕ್ಕಳ ಮನಸ್ಸು ಮೃದು. ಮಕ್ಕಳ ಮನಸ್ಸು ಶುದ್ದ ನೀರಿನಂತೆ. ನೀರಿಗೆ ನಿರ್ಧಿಷ್ಟ ಆಕಾರವಿರುವುದಿಲ್ಲ. ಅದೇ ರೀತಿ ಮಕ್ಕಳ ವ್ಯಕ್ತಿತ್ವ ನೀರನ್ನು ಹಿಡಿದಿಡುವ ಪಾತ್ರೆಯ ಅಕಾರ ಪಡೆಯುತ್ತದೆ. ಒಳ್ಳೆಯ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ, ಶಿಕ್ಷಕರ ಹಾಗು ಸಮಾಜದ ಜವಾಬ್ದಾರಿ ಸರಿಸಮನಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಆಲೋಚನೆಗಳ, ಉತ್ತಮ ಸಂಸ್ಕಾರ ಚಿಂತನೆ ಬಿತ್ತಬೇಕಾಗಿದೆ ಎಂದು ತುಮಕೂರಿನ ನರ ಹಾಗು ಮಾನಸಿಕ ರೋಗ ತಜ್ಞ ಡಾ. ಲೋಕೇಶ್ ಬಾಬು ತಿಳಿಸಿದರು. ಮರಳೂರು ರಿಂಗ್ ರಸ್ತೆಯಲ್ಲಿರುವ ಟಾಡ್ಲರ್ಸ್ ಕ್ಯಾಸೆಲ್ ಇಂಟರ್ ನ್ಯಾಷನಲ್ ಪ್ರಿ-ಸೂಲ್ಕ್ ನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಸ್ಪಾರ್ಕೆಲ್ -2020 ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಯಾವುದೇ ಒತ್ತಡ ನೀಡದೆ ಉತ್ತಮ ಅಭ್ಯಾಸಗಳ ಹಾಗು ಚಟುವಟಿಕೆಗಳ ಮೂಲಕ ಉತ್ತಮ ಶಿಕ್ಷಣ ಮತ್ತು ಉನ್ನತ ವ್ಯಕಿತ್ವ ಹೊಂದಲು ಅವಕಾಶ ಮಾಡಿಕೊಡಬೇಕೆಂದು ಪೋಷಕರಿಗೆ ಸಲಹೆ ನೀಡಿದರು. ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹಾಗು ಆತ್ಮವಿಶ್ವಾಸದ ಕೊರತೆ ಕಂಡುಬರುತ್ತಿದ್ದು ಇದಕ್ಕೆಲ್ಲಾ ಅಸಮಂಜಸ ಬಾಲ್ಯ ಚಟುವಟಿಕೆಗಳೇ ಮೂಲಕಾರಣ. ಪೋಷಕರ ವಿವೇಕ ರಹಿತ ನಡವಳಿಕೆಗಳೂ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಎಚ್ಚರಿಸಿದರು. ಹಿರಿಯ ಪ್ರಾದ್ಯಾಪಕ ಡಾ. ಎಂ.ಎಸ್. ಕೇಶವ್ ಪೋಷಕರಿಗೆ ಆಹಾರ ಪದ್ದತಿಯ ಮಹತ್ವ ತಿಳಿಸಿಕೊಟ್ಟರು. ಬೆಳೆಯುವ ಮಕ್ಕಳಿಗೆ ಪೌಷ್ಠಿಕ ಆಹಾರದ ಅಗತ್ಯ ಹೆಚ್ಚಾಗಿದ್ದು ಉತ್ತಮ ಅಹಾರ ಪದ್ದತಿಯನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು. ನೈಸರ್ಗಿಕ ರೋಗ ನಿರೋಧಕ ಗುಣಗಳನ್ನು ಮಕ್ಕಳು ಹೊಂದಲು ಪೌಷ್ಠಿಕ ಆಹಾರ ಅತ್ಯವಶ್ಯಕ ಎಂದು ತಿಳಿಸಿದರು. ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಉತ್ತಮ ಕಲಿಕಾ ವಾತಾವರಣವನ್ನು ಮಕ್ಕಳ ಬೌದ್ಧಿಕ ಬೆಳವಣಿಗೆಯ ಅಗತ್ಯಕ್ಕೆ ಅನುಸಾರವಾಗಿ ದೊರಕುವಂತೆ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಜಬ್ಬೀರ್ ಮನ್ಸೂರ್ ತಿಳಿಸಿದರು, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ, ಪೋಷಕರಿಗೆ ಹಾಗು ಶಾಲೆಯ ಸಿಬ್ಬಂದಿ ವರ್ಗದವರಿಗೆ ಬಹುಮಾನ ವಿತರಣೆ ಮಾಡಲಾಯಿತು, ಕಾರ್ಯಕ್ರಮವನ್ನು ಪ್ರಾಂಶುಪಾಲ ದೀಪಿಕಾ ನಿರೂಪಿಸಿದರು. ಆಡಳಿತಾಧಿಕಾರಿ ಮಲ್ಲೇಶ್ ಸ್ವಾಗತಿಸಿದರು. ಶಿಕ್ಷಕಿ ಅಫ್ರಾ ವಂದಿಸಿದರು.