ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಸೃಜನಶೀಲತೆ ಸಾಧ್ಯ ಎಂದು ಲೇಖಕಿ ಎಂ.ಸಿ. ಲಲಿತಾ ವ್ಯಾಖ್ಯಾನಿಸಿದರು.
ಅವರು ಇಲ್ಲಿನ ಬಾಲಭವನದಲ್ಲಿ ಬೆಂಗಳೂರಿನ ಬಾಲಭವನ ಸೊಸೈಟಿ, ತುಮಕೂರು ಜಿಲ್ಲಾ ಬಾಲಭವನ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಚಿಗುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಕಥೆ ಬರೆಯುವ ಶಿಬಿರ ಏರ್ಪಡಿಸುವ ಮೂಲಕ ಬಾಲಭವನ ಸಾರ್ಥಕ ಕೆಲಸ ಮಾಡುತ್ತಿದೆ. ಸಾಂಸ್ಕøತಿಕ ವಾತಾವರಣದಲ್ಲಿ ಮಕ್ಕಳ ಜ್ಞಾನ ಮತ್ತಷ್ಟು ಪಕ್ವವಾಗಲಿದೆ ಎಂದರು. ಕಥೆ ಹೇಳುವುದರಿಂದ, ಕೇಳುವುದರಿಂದ ಮತ್ತಷ್ಟು ವಿಕಾಸವಾಗುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆ ಓದಿ ತಿಳಿದುಕೊಳ್ಳುವುದರಿಂದ ಭವಿಷ್ಯತ್‍ನಲ್ಲಿ ಪ್ರಯೋಜವಾಗಲಿದೆ ಎಂದರು.
ಕಥೆ, ಕವಿತೆ ಮುಂತಾದ ಸೃಜನಶೀಲ ಕ್ರಿಯೆಯಲ್ಲಿ ಮಕ್ಕಳು ತೊಡಗಿಕೊಳ್ಳುವುದರಿಂದ ಹೊಸ ಆಲೋಚನೆಗಳು ತೆರೆದುಕೊಳ್ಳುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಹಲವಾರು ಕಥೆಗಳನ್ನು ಲಲಿತಾ ಹೇಳಿದರು.
ಬರೆಹಗಾರ ಹಾಗೂ ಪತ್ರಕರ್ತ ಸಾ.ಚಿ. ರಾಜಕುಮಾರ್ ಮಾತನಾಡಿ ಯಾವುದೇ ಕೆಲಸಕ್ಕೂ ಶ್ರಮ ಮತ್ತು ಪ್ರಯತ್ನ ಅತ್ಯಗತ್ಯ. ಇವೆರೆಡನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಮಕ್ಕಳ ಬೌದ್ಧಿಕ ವಿಕಾಸಕ್ಕೆ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಸಾರ್ಥಕವಾದದ್ದು. ಈಗಾಗಲೇ ಬಾಲಭವನ ವತಿಯಿಂದ ಮಕ್ಕಳಿಗೆ ನಾಟಕಗಳ ಶಿಬಿರ ನಡೆಸಿದ್ದು ಈಗ ಕಥೆ, ಕವನ ಬರೆಯುವ ಶಿಬಿರ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ಈ ರೀತಿಯ ಶಿಬಿರಗಳು ನಿಮ್ಮ ಶೈಕ್ಷಣಿಕ ಪ್ರಗತಿಗೆ ನೆರವಿಗೆ ಬರಲಿದೆ ಎಂದು ವ್ಯಾಖ್ಯಾನಿಸಿದರು.
ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ತುಮಕೂರಿನ ಬಾಲಭವನ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಮೈಸೂರಿನಲ್ಲಿ ಪ್ರತಿ ವರ್ಷ ನಡೆಯುವ ಕಿನ್ನರ ಮೇಳ ರೀತಿ ತುಮಕೂರಿನಲ್ಲಿ ಬಾಲಭವನ ಕಿನ್ನರ ಮೇಳ ಆರಂಭಿಸುವಂತೆ ಸಲಹೆ ನೀಡಿದರು.
ಇಂತಹ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ವಾತಾವರಣವನ್ನು ಮತ್ತಷ್ಟು ಮೂಡಿಸಲು ತುಮಕೂರಿಗೆ ರಂಗಾಯಣ ಅತ್ಯಗತ್ಯವಾಗಿದೆ. ಈಗಾಗಲೇ ಶಾಸಕ ಜ್ಯೋತಿ ಗಣೇಶ್ ಅವರು ರಂಗಾಯಣ ಸ್ಥಾಪನೆಗೆ ಉತ್ಸುಕರಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿಯವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮಮತಾ ಉಪಸ್ಥಿತರಿದ್ದರು. ಬಳಿಕ ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.