…….
ತುಮಕೂರು:: ಹೌದು, ತುಮಕೂರಿನಲ್ಲಿ ಇದೇ ತಿಂಗಳು ಒಂದು ದಿನದ ಮಟ್ಟಿಗೆ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಲಾಗುವುದು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈ ವಿಶೇಷ ಅಧಿವೇಶನ ನಡೆಸಲು ಸಿದ್ಧತೆಗಳನ್ನೆಲ್ಲ ಮಾಡಲಾಗಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಓಹ್, ಹೌಹಾರದಿರಿ. ಆದರೆ ಇದು ಕಾನೂನು ವಿದ್ಯಾರ್ಥಿಗಳು ನಡೆಸುವ ವಿಧಾನಸಭ ಅಧಿವೇಶನ, ರಾಜ್ಯ ಸರ್ಕಾರದ ಅಧಿವೇ಼ಶನ ಅಲ್ಲ. ಆದರೆ ಅಧಿವೇಶನದಲ್ಲಿ ಭಾಗವಹಿಸುವ ಕಾನೂನು ವಿದ್ಯಾರ್ಥಿಗಳು, ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತನಾಡುತ್ತಾರೆ ಎಂಬ ಕುತೂಹಲ ಮೂಡಿದೆ. ಈ ಮಾದರಿ ವಿಧಾನಸಭಾ ಸ್ಪರ್ಧೆಯನ್ನು ನಗರದ ಸುಫಿಯಾ ಕಾನೂನು ಕಾಲೇಜು ಆಯೋಜಿಸಿದೆ.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಹಾಗೂ ನಗರದ ಸುಫಿಯ ಕಾನೂನು ಮಹಾವಿದ್ಯಾಲಯ ಸಹಯೋಗದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ನ.10 ರ ಸೋಮವಾರ ಬೆಳಗ್ಗೆ 10ಗಂಟೆಗೆ ನಗರದ ಜಿಪಂ ಸಭಾಂಗಣದಲ್ಲಿ ತುಮಕೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.ಸಿ ಎಸ್ ಪಾಟೀಲ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಷಫೀ ಅಹಮದ್ ವಹಿಸಲಿದ್ದಾರೆ. ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ , ಶಾಸಕರುಗಳಾದ ಟಿಬಿ ಜಯಚಂದ್ರ
ಕೆ ಎನ್ ರಾಜಣ್ಣ, ಜಿಬಿ ಜ್ಯೋತಿ ಗಣೇಶ್, ಮಾಜಿ ಶಾಸಕ ರಫೀಕ್ ಅಹಮದ್ ಅವರು ಭಾಗವಹಿಸಲಿದ್ದಾರೆ.




