ಗುಡಿಸಲು ನಿವಾಸಿಗಳ ಜತೆ ಬೆಳಗುಂಬ ವೆಂಕಟೇಶ್
Publicstory. in
ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ತೊಂಡಗೆರೆಯ ತಬರ ಈತ.
ಪೂರ್ಣಚಂದ್ರ ತೇಜಸ್ವಿ ಅವರ ಕಥನದಲ್ಲಿ ತಬರ ಹಾಗೂ ಶಿವರಾಮ ಕಾರಂತರು ಬರೆದಿರುವ ಚೋಮನ ದುಡಿಯಲ್ಲಿ ಬರುವ ಚೋಮನ ಮಿಶ್ರಣ ಈ ತೊಂಡೆಗೆರೆಯ ನರಸಿಂಹಮೂರ್ತಿ.
ಈತ ಹರಿದ ಗುಡಿಸಲಿನ ಮನುಷ್ಯ. ಯಾರೋ ಖಾಸಗಿ ವ್ಯಕ್ತಿಯಿಬ್ಬರ ಅಂಗೈ ಅಗಲದ ಜಾಗದಲ್ಲಿ ನಾಲ್ಕು ತೆಂಗಿನ ಗರಿಗಳನ್ನು ಹಾಕಿಕೊಂಡು ಇಪ್ಪತ್ತು ವರ್ಷಗಳಿಂದ ಬದುಕು ಸವೆಸುತ್ತಿದ್ದಾನೆ.
ಒಂಬತ್ತನೇ ತರಗತಿಯಲ್ಲಿ ಚೆನ್ನಾಗಿ ಓದುತ್ತಿರುವ ಈತನ ಮಗಳು, ಐದನೇ ತರಗತಿಯ ಮಗ ಇದೇ ಗುಡಿಸಲ್ಲೇ ಓದಬೇಕು. ಗರಿಸ, ಗಾಳಿ ತೂರಿ ಬರುವ, ಕಾಡುಪ್ರಾಣಿಗಳ ಭಯದಲ್ಲಿ ಕುಟುಂಬ ಬದುಕುತ್ತಿದೆ.
ನಿರ್ಗತಿಕನ್ನೊಬ್ಬನಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಒಂದು ನಿವೇಶನ, ಆಶ್ರಯ ಮನೆ ಸಿಗಲಿಲ್ಲವೆಂದಾದರೇ ಇದರ ಹೊಣೆಯನ್ನು ಯಾರು ಹೊರಬೇಕು ಎಂದು ಕೆಲವರು ಕೇಳುತ್ತಿದ್ದಾರೆ.
ಇದು ನಿಡುವಳಲು ಗ್ರಾಮ ಪಂಚಾಯ್ತಿಗೆ ಸೇರಿದೆ. ತೊಂಡಗೆರೆ ಗ್ರಾಮದ ಕಥೆ. ಗ್ರಾಮ ಪಂಚಾಯ್ತಿಯ ಸುತ್ತುತ್ತಿದ್ದಾನೆ. ಈವರೆಗಿನ ಅಲ್ಲಿನ ಗ್ರಾಮ ಪಂಚಾಯ್ತಿ ಪಿಡಿಒ, ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು, ಸದಸ್ಯರುಗಳು ತಲೆ ತಗ್ಗಿಸುವಂತ ವಿಚಾರವೇ ಸರಿ ಎನ್ನುತ್ತಾರೆ ಇಲ್ಲಿನ ಕೆಲವು ಜನರು.
ಎರಡು-ಮೂರು ತೆಂಗಿನ ಗರಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ನರಸಿಂಹಮೂರ್ತಿ ಅವರ ಗುಡಿಸಲು ಮುಂದೆ ನಿಂತರೆ ಎಂಥವರಿಗೂ ಕಣ್ಣೀರು ಬರುತ್ತದೆ ಎನ್ನುತ್ತಾರೆ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್.
ಈವರೆಗೂ ಯಾವ ನಾಯಕರು, ಅಧಿಕಾರಿಗಳ ಕಣ್ಣಿಗೂ ಬೀಳದ ಈ ನರಸಿಂಹ ಮೂರ್ತಿ ಎಂಬ ತಬರ ಈಗ ಬೆಳಗುಂಬ ವೆಂಕಟೇಶ್ ಅವರ ಕಣ್ಣಿಗೆ ಬಿದ್ದಿದ್ದಾರೆ. ಅವರಿಗೆ ಒಂದು ಮನೆ ಕಟ್ಟಿಕೊಡಲೇಬೇಕು ಎಂದು ಅವರೀಗ ದನಿ ಎತ್ತಿದ್ದಾರೆ.
ಸರ್ಕಾರ, ಅಧಿಕಾರಿಗಳು, ಶಾಸಕರು ಮುಂದಾಗದಿದ್ದರೆ ಸ್ನೇಹಿತರೇ ಸೇರಿಕೊಂಡು ಈ ಕುಟುಂಬಕ್ಕೆ ನೆಲೆ ಒದಗಿಸಲು ಸಿದ್ಧ. ಆದರೆ, ಅಧಿಕಾರಿಗಳ ಈ ಕರ್ತವ್ಯ ಹೀನತೆಯನ್ನು ಸಹಿಸಲು ಸಾಧ್ಯವೇ ಎಂಬುದು ಅವರ ಪ್ರಶ್ನೆ.
ನರಸಿಂಹಮೂರ್ತಿ ಮಗಳು ಈಗ ಒಂಬತ್ತನೇ ತರಗತಿ ಓದುತ್ತಿದ್ದಾಳೆ. ಈ ವರ್ಷದಿಂದ ಎಸ್ ಎಸ್ ಎಲ್ ಸಿ. ಮಗ ಐದನೇ ತರಗತಿ. ಈ ಇಬ್ಬರು ಮಕ್ಕಳ ಮನಸ್ಸು ಮುರುಟಿಕೊಂಡು ಹೋಗುವ ಮೊದಲು ಈ ಕುಟುಂಬಕ್ಕೆ ನೆರವಾಗಬೇಕಾಗಿದೆ ಎನ್ನುತ್ತಾರೆ ಅವರು.
ನರಸಿಂಹಮೂರ್ತಿ ಅವರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರುತ್ತೇನೆ. ಊರಿನಲ್ಲಿ ಸಾಕಷ್ಟು ಸರ್ಕಾರಿ ಜಮೀನು ಇದೆ. ಕೂಡಲೇ ಈತನಿಗೆ ನಿವೇಶನ ನೀಡಿ ಮನೆ ಮಂಜೂರು ಮಾಡಿಕೊಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತರು, ದಾನಿಗಳು ಮುಂದೆ ಬಂದರೆ ಒಂದಿಷ್ಟು ನೆರವು ನೀಡಿ ಈತನಿಗೆ ಮನೆ ಕಟ್ಟಿ ಕೊಡಬಹುದು ಎನ್ನುತ್ತಾರೆ ವೆಂಕಟೇಶ್.