Publicstory. in
ತುಮಕೂರು: ಕೇಂದ್ರ ಸರ್ಕಾರ ಸಮಾಜದಲ್ಲಿ ನೆಮ್ಮದಿಯಿಂದ ಬದುಕುತ್ತಿರುವ ಜನರ ನಡುವೆ ತಾರತಮ್ಯ ಹುಟ್ಟುಹಾಕುತ್ತಿದೆ. ಸಿಎಎ ಮತ್ತು ಎನ್.ಸಿ.ಆರ್ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಜನರನ್ನು ಅನುಮಾನದಿಂದ ನೋಡುತ್ತಿದೆ. ಇದರ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಜನ ಬೀದಿಗೆ ಇಳಿದಿದ್ದಾರೆ. ಕೇಂದ್ರ ಸರ್ಕಾರ ಧರ್ಮಾಧಾರಿತ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್. ವಿಮಲ ಹೇಳಿದರು.
ತುಮಕೂರು ನಗರದ ಟೌನ್ ಹಾಲ್ ನಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಸಿಎಎ, ಎನ್.ಆರ್.ಸಿ. ಎನ್.ಪಿಆರ್ ವಿರುದ್ದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹೊಸದೇನೋ ಕಾಯ್ದೆಗಳನ್ನು ತಂದು ಜನರಿಗೆ ಎಬಿಸಿಸಡಿ ಕಲಿಸಲು ಹೊರಟಿದೆ. ಅದರ ಬದಲಿಗೆ ನಾವು ಎಕ್ಸ್ ವೈ ಝಡ್ ಹೇಳಿಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಧರ್ಮ, ಜಾತಿ, ಭಾಷೆ, ಲಿಂಗ ಮತ್ತು ವರ್ಗದ ಬೇಧವಿಲ್ಲದೆ ನಮ್ಮ ಸಂವಿಧಾನವನ್ನು ನಾವೇ ಒಪ್ಪಿಕೊಂಡು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಇಂತಹ ಸಂವಿಧಾನಕ್ಕೆ ಅಪಾಯ ಬಂದಿದೆ. ಕೇಂದ್ರ ಸರ್ಕಾರ ಎನ್ಆರ್.ಸಿ ಮತ್ತು ಸಿಎಎ ಕಾಯ್ದೆಯನ್ನು ಜಾರಿಗೆ ತಂದು ಜನರನ್ನು ಅನುಮಾನದಿಂದ ನೋಡುತ್ತಿದೆ ಎಂದು ಟೀಕಿಸಿದರು.
ವಿದ್ಯಾರ್ಥಿ ಸಮುದಾಯ ಸೇರಿದಂತೆ ಎಲ್ಲರೂ ಬೀದಿಗೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಬಾರದು. ಸಂವಿಧಾನವನ್ನು ರಕ್ಷಿಸಲು ಪ್ರಾಣವನ್ನೇ ಅರ್ಪಿಸಲು ಸಿದ್ದರಿದ್ದೇವೆ. ಇದರ ಜೊತೆಗೆ ಎಕ್ಸ್ ಮತ್ತು ವೈ ಜೊತೆಯಲ್ಲಿ ಬದುಕುತ್ತಿದ್ದಾರೆ. ಅವರು ಸರ್ಕಾರದ ಮುಂದೆ ಯಾವುದೇ ಬೇಡಿಕೆಗಳನ್ನು ಕೇಳುತ್ತಿಲ್ಲ. ಎಕ್ಸ್ ವೈ ಬದುಕಲು ಜಾಗ ಕೇಳುತ್ತಿದ್ದೇವೆ. ನಾವು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿಲ್ಲ. ನಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಕೇಳುತ್ತಿದ್ದೇವೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಕ್ಸ್ ವೈ ಸೇರಿದರೆ ಭಾರತೀಯರು. ಇಂತಹ ಸಮುದಾಯ ಒಟ್ಟಾಗಿ ಬದುಕಲು ಅವಕಾಶ ಕೊಟ್ಟರೆ ಸಾಕು. ಅದು ಬಿಟ್ಟು ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಬಾರದು. ಇದಕ್ಕೆ ಅವಕಾಶ ನೀಡಿದರೆ ಎಕ್ಸ್ ವೈ ಸೇರಿ ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತೇವೆ. ನೋಟು ಅಮಾನ್ಯೀಕರಣದ ನಂತರ ಜನರು ನರಕ ಸದೃಶ ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ದೂರಿದರು.
ಮಹಾನಗರ ಪಾಲಿಕೆ ಸದಸ್ಯೆ ಫರೀದಾ ಬೇಗಂ ಮಾತನಾಡಿ ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ಎನ್.ಆರ್.ಸಿ ಜಾರಿ ಮಾಡಲು ಹೊರಟಿದೆ. ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಐಎಂಎಸ್ಎಸ್ ಉಪಾಧ್ಯಕ್ಷೆ ಹರಿಣಿ ಆಚಾರ್ಯ ಮಾತನಾಡಿ, ದೇಶದಲ್ಲಿ ವೇಶ್ಯೆಯರು, ದೇವದಾಸಿಯರು ವಿಧವೆಯರ ಮಕ್ಕಳು ಯಾವ ದಾಖಲೆಗಳನ್ನು ತೋರಿಸಲು ಸಾಧ್ಯ. ಅದಿವಾಸಿ ಜನರು, ನೆರೆ ಸಂತ್ರಸ್ಥರು ಎಲ್ಲಿಂದ ದಾಖಲೆ ತರುತ್ತಾರೆ ಎಂದು ಪ್ರಶ್ನಿಸಿದರು.
ಮಹಿಳಾ ನಾಯಕಿ ಶೀಮಾ ಮೊಹಸೀನ್ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂವಿಧಾನದ 14, 21 ಮತ್ತು 25ನೇ ಆರ್ಟಿಕಲ್ ಗಳು ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಎನ್ಆರ್ ಸಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ, ಮಹಿಳಾ ನಾಯಕಿ ಝೈನಬ್ ಮೊಹಮ್ಮದಿ, ಭಾರತೀಯ ಮಹಿಳಾ ಒಕ್ಕೂಟ ಸಂಚಾಲಕಿ ಭಾರತಿ, ಹರ್ಷಿಯಾ ಹರ್ಷಫ್ ಮೊದಲಾದವರು ಮಾತನಾಡಿದರು.
ಎಐಎಂಎಸ್ಎಸ್ ನ ಎಂ.ವಿ.ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಫರಿದಾ ಬೇಗಂ ಸ್ವಾಗತಿಸಿದರು. ಆಶ್ವಿನಿ, ಶಮಾ ರಾಷ್ಟ್ರಗೀತೆ ಹಾಡಿದರು. ಅಜಾದಿ ಘೋಷಣೆಗಳು ಕಾರ್ಯಕ್ರಮದಲ್ಲಿ ಮೊಳಗಿದವು. ಸಾರೆ ಜಹಾ ಸೆ ಅಚ್ಚ ಹಾಡು ಹಾಡಲಾಯಿತು.