ವರದಿ: ಕರೀಕೆರೆ ಪ್ರಶಾಂತ್
ತಿಪಟೂರು : ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಎತ್ತಿನಹೊಳೆ ನೀರು ತುಂಬಿಸಬೇಕು ಹಾಗೂ ಭೂ ಸಂತ್ರಸ್ತರಿಗೆ ನ್ಯಾಯಯುತ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ನಾಗತೀಹಳ್ಳಿ ಗೇಟ್‌ನಿಂದ ಬಿದಿರೆಗುಡಿ ಮಾರ್ಗವಾಗಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಎತ್ತಿನಹೊಳೆ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಲ್ನೆಡಿಗೆ ಜಾಥ ಹಮ್ಮಿಕೊಳ್ಳಲಾಗಿತ್ತು.
ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಯೋಜನೆ ಪ್ರಾರಂಭದಿಂದಲೂ ರೈತರಿಗೆ ಹಸಿ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ. ಜನಪ್ರತಿನಿಧಿಗಳು ಗುತ್ತಿಗೆದಾರರ ಪರವಾಗಿದ್ದಾರೆ ಹೊರತು ರೈತರ ಪರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಸಾವಿರಾರು ಎಕರೆಯಷ್ಟು ಭೂಮಿಯನ್ನು ಕಳೆದುಕೊಂಡು ರೈತರು ಅತಂತ್ರ ಸ್ಥಿತಿಗೆ ತಲುಪಲಿದ್ದು ನೀರಿನ ಹಂಚಿಕೆ ಆಗದಿದ್ದರೆ ರೈತರು ಆತ್ಮಹತ್ಯೆಯ ಹಾದಿಯನ್ನು ಹಿಡಿಯಬೇಕಾಗುತ್ತದೆ. ಭೂಮಿಯನ್ನು ವಶಪಡಿಸಿಕೊಳ್ಳುವ ಮುಂಚಿತವಾಗಿ ರೈತರಿಗೆ ಬರಬೇಕಾದಂತಹ ಪರಿಹಾರದ ಮೊತ್ತವನ್ನು ನೀಡಿದರೆ ಅನುಕೂಲವಾಗುತ್ತದೆ ಎಂದರು.
ಯೋಜನೆಯ ಕಾಮಗಾರಿ ಮುಗಿದ ನಂತರದಲ್ಲಿ ರೈತರು ಪರಿಹಾರಕ್ಕಾಗಿ ಅಲೆದಾಡುವುದು, ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗದೇ ಸುವ್ಯವಸ್ಥಿತವಾಗಿ ಕಾರ್ಯವಾಗಬೇಕಿದೆ. ಇದಕ್ಕೆ ಅಧಿಕಾರಿಗಳು ಚಿಂತನೆ ನಡೆಸಿ ರೈತರ ಭೂಮಿಗೆ ಪರಿಹಾರ ಹಾಗೂ ತಾಲ್ಲೂಕಿನ ಕೆರೆಗಳಿಗೆ ನೀರಿನ ಮಂಜೂರಾತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯಸಮಿತಿ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗಾಗಿ ಅತಿ ಹೆಚ್ಚು ಭೂಮಿಯನ್ನ ಕಳೆದು ಕೊಳ್ಳುತ್ತಿದ್ದೆ. ಸರಿಸುಮಾರು ೧೨೦೦ ಹೆಕ್ಟೇರ್ ಭೂಮಿ ಎತ್ತಿನಹೊಳೆ ಯೋಜನೆಯಿಂದ ಸಂತ್ರಸ್ತರಾಗುತ್ತಿದ್ದಾರೆ. ಆದರೆ ಹನಿ ನೀರು ತಾಲ್ಲೂಕಿಗೆ ಹಂಚಿಕೆಯಾಗಿಲ್ಲ ಎಂದು ಕಿಡಿಕಾಡಿದರು.
ರಾಜಕಾರಣಿಗಳು ಮಾತ್ರ ತಾಲ್ಲೂಕಿಗೆ ೨ಟಿ.ಎಂ.ಸಿ ಅಡಿ ನೀರು ಹಂಚಿಕೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ರೈತರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕಿಗೆ ನೀರು ಹಂಚಿಕೆ ಆಗಿರುವ ಬಗ್ಗೆ ಲಿಖತವಾಗಿ ಮಂಜೂರಾತಿ ಮಾಡಿಸಬೇಕು. ಜೊತೆಗೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಬೇಕು. ರೈತರಿಗೆ ಸಮರ್ಪಕವಾಗಿ ಪರಿಹಾರವನ್ನು ದೊರಕಿಸಿಕೊಟ್ಟು ನಂತರ ಕಾಮಗಾರಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ಕಾಲ್ನಡಿಗೆ ಜಾಥಾದ ಮಧ್ಯದಲ್ಲಿಯೇ ಬಿದರೆಗುಡಿಯ ಬಳಿಗೆ ತಹಶೀಲ್ದಾರ್ ಚಂದ್ರಶೇಖರ್ ಆಗಮಿಸಿ ರೈತರ ಮನವೊಲಿಕೆಗೆ ಯತ್ನಿಸಿ ಯಶಸ್ವಿಯಾದರು.
ಜೊತೆಗೆ ನ.3ರ ಮಂಗಳವಾರದಂದು ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳೊಂದಿಗೆ ರೈತ ಮುಖಂಡರುಗಳನ್ನು ಒಳಗೊಂಡಂತೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಭರವಸೆಯ ಮೇರೆಗೆ ರೈತರು ತಮ್ಮ ಕಾಲ್ನಡಿಗೆ ಜಾಥಾ, ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ನಾರಾಯಣ್, ರೈತ ಸಂಘದ ಮುಖಂಡ ಯೋಗಣ್ಣ, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಕುಂದೂರು ತಿಮ್ಮಯ್ಯ, ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿಜಯ ಕುಮಾರ್, ಮನೋಹರ್ ಪಾಟೀಲ್, ಶ್ರೀಕಾಂತ್ ಕೆಳಹಟ್ಟಿ, ರೈತ ಮುಖಂಡ ಚಂದ್ರೇಗೌಡ, ಡಿಎಸ್‌ಎಸ್ ಕೃಷ್ಣಮೂರ್ತಿ, ತಿಪಟೂರು ಲೈಫ್‌ನ ರೇಣುಕಾರಾಧ್ಯ, ಬಿ.ಬಿ.ಸಿದ್ದಲಿಂಗಮೂರ್ತಿ ಸೇರಿದಂತೆ ನೂರಾರು ರೈತರು ಆಗಮಿಸಿದ್ದರು.