Publicstory. in
ತುಮಕೂರು: ಕೋವಿಡ್-19 ಪಿ-447 ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖರಾಗಿ ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಹಾಮಾರಿ ಕೋವಿಡ್-19ರ ಸೋಂಕಿಗೆ ಒಳಾಗಿದ್ದ ವ್ಯಕ್ತಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ ಮುಕ್ತರಾಗಿರುವ ಸಂತಸ ಅವರ ಮುಖದಲ್ಲಿ ಕಾಣಿಸುತ್ತಿತ್ತು.
ಸೋಂಕಿತ ವ್ಯಕ್ತಿಯು ಮಾರ್ಚ್ 12ರಂದು ಗುಜರಾತ್ ನಿಂದ ತುಮಕೂರು ಜಿಲ್ಲೆಗೆ ಆಗಮಿಸಿದ್ದು, ದೇಶದಲ್ಲಿ ಲಾಕ್‍ಡೌನ್ ಆಗಿರುವುದರಿಂದ ಇಲ್ಲೇ ಉಳಿದುಕೊಂಡಿದ್ದರು, ಹೊರ ರಾಜ್ಯದಿಂದ ಬಂದಿರುವ ವ್ಯಕ್ತಿಗಳನ್ನು ಆಗಿ ತಪಾಸಣೆಗೊಳಪಡಿಸಲಾಗಿತ್ತು. ಇದರಲ್ಲಿ ಇವರಿಗೆ ಸೋಂಕು ದೃಢಪಟ್ಟಿತ್ತು.
ಕಳೆದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, 12ನೇ ದಿನ ಮತ್ತು 13 ದಿನದಂದು ಲ್ಯಾಬ್‍ಗೆ ಕಳುಹಿಸಿದ ಮಾದರಿ ನೆಗೆಟಿವ್ ಬಂದಿದ್ದು, ಸಾಂಸ್ಥಿಕ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗುವುದು. ಇವರು ಹೊರ ರಾಜ್ಯದವರಾಗಿರುವುದರಿಂದ ಮತ್ತೆ 28ನೇ ದಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ನೆಗೆಟಿವ್ ಬಂದ ನಂತರ ಸರ್ಕಾರದ ಸೂಚನೆಯಂತೆ ಅವರನ್ನು ಅವರ ರಾಜ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.
ಜಿಲ್ಲೆಯ ಸಾರ್ವಜನಿಕರು ಭಯಪಡದೇ ಎಚ್ಚರವಾಗಿರಬೇಕು. ಮುಂಜಾಗ್ರತ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳಿದ್ದರೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಿಹೆಚ್‍ಓ ಡಾ. ಚಂದ್ರಿಕಾ ತಿಳಿಸಿದ್ದಾರೆ.
ಗುಣಮುಖರಾದ ವ್ಯಕ್ತಿಗೆ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ಅವರು ಹೂವಿನ ಹಾರ ಹಾಕಿ ಬಿಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.