Publicstory.in
ತುಮಕೂರು: ರಾಜ್ಯ ಸರ್ಕಾರ ಆಯೋಜಿಸುತ್ತಿರುವ ರೈತರ ಸಮಾವೇಶ ಹಾಗೂ ಕೃಷಿ ವಸ್ತುಗಳ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆ ಹೆಚ್ಚಿದೆ.
ಜನವರಿ 3ರಂದು ತುಮಕೂರಿನ ಬಿ.ಎಚ್.ರಸ್ತೆಯಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮಾರಂಭ ನಡೆಯಲಿದೆ.
ರಾಜ್ಯದ ವಿವಿಧ ಕಡೆಗಳಿಂದ ಸುಮಾರು ಒಂದು ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದ ಬಳಿಕ ಇಷ್ಟು ದೊಡ್ಡ ಪ್ರಮಾಣದ ಸಮಾರಂಭ ಇದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನು ಕರೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ಸುಕವಾಗಿದೆ. ಪ್ರಧಾನಿ ಅವರ ಜತೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಭಾಗವಹಿಸುವರು. ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಲ್ಲಿ ಇರುತ್ತಾರೆ.
ಬೆಂಗಳೂರು ಅಥವಾ ತುಮಕೂರಿನಲ್ಲಿ ಸಮಾರಂಭ ನಡೆಸಲು ಮೊದಲಿಗೆ ಉದ್ದೇಶಿಸಲಾಗಿತ್ತು. ಆದರೆ ಈಗ ತುಮಕೂರಿನಲ್ಲೇ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ತುಮಕೂರಿನ ವಸಂತನರಾಸಪುರದಲ್ಲಿ ಫುಡ್ ಪಾರ್ಕ್ ಉದ್ಘಾಟನೆಗೆ ಪ್ರಧಾನಿ ಬಂದಿದ್ದರು. ಅದನ್ನು ಬಿಟ್ಟರೆ ಎಚ್ ಎಎಲ್ ಶಿಲಾನ್ಯಾಸ ನೆರವೇರಿಸಲು ಬಂದಿದ್ದರು. ಈ ಸಮಾರಂಭ ತುಮಕೂರಿನಲ್ಲಿ ನಡೆದು ಪ್ರಧಾನಿ ಬಂದರೆ ತುಮಕೂರಿನಲ್ಲಿ ಇದು ಅವರ ಮೂರನೇ ಕಾರ್ಯಕ್ರಮ ಆಗಲಿದೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ತಿಪಟೂರು ಕೊಬ್ಬರಿಗಾಗಿಯೇ ಪ್ರತ್ಯೇಕ ಬೆಂಬಲ ಬೆಲೆ ನೀಡಲು ಕೃಷಿ ಬೆಲೆ ಮತ್ತು ವೆಚ್ಚ ಆಯೋಗದಲ್ಲಿ ವಿಶೇಷ ಉತ್ಪನ್ನವಾಗಿ ಪಟ್ಟಿ ಮಾಡಲಾಗುವುದು ಎಂದು ತಿಪಟೂರಿನ ವಿಧಾನಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿನ ರೈತರಿಗೆ ಭರವಸೆ ನೀಡಿದ್ದರು. ಈಗ ಅವರದೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೋದಿಯವರೇ ರೈತರ ಸಮಾವೇಶ ಉದ್ಘಾಟಿಸುತ್ತಿರುವುದರಿಂದ ಇಲ್ಲಿನ ತೆಂಗು ಬೆಳೆಗಾರರಿಗೆ ನೀಡಿದ್ದ ಭರವಸೆ ಬಗ್ಗೆ ಏನು ಮಾತನಾಡುತ್ತಾರೆ ಎಂಬ ಬಗ್ಗೆ ಕುತೂಹಲವೂ ಗರಿಗೆದರಿದೆ.