Publicstory.in
ತುಮಕೂರು: ಜಿಲ್ಲೆಯಲ್ಲಿ ದಿನೇದಿನೇ ಕೊರೊನ ಸೋಂಕಿತರ ಸಂಖ್ಯೆ ಏರತೊಡಗಿದೆ. ಜುಲೈ 1ರಂದು ಒಂದೇ ಜಿಲ್ಲೆಯಲ್ಲಿ 26 ಪ್ರಕರಣಗಳು ದೃಢಪಟ್ಟಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಈವರೆವಿಗೂ ತುಮಕೂರು ನಗರದ ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಅಶೋಕನಗರ, ಗಾಂಧೀನಗರ, ಕೆ.ಆರ್.ಬಡಾವಣೆ, ಮರಳೂರು, ಪಿಎಚ್ ಕಾಲೋನಿ, ಅಮರಜ್ಯೋತಿ ನಗರ, ವಿನಾಯಕನಗರ, ಶಾಂತಿನಗರ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 8 ಕೊರೊನ ಪ್ರಕರಣಗಳು ದಾಖಲಾಗಿವೆ. ಕುಣಿಗಲ್ ಎರಡನೇ ಸ್ಥಾನಕ್ಕೇರಿದೆ.
ಕುಣಿಗಲ್ ತಾಲೂಕಿನ ಹಳ್ಳಿಗಳಿಗೂ ಕೊರೊನ ಸೋಂಕು ಹರಡಿದೆ. 6 ಸೋಂಕಿನ ಪ್ರಕರಣಗಳು ವರದಿಯಾಗಿವೆ.ಕುಣಿಗಲ್ ಅಗ್ರಹಾರ, ಇಪ್ಪಾಡಿ,ಬಂಡಿಗೌಡನಪಾಳ್ಯದಲ್ಲಿ ಸೋಂಕು ಕಾಣಿಸಿದೆ.
ಮಧುಗಿರಿ ಮೂರನೇ ಸ್ಥಾನದಲ್ಲಿದೆ. ತಾಲೂಕಿನಲ್ಲಿ 4 ಪ್ರಕರಣಗಳು ದಾಖಲಾಗಿವೆ. ಪಾವಗಡ ತಾಲೂಕಿನಲ್ಲಿ 3 ಪ್ರಕರಣಗಳು, ಸಿರಾ, ಗುಬ್ಬಿ ತಾಲೂಕುಗಳಲ್ಲಿ ತಲಾ 2, ಚಿಕ್ಕನಾಯಕನಹಳ್ಳಿಯಲ್ಲಿ 1 ಸೋಂಕು ಪ್ರಕರಣ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಮತ್ತಷ್ಟು ಪ್ರಕರಣಗಳು ಕಂಡುಬರಬಹುದು. 2526 ಮಂದಿಯ ಫಲಿತಾಂಶಗಳು ಇನ್ನು ಬರಬೇಕಾಗಿದೆ. ಇದುವರೆಗೆ 83 ಕೋರೋನ ಪ್ರಕರಣಗಳು ಕ್ರಿಯಾಶೀಲವಾಗಿದ್ದು ಏಳು ಮಂದಿ ಮೃತಪಟ್ಟಿದ್ದಾರೆ.
ಇದೀಗ ಹೊಸ ಪ್ರದೇಶಗಳಲ್ಲೂ ಕೊರೊನ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸೀಲ್ ಡೌನ್ ಪ್ರದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಳೆಗಾಲದಲ್ಲಿ ಆರೋಗ್ಯ ಇಲಾಖೆ ಕೊರೊನ ಸೋಂಕನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಪಾವಗಡ ತಾಲೂಕು, ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಿಗೆ ಬರುವವ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು ಅಲ್ಲಿಂದ ಬರುವವರು ನೇರವಾಗಿ ಹಳ್ಳಿಗಳನ್ನು ಸೇರುತ್ತಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲೂ ಅತಂಕ ಹೆಚ್ಚಾಗಲು ಕಾರಣವಾಗಿದೆ.