ತುಮಕೂರು ನಗರದಲ್ಲಿ ನಡೆಸಿದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ನೇಮಕ ಮಾಡಿರುವ ಸ್ಮಾರ್ಟ್ ಸಿಟಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ.
ಈ ಸಮಿತಿಯೂ ಯಾವುದೇ ಗೌರವಧನ ಸ್ವೀಕರಿಸದೇ ಕೆಲಸ ಮಾಡಬೇಕಾಗಿದೆ. ಆದರೆ ಕಾಮಗಾರಿ ಗುಣಮಟ್ಟ ಮತ್ತಿತರರ ಕಾರಣಗಳಿಗಾಗಿ ತಜ್ಷರನ್ನು ನೇಮಕ ಮಾಡಿಕೊಂಡರೆ ಮಾತ್ರ ಅವರಿಗೆ ಗೌರವ ಧನ ನೀಡಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರಿನ ಕಾವೇರಿ ಭವನದಲ್ಲಿ ನಡೆದ ಸಭೆಯಲ್ಲಿ ಈ ಷರತ್ತುಗಳನ್ನು ಒಳಗೊಂಡು ಪರಿಶೀಲನಾ ಸಮಿತಿಯನ್ನು ನೇಮಕ ಮಾಡಲಾಗಿದೆ, ಈ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್, ಸಮಿತಿ ಅಧ್ಯಕ್ಷ ಜಯಪ್ರಕಾಶ್ ಇದ್ದರು.
ಈ ಸಮಿತಿಯು ಯಾವಾಗಲೂ ಕಾರ್ಯತತ್ಪರವಾಗಿರುವುದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳು, ಕೆಲಸದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದರೆ ಅಥವಾ ಸಂಸದರು, ಶಾಸಕರು ಆರೋಪ ಮಾಡಿದರೆ ಅಂಥಹ ಕಾಮಗಾರಿಗಳ ಪಟ್ಟಿಯನ್ನು ಮಾತ್ರ ಪರಿಶೀಲನೆ ಮಾಡಿ ವರದಿ ನೀಡುವ ಅಧಿಕಾರ ನೀಡಲಾಗಿದೆ.
ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಹೊರಗಿನ ಹೆಸರಾಂತ ತಜ್ಞರು ಅಥವಾ ಸಂಸ್ಥೆಗಳನ್ನು ನೇಮಿಸಿಕೊಂಡ ಅವರಿಂದ ವರದಿ ಪಡೆಯುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.
ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಯಾವುದೇ ಅಧಿಕಾರಿಯನ್ನು ಸ್ಥಳಕ್ಕೆ ಕರೆದು ವಿವರಣೆ ಪಡೆಯುವ, ಯಾವುದೇ ದಾಖಲೆಯನ್ನು ಪರಿಶೀಲಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.
ಬೇಕಾಬಿಟ್ಟಿ, ಅನಗತ್ಯ ಕಾಮಗಾರಿಗಳಿಗೆ ತಡೆ ಹಾಕುವ ಅಥವಾ ಅಂತಹ ಕಾಮಗಾರಿಗಳನ್ನು ಕೈ ಬಿಡುವಂತೆ ಶಿಫಾರಸು ಮಾಡುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.
ಮಹಾನಗರ ಪಾಲಿಕೆಯ ಸದಸ್ಯರಿಗೆ ಯಾವುದೇ ಹಕ್ಕು ನೀಡಿಲ್ಲ. ಮಹಾಪಾಲಿಕೆ ಸಾಮಾನ್ಯಸಭೆಯಲ್ಲಿ ಯಾವುದಾದರೂ ಕಾಮಗಾರಿ ಅಥವಾ ಯೋಜನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ಅಂಥಹ ವಿಷಯಗಳಲ್ಲೂ ಈ ಸಮಿತಿಯು ತನಿಖೆ ಮಾಡಬಹುದೇ ಅಥವಾ ಪಾಲಿಕೆಯು ತನಿಖೆ ಮಾಡುವಂತೆ ನೇರವಾಗಿ ಸಮಿತಿಗೆ ಸೂಚಿಸಬಹುದೇ ಎಂಬ ಬಗ್ಗೆ ಯಾವುದೇ ಉಲ್ಲೇಖ ಇಲ್ಲವಾಗಿದೆ.
ಪಾಲಿಕೆಗೂ ಅಧಿಕಾರ ನೀಡಬೇಕು
ಸ್ಮಾರ್ಟ್ ಸಿಟಿ ಕಾಮಗಾರಿ ವಿಷಯದಲ್ಲಿ, ಯೋಜನೆಗಳ ವಿಷಯದಲ್ಲಿ ಈಗಾಗಲೇ ನೇಮಕಗೊಂಡಿರುವ ಸಮಿತಿಯಿಂದ ತನಿಖೆ ನಡೆಸಿ ಆ ಬಗ್ಗೆ ವರದಿ ತರಿಸಿಕೊಳ್ಳುವ ಅಧಿಕಾರವನ್ನು ಪಾಲಿಕೆಗೆ ನೀಡಬೇಕು ಎಂದು ಚಿಕ್ಕಪೇಟೆ ವಾರ್ಡ್ ಸದಸ್ಯ ಕುಮಾರ್ ಪ್ರತಿಕ್ರಿಯಿಸಿದರು.