ತುಮಕೂರು: ನಗರದ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ತುಮಕೂರು ನಗರದಲ್ಲಿ ವೈನ್ ಶಾಪ್ ಸೇರಿದಂತೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ವೈರಾಣು ನಿಯಂತ್ರಣ ಮತ್ತು ಸಡಿಲಿಕೆ ಕುರಿತು ಕರೆದಿದ್ದ ಜಿಲ್ಲಾ ಮಟ್ಟದಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಜನಜಂಗುಳಿ ನಿಯಂತ್ರಣದೊಂದಿಗೆ ಅಂಗಡಿಗಳ ಮಾಲೀಕರುಗಳು ಮತ್ತು ವರ್ತಕರುಗಳು ತಮ್ಮ ಸ್ವಯಂ ಜವಾಬ್ದಾರಿಯಿಂದ ಅಂಗಡಿಗಳನ್ನು ತೆರೆಯಲು ಸೂಚನೆ ನೀಡಿದರು.
ತುಮಕೂರು ನಗರದಲ್ಲಿ ವೈನ್‍ಶಾಪ್‍ಗಳು ಹಾಗೂ ಎಂಎಸ್‍ಐಎಲ್ ಅಂಗಡಿಗಳು ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ತೆರೆಯಲು ಅನುಮತಿ ನೀಡಿದೆ. ಇಲ್ಲಿಯೂ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು ಜೊತೆಗೆ
ಮಾಲಿಕರು ಸಿಸಿ ಟಿವಿ ಅಳವಡಿಸಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಅಂಗಡಿಗಳನ್ನು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ತೆರೆಯಲು ಅನುಮತಿ ನೀಡಿದೆ. ನಗರಕ್ಕೆ ನೇರವಾಗಿ ಸಂಪರ್ಕಿಸುವ ರಸ್ತೆಗಳ ಮೂಲಕ ಬರುವ ಎಲ್ಲಾ ವಾಹನಗಳನ್ನು ತಪಾಸಣೆಗೊಳಪಡಿಸಲು ಅಗತ್ಯವಿರುವ ಕಡೆ ಚೆಕ್‍ಪೋಸ್ಟ್ ಗಳನ್ನು ಕೂಡಲೇ ಸ್ಥಾಪಿಸಿ ನಗರಕ್ಕೆ ಬರುವ ಜನರನ್ನು ತಪಾಸಣೆಗೊಳಪಡಿಸುವಂತೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ, ಸ್ಯಾನಿಟೈಸರ್ ಇಡುವುದು, ಬ್ಲೀಚಿಂಗ್ ಪೌಡರ್ ಮತ್ತು ಲೈಜಾಲ್ ಬಳಸಿ ಶೌಚಾಲಯವನ್ನು ಸ್ವಚ್ಛವಾಗಿಡುವುದು, ಸಿಬ್ಬಂದಿವರ್ಗದವರು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಂಜಾಗ್ರತಾ ಕ್ರಮ ವಹಿಸಬೇಕು ಮತ್ತು ಗ್ರಾಹಕರ ಮಾಹಿತಿಯನ್ನು ಪಡೆಯಬೇಕು ಎಂದರು.
ಜಿಮ್, ಶಾಪಿಂಗ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಫೂಲ್ ಹಾಗೂ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಸರ್ಕಾರದ ಆದೇಶ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ವರ್ತಕರು ಪಾಲಿಸಬೇಕು.
ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾನೂನು ಪಾಲಿಸದೇ ಇರುವ ಅಂಗಡಿಗಳ ಮೇಲೆ ನಿಗಾವಹಿಸಲು 6 ಮೊಬೈಲ್ ಸ್ವ್ಕಾಡ್‍ಗಳನ್ನು ರಚಿಸಲಾಗಿದ್ದಯ, ಅವು ಗಸ್ತಿನಲ್ಲಿರುತ್ತವೆ. ಸೂಚನೆ ಉಲ್ಲಂಘನೆ ಕಂಡುಬಂದ ಅಂಗಡಿಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಅಂತಹ ವ್ಯಾಪಾರ ಮಳಿಗೆಗಳನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿ.ಹೆಚ್.ಓ. ಡಾ: ಚಂದ್ರಿಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಛೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಚಂದ್ರಶೇಖರ್, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ, ಅಂಗಡಿಗಳ ಮಾಲೀಕರು, ವರ್ತಕರ ಸಂಘದ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.