ತುಮಕೂರು: ಎನ್ಆರ್ ಸಿ ಮತ್ತು ಸಿಎಎ ಕಾಯ್ದೆಗಳನ್ನು ಅತ್ಯಂತ ಆದ್ಯತೆಯಾಗಿ ಹುಮ್ಮಸ್ಸಿನಿಂದ ಜಾರಿಗೆ ತರುವ ಪ್ರಧಾನಿಗಳು ರೈತರ ನೆರವಿಗೆ ಬರುವ ಡಾ.ಸ್ವಾಮಿನಾಥ ವರದಿಯನ್ನು ಯಾಕೆ ಅನುಷ್ಠಾನಗೊಳಿಸುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ತಮಗೆ ಬೇಕಾಗುವ ಕಾಯ್ದೆಗಳನ್ನು ಜಾರಿ ಮಾಡಲು ಬದ್ತತೆ ತೋರುವ ಪ್ರಧಾನಿ ನರೇಂದ್ರ ಮೋದಿ ರೈತರ ಹಿತಾಸಕ್ತಿ ಕುರಿತು ಕಿಂಚಿತ್ತೂ ಗಮನಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಪ್ರಧಾನಿ ವಿರುದ್ಧ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ಮಾಡುವುದು ಶತಸಿದ್ದ. ಪ್ರತಿಭಟನಾಕಾರರನ್ನು ಬಂಧಿಸುವ ಸ್ವಾತಂತ್ರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಗ್ರಾಮೀಣ ಭಾರತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ರೈತರ ಪರವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಬಿಟ್ಟು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದಾನಿ ಗುಂಪಿಗೆ ಲಾಭವಾಗುತ್ತಿದೆ. ಎನ್ಆರ್ ಸಿ ಮತ್ತು ಸಿಎಎ ಬಗ್ಗೆ ಬದ್ದತೆ ತೋರಿದಂತೆ ರೈತರ ವಿಷಯದಲ್ಲೂ ತೋರಬೇಕಲ್ಲವೇ ಎಂದು ಪ್ರಶ್ನಿಸಿದರು.
ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ನಡೆದ 300 ಚುನಾವಣಾ ಪ್ರಚಾರ ಭಾಷಣಗಳಲ್ಲಿ ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದಿರಿ. ಇದನ್ನು ಮರೆತಿದ್ದೀರಾ ಪ್ರಧಾನಿಗಳೇ? ತುಮಕೂರಿಗೆ ಈಗ ಬರುತ್ತಿರುವುದು ಸೇರಿ ಮೂರು ಬಾರಿ ಭೇಟಿ ನೀಡಿದಂತೆ ಆಗುತ್ತದೆ. ವಸಂತನರಸಾಪುರದಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಿದಿರಿ. ತೆಂಗು ಬೆಳೆಗಾರರಿಗೆ ಅನುಕೂವಾಗುತ್ತದೆ ಎಂದು ಹೇಳಿದಿರಿ. ಪುಡ್ ಪಾರ್ಕ್ ನಿಂದ ಯಾರಿಗೆ ಪ್ರಯೋಜನವಾಗಿದೆ ತೋರಿಸಿ ಎಂದು ಕೇಳಿದರು.
ಯಾವುದೇ ಚರ್ಚೆ ಇಲ್ಲದೆ 30 ಮಸೂದೆಗಳನ್ನು ಅಂಗೀಕಾರ ಮಾಡಿದಿರಿ. ಇದರ ಜೊತೆಗೆ ಬೀಜ ಕಾಯ್ದೆಯೂ ಬರುತ್ತಿದೆ. ಕೊನೆಯ ಪಕ್ಷ ಬೀಜ ಕಾಯ್ದೆ ತರುವಾಗ ರೈತರೊಂದಿಗೆ ಚರ್ಚೆ ಮಾಡಲಿಲ್ಲ. ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಬೀಜ ಕಾಯ್ದೆ ಯಾರ ಪರವಾಗಿದೆ ಎಂಬುದನ್ನು ಜನರಿಗೆ, ರೈತರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಬೀಜ ಕಾಯ್ದೆ ಜಾರಿಯಾದರೆ ರೈತರಿಗೆ ಕಿಂಚಿತ್ತೂ ಪ್ರಯೋಜನವಾಗುವುದಿಲ್ಲ. ಬದಲಿಗೆ ಕೆಲವು ಬೀಜ ಕಂಪನಿಗಳಿಗೆ ಹಚ್ಚು ಅನುಕೂಲವಾಗುತ್ತದೆ. ಈ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೀಜ ಕಾಯ್ದೆ ಅನುಷ್ಟಾನಕ್ಕೆ ಜರೂರು ಮಾಡಲಾಗುತ್ತಿದೆ. ಇದು ರೈತರ ಸಾರ್ವಭೌಮತ್ವವನ್ನು ಕಿತ್ತುಕೊಳ್ಳಲಿದೆ. ಈ ಕಾಯ್ದೆಯಲ್ಲಿ ಸಾರ್ವಜನಿಕ ಹಿತ ಅಡಗಿಲ್ಲ. ಬದಲಿಗೆ ಕಂಪನಿಗಳಿಗೆ ಆದ್ಯತೆ ನೀಡಲಾಗಿದೆ. ಇದನ್ನು ರೈತರಿಗೆ ತಿಳಿಸುವಿರಾ ಎಂದು ಪ್ರಶ್ನಿಸಿದರು.
ಬೀಜ ಕಾಯ್ದೆ 2019 ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪರಿಸರಕ್ಕೆ ಅಪಾಯಕಾರಿ ಮಸೂದೆ. ಸಮಾಜದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಆದರೆ ಕಪ್ಪು ಷರ್ಟ್ ಧರಿಸಿ ಭಾಗವಹಿಸುತ್ತೇವೆ. ಪ್ರತಿಭಟನೆ ಮಾಡಿಯೇ ತೀರುತ್ತೇವೆ. ರಾಜ್ಯ ಸರ್ಕಾರಕ್ಕೆ ಪ್ರತಿಭಟನೆ ಮಾಡುವ ರೈತರನ್ನು ಬಂಧಿಸುವ ಸ್ವಾತಂತ್ರ್ಯ ಇದ್ದೇ ಇದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಹಾಜರಿದ್ದರು.