ತುಮಕೂರು: ಯಾವುದೇ ನೋಟೀಸ್ ನೀಡದ ಪಿಎಲ್.ಡಿ ಬ್ಯಾಂಕ್ ಅಧಿಕಾರಿಗಳು ಜಪ್ತಿಮಾಡಿದ್ದ ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ಪ್ರಸಂಗ ತುಮಕೂರಿನಲ್ಲಿ ನಡೆಯಿತು. ಬಿ.ಎಚ್.ರಸ್ತೆಯಲ್ಲಿರುವ ಪಿಎಲ್.ಡಿ. ಬ್ಯಾಂಕ್ ಗೇಟ್ ಬೀಗ ಮುರಿದ ರೈತರು ಟ್ರಾಕ್ಟರ್ ಅನ್ನು ಸಂಬಂಧಪಟ್ಟ ರೈತರಿಗೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿ ರೈತರೊಬ್ಬರು ಕಳೆದ ನಾಲ್ಕು ವರ್ಷಗಳ ಹಿಂದೆ ಪಿಎಲ್.ಡಿ. ಬ್ಯಾಂಕ್ ನಲ್ಲಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ಅಂದು ಬ್ಯಾಂಕ್ ನಿಂದ 7 ಲಕ್ಷ ಸಾಲ ಪಡೆದಿದ್ದ ರೈತರು ಅರ್ಧಕ್ಕೂ ಹೆಚ್ಚಿನ ಸಾಲವನ್ನು ತೀರಿಸಿದ್ದರು.
ಅಂದರೆ ಟ್ರಾಕ್ಟರ್ ಮೇಲೆ 5.58ಲಕ್ಷ, ಬದುಹಾಕಲು 60 ಸಾವಿರ, ಅಡಿಕೆ ಡೆವಲಪ್ಮೆಂಟ್ ಗಾಗಿ 90 ಸಾವಿರ ಸಾಲವನ್ನು ಪಿಎಲ್.ಡಿ. ಬ್ಯಾಂಕ್ ನಿಂದ ಪಡೆದಿದ್ದರು. ಇದರಲ್ಲಿ ಟ್ರಾಕ್ಟರ್ ನ ಬಾಬ್ತು 3 ಲಕ್ಷ, ಬದು ಹಾಕುವ ಬಾಬ್ತು 30 ಸಾವಿರ ಮತ್ತು ಅಡಿಗೆ ಅಭಿವೃದ್ಧಿ ಬಾಬ್ತು 80 ಸಾವಿರ ಸಾಲವನ್ನು ಬ್ಯಾಂಕ್ ಗೆ ಪಾವತಿಸಲಾಗಿತ್ತು.
ಎರಡು ವರ್ಷದ ಹಿಂದೆ ಸಾಲ ಪಡೆದಿದ್ದ ರೈತ ಮೃತರಾಗಿದ್ದರು. ಬಹುತೇಕ ಸಾಲವನ್ನು ಮೃತ ರೈತನ ಕುಟುಂಬ ತೀರಿಸಿತ್ತು. ಆದರೆ ಜನವರಿ 09ರಂದು ದಿಢೀರ್ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಸಂಬಂಧಪಟ್ಟ ರೈತನಿಗೆ ನೋಟೀಸ್ ನೀಡದೆ, ಮಾಹಿತಿಯನ್ನೂ ಕೊಡದೆ ಟ್ರಾಕ್ಟರ್ ಜಪ್ತಿ ಮಾಡಿಕೊಂಡು ಬಂದಿದ್ದಾರೆ.
ವಿಷಯ ತಿಳಿದ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ತುಮಕೂರು ನಗರದ ಪಿಎಲ್.ಡಿ. ಬ್ಯಾಂಕ್ ಗೆ ಬಂದ ರೈತರು ಟ್ರಾಕ್ಟರ್ ಅನ್ನು ಮರುಜಪ್ತಿ ಮಾಡಿದರು.
ಈ ಸಂದರ್ಭದಲ್ಲಿ ಪಬ್ಲಿಕ್ ಸ್ಟೋರಿ.ಇನ್ ಜೊತೆ ಮಾತನಾಡಿದ ಆನಂದ್ ಪಟೇಲ್, ಬ್ಯಾಂಕ್ ನಿಂದ ಸಾಲ ಪಡೆದ ರೈತ ಮುಕ್ಕಾಲು ಭಾಗ ತೀರಿಸಿದ್ದಾರೆ. ರೈತ ಮೃತಪಟ್ಟು ಎರಡು ವರ್ಷಗಳ ನಂತರ ನೋಟಿಸ್ ನೀಡದೆ ಕಳ್ಳರಂತೆ ಅಧಿಕಾರಿಗಳು ಟ್ರಾಕ್ಟರ್ ಜಪ್ತಿ ಮಾಡಿದ್ದಾರೆ. ಇದು ಸರಿಯಲ್ಲ. ಹೀಗಾಗಿಯೇ ನಾವು ಮರುಜಪ್ತಿ ಮಾಡಿದ್ದೇವೆ. ಇನ್ನು ಮುಂದೆ ಅಧಿಕಾರಿಗಳು ರೈತರ ಮನೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ಜಪ್ತಿ ಮಾಡಿದರೆ ಕಂಬಕ್ಕೆ ಕಟ್ಟಿಹಾಕಿ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪಿಎಲ್.ಡಿ. ಬ್ಯಾಂಕ್ ಅಧಿಕಾರಿಗಳು ಟ್ರಾಕ್ಟರ್ ಗಾಗಿ ಸಾಲನ ನೀಡಿದ ಮೇಲೆ ಅದಕ್ಕೆ ವಿಮೆ ಮಾಡಿಸಬೇಕಿತ್ತು. ಟ್ರಾಕ್ಟರ್ ಗೆ ವಿಮೆ ಮಾಡಿಸಿದ್ದರೆ ರೈತ ಮೃತಪಟ್ಟ ಮೇಲೆ ವಿಮೆ ಹಣ ಬರುತ್ತಿತ್ತು. ಆದರೆ ವಿಮೆ ಮಾಡಿಸಿಲ್ಲ. ಅದು ಅಧಿಕಾರಿಗಳ ತಪ್ಪು. ರೈತ ಸಾವನ್ನಪ್ಪಿದ ಮೇಲೆ ಸಾಲ ಮನ್ನಾ ಮಾಡಬೇಕಾಗಿತ್ತು. ಅದನ್ನು ಮಾಡಲಿಲ್ಲ. ಈಗ ಏಕಾಏಕಿ ಟ್ರಾಕ್ಟರ್ ಜಪ್ತಿ ಮಾಡಿದರೆ ರೈತರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ಸರ್ಕಾರಗಳು ಜನರ ವಿರುದ್ಧ ಬಂಡೆದ್ದಿವೆ. ರೈತರು ಪ್ರತಿಭಟನೆ ನಡೆಸಿದರೆ ಕಾನೂನು ಪ್ರಯೋಗ ಮಾಡಬಹುದು. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ರೈತರು ಏನು ಮಾಡಲು ಸಾಧ್ಯವೆಂಬ ಧೋರಣೆಯನ್ನು ಸರ್ಕಾರ ತಳೆದಿದೆ. ಈ ಹಿನ್ನೆಲೆಯಲ್ಲಿ ರೈತರು ಕೂಡ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಿದ್ದರೆ ಕೊಬ್ಬರಿಗೆ 50 ಸಾವಿರ ರೂಪಾಯಿ ಸಿಗುತ್ತಿತ್ತು. ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ರೈತರು ಸುಲಭವಾಗಿ ತೀರಿಸುತ್ತಿದ್ದರು. ಆದರೆ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ರೈತರ ಪರ ಎಂದು ಹೇಳುತ್ತಾರೆ. ಬರಗಾಲದ ಹಿನ್ನೆಲೆಯಲ್ಲಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಹೇಳುತ್ತಿದ್ದರೂ ಅಧಿಕಾರಿಗಳು ಹಿಂಬಾಗಿಲ ಮೂಲಕ ಪ್ರವೇಶ ಮಾಡುತ್ತಿದ್ದಾರೆ. ದೌರ್ಜನ್ಯ ನಡೆಸುತ್ತಿದ್ದಾರೆ. ಇದು ನಿಲ್ಲಬೇಕು. ಇಲ್ಲದೇ ಹೋದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿಹಾಕುವ ಚಳವಳಿ ಆರಂಭಿಸುತ್ತೇವೆ ಎಂದು ಹೇಳಿದರು.