Publicstory
ತುಮಕೂರು: ತುಮಕೂರು ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕವಿತಾ ರಮೇಶ್ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಜಯಗಳಿಸಿದರು.
ಬಿಜೆಪಿ ಪಕ್ಷದಿಂದ ೧೭ ಸದಸ್ಯ ಬಲವಿದ್ದು, ಜೆಡಿಎಸ್ ೧೨ ಸದಸ್ಯರ ಬಲ, ಕಾಂಗ್ರೆಸ್ ೧, ಇರುತ್ತಾರೆ. ಸ್ಪಷ್ಟ ಬಹುಮತವಿದ್ದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅನಾಯಾಸವಾಗಿ ಅಧ್ಯಕ್ಷಗಾದಿ ಏರಬಹುದೆಂಬ ಸಂತಸದಲ್ಲಿದ್ದರು, ಆದರೆ ೧೨ ಸದಸ್ಯ ಬಲವಿದ್ದ ಜೆಡಿಎಸ್ ಕಾಂಗ್ರೆಸ್ ಒಬ್ಬರು ಸದಸ್ಯರ ವಿಶ್ವಾಸದೊಂದಿಗೆ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ಅಧ್ಯಕ್ಷಗಾದಿಗೇರಲು ಕಸರತ್ತು ನಡೆಸಿತ್ತು.
ತಮ್ಮ ಬಲಿಯಿದ್ದ ೧೩ ಸದಸ್ಯ ಬಲದ ಜೊತೆಗೆ ಬಿಜೆಪಿಯ ಇಬ್ಬರು ಸದಸ್ಯರನ್ನು ತಮ್ಮ ಕಡೆ ಸೆಳೆದುಕೊಂಡು ಮತ್ತೊಬ್ಬ ಬಿಜೆಪಿ ಸದಸ್ಯರನ್ನ ಗೈರು ಹಾಜರಿಪಡಿಸಿ ಅಧ್ಯಕ್ಷ ಸ್ಥಾನವನ್ನು ತಾನು ಪಡೆಯಬೇಕೆಂದು ಜೆಡಿಎಸ್‌ನ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್ ಕಸರತ್ತು ನಡೆಸಿದ್ದರು.
ಇಬ್ಬರು ಬಿಜೆಪಿ ಸದಸ್ಯರಾದ ಕೋರಾ ಎಸ್‌ಟಿ ಮೀಸಲು ಕ್ಷೇತ್ರದ ಕವಿತಾ ರಮೇಶ್ ಮತ್ತು ಕುರುವೇಲು ಎಸ್‌ಸಿ ಮೀಸಲು ಕ್ಷೇತ್ರದ ಸುಧಾರವರುಗಳನ್ನ ಜೆಡಿಎಸ್‌ನ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವಂತೆ ಮನವೊಲಿಸಿದ್ದರು.
ಜೆಡಿಎಸ್‌ನ ೧೨ ಸದಸ್ಯರ ಬಲ ಹಾಗೂ ಕಾಂಗ್ರೆಸ್‌ನ ಒಬ್ಬರು, ಬಿಜೆಪಿಯ ಕವಿತಾ ರಮೇಶ್ ಮತ್ತು ಸುಧಾ ಇಬ್ಬರು ಸೇರಿ ೧೫ ಜನ ಸದಸ್ಯ ಬಲದಿಂದ ಮೇಲುಗೈ ಸಾದಿಸಬಹುದೆಂಬ ಮಹಾದಾಸೆಯೊತ್ತ ಹಾಲಿ ಶಾಸಕ ಡಿ.ಸಿ.ಗೌರಿಶಂಖರ್‌ಗೆ ಮುಖಭಂಗ ಮಾಡುವ ಸಲುವಾಗಿ ಬಿಜೆಪಿ ರಣತಂತ್ರ ರೂಪಿಸಿ ತನ್ನ ೧೫ ಜನರ ಸದಸ್ಯ ಬಲದಿಂದಲೇ ಅಧ್ಯಕ್ಷ ಸ್ಥಾನದ ಮೇಲೆ ತನ್ನ ಹಿಡಿತ ಸಾದಿಸುವ ರಣತಂತ್ರ ಯಶಸ್ವಿಯಾಯಿತು.
ಜೆಡಿಎಸ್ ಪಕ್ಷದ ವತಿಯಿಂದ ಆಯ್ಕೆಯಾದ ಕೆಸ್ತೂರು ತಾ.ಪಂ.ಸದಸ್ಯೆ ನೇತ್ರಾವತಿ, ಬಿಟ್ಟನಕುರಿಕೆ ತಾ.ಪಂ ಸದಸ್ಯ ಮಂಜುನಾಥ್ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಬಲಿ ಇದ್ದ ೧೫ ಸದಸ್ಯರ ಬಲದಿಂದಲೇ ಎಸ್‌ಸಿ ಮೀಸಲು ಕ್ಷೇತ್ರವಾದ ಅರಕೆರೆ ತಾ.ಪಂ. ಕ್ಷೇತ್ರದ ಆಯ್ಕೆಯಾಗಿದ್ದ ಕವಿತಾ ರಮೇಶ್‌ರವರನ್ನ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಿಸಿಕೊಂಡಿದೆ.
ಬಿಜೆಪಿ ಪಕ್ಷದ ಹಾಲಿ ಜಿಲ್ಲಾಧ್ಯಕ್ಷ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‌ಗೌಡರ ರಣತಂತ್ರದಿಂದ ಜೆಡಿಎಸ್‌ನ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಈ ಚುನಾವಣೆ ಒಂದು ರೀತಿಯ ಮುಖಭಂಗ ಮಾಡಿದೆ.
ಮತ್ತೊಂದು ವಿಶೇಷವೆಂದರೆ ಜಯನಗರದಲ್ಲಿರುವ ತನ್ನ ಗೃಹ ಕಛೇರಿಯಿಂದ ಪೊಲೀಸರ ಸರ್ಪಗಾವಲಿನಲ್ಲಿ ಜೆಡಿಎಸ್‌ನ ಶಾಸಕ ಡಿ.ಸಿ.ಗೌರಿಶಂಕರ್ ಬಿಜೆಪಿಯ ಇಬ್ಬರು ಸದಸ್ಯರು ಸೇರಿದಂತೆ ಜೆಡಿಎಸ್‌ನ ಸದಸ್ಯರು ಒಟ್ಟು ಸೇರಿ ೧೩ ಜನರನ್ನ ಚುನಾವಣಾ ಸ್ಥಳಕ್ಕೆ ಕರೆದೊಯ್ದದ್ದು ಸಂಶಯಾಸ್ಪದವಾಗಿತ್ತು.
ಯಾವುದೇ ರೀತಿಯ ಜೀವಭಯದ ದೂರು ನೀಡದೆ. ಪೊಲೀಸರು ರಕ್ಷಣೆ ನೀಡಿ ಸದಸ್ಯರ ಬೆಂಬಲಕ್ಕೆ ಪೋಲಿಸ್ ಎಸ್ಕಾರ್ಟ್ ಕೊಟ್ಟದ್ದು ಮತ್ತೊಂದು ವಿಶೇಷವಾಗಿತ್ತು.
ಬಿಜಿಪಿಯ ಮಾಜಿ ಶಾಸಕ ಹಾಗೂ ಹಾಲಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡರಿಗೆ ಮುಖಭಂಗ ಮಾಡಲು ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಮಾಡಿದ ರಣತಂತ್ರಗಳೆಲ್ಲ ವಿಫಲಗೊಂಡವಾದರೂ ತಾ.ಪಂ. ಅಧ್ಯಕ್ಷಗಾದಿಯ ಚುನಾವಣೆ ಒಂದು ರೀತಿಯಲ್ಲಿ ವಿಭಿನ್ನತೆಯಿಂದಲೇ ಕೂಡಿತ್ತು.
ಸದಸ್ಯರ ಕುದುರೆ ವ್ಯಾಪಾರ ಒಂದು ಕಡೆಯಾದರೆ ಮತ್ತೊಂದು ಕಡೆ ಪಕ್ಷ ವಿಪ್ ಜಾರಿಮಾಡಿದ್ದು ಮತ್ತೊಂದು ರಣತಂತ್ರವಾಗಿತ್ತು.
ತಂತ್ರ ಮತ್ತು ಪ್ರತಿತಂತ್ರಗಳು ಏನೇ ಇರಲಿ ವ್ಯಾಪರಕ್ಕೊಳಗಾಗಿ ಅನ್ಯಪಕ್ಷಕ್ಕೆ ಬೆಂಬಲ ನೀಡಿ ಮತ ಚಲಾಯಿಸಿದ ಬಿಜೆಪಿಯ ಇಬ್ಬರು ಸದಸ್ಯರಿಗೆ ಬಿಜೆಪಿ ಪಕ್ಷ ನೀಡಿದ ವಿಪ್ ಉಲ್ಲಘಿಸಿದವರಿಗೆ ಅವರ ಮುಂದಿನ ರಾಜಕೀಯ ಭವಿಷ್ಯ ಕಂಟಕವಾಗಲಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ಜೆಡಿಎಸ್ ಪಕ್ಷದಿಂದ ಗೈರು ಹಾಜರಾದ ಇಬ್ಬರು ಸದಸ್ಯರು ಎಲ್ಲಿದ್ದಾರೆ, ಯಾರ ಹಿಡಿತದಲ್ಲಿದ್ದಾರೆ ಎಂಬುದು ತಿಳಿದುಬರುತ್ತಿಲ್ಲ. ಜೆಡಿಎಸ್ ತನ್ನ ಪಕ್ಷದೊಳಗಿನ ೧೨ ಸದಸ್ಯರ ಪೈಕಿ ಇಬ್ಬರು ಸದಸ್ಯರನ್ನ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಸ್ವಯಂ ಮುಜುಗರಕ್ಕೀಡಾಗಿದೆ ಎಂದರೆ ತಪ್ಪಾಗಲಾಗರದು.