Public story.in
ತುಮಕೂರು: ಪೂರ್ವ ನಿಯೋಜಿತವಲ್ಲದ ಸ್ಮಾರ್ಟ್ ಸಿಟಿ ಆಡಳಿತ ಮಂಡಳಿಯಿಂದ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಳಾಗಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ನಗರಕ್ಕೆ ಏನು ಅಗತ್ಯ ಇದೆ ಎಂದು ಸ್ಮಾರ್ಟ್ ಸಿಟಿ ಆಡಳಿತ ಮಂಡಳಿಗೆ ಗೊತ್ತಿಲ್ಲ. ದೂರದೃಷ್ಟಿ ಇಲ್ಲದೆ ಕಾಮಗಾರಿ ಕೈಗೊಂಡಿರುವುದರಿಂದ ಸಮರ್ಪಕವಾಗಿ ಕೆಲಸಗಳು ನಡೆದಿಲ್ಲ ಎಂದು ಒಪ್ಪಿಕೊಂಡರು.
ನಾಗರಿಕ ಸಂಘಟನೆಗಳು ಆರೋಪಿಸುತ್ತಿರುವಂತೆ ಇದು ದೂಳುಸಿಟಿಯೂ ಹೌದು. ಕಾಮಗಾರಿಗಳ ನಿರ್ವಹಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ. ನೀವು ಆರೋಪಿಸುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಸಂಬಂಧ ಇದುವರೆಗೆ 10-12 ಸಭೆಗಳನ್ನು ಮಾಡಿದ್ದೇವೆ. ಕಾಮಗಾರಿಗಳಲ್ಲಿ ಲೂಟಿ ಮಾಡಲು ಅವಕಾಶ ನೀಡಿಲ್ಲ. ಲೂಟಿ ಮಾಡುವುದನ್ನು ಆದಷ್ಟು ತಡೆದಿದ್ದೇವೆ. ವಿಶೇಷ ಅನುದಾನ 20 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಅದರಲ್ಲಿ ಪ್ರಮುಖ ರಸ್ತೆ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಒಂದೇ ಕಡೆ ಕಾಮಗಾರಿಗಳು ನಡೆದಿವೆ ಎಂಬ ಆರೋಪವನ್ನು ನಿರಾಕರಿಸಿದ ಜ್ಯೋತಿ ಗಣೇಶ್ ಮಹಾಲಕ್ಷ್ಮಿ ಲೇಔಟ್, ದಾನಪ್ಯಾಲೇಸ್, ಬಟವಾಡಿ, ಬಡ್ಡಿಹಳ್ಳಿ ರಸ್ತೆ ಹೀಗೆ ರಸ್ತೆ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಎಲ್ಲಾ ಭಾಗದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.