Publicstory. in
ತುಮಕೂರು: ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿತರು ದೃಢಪಟ್ಟಿಲ್ಲ. ವಿದೇಶದಿಂದ ಬಂದವರಲ್ಲಿ ಶಂಕಿತ 12 ಮಂದಿಯ ರಕ್ತ ಹಾಗೂ ಗಂಟಲು ಸ್ರಾವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಇನ್ನಷ್ಟೇ ಕೆಲವರ ವರದಿ ಬರಬೇಕಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮಾತ್ರವೇ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಯಾರಿಗೂ ಸೋಂಕು ಕಾಣಿಸಿಲ್ಲ.
ಜಿಲ್ಲೆಯಲ್ಲಿ ಕರೊನಾ ವಿರುದ್ಧ ತೀವ್ರ ನಿಗಾ ಇಟ್ಟಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಸುಳ್ಳು ಸುದ್ದಿಗಳು ಹರಡದಂತೆಯೂ ನಿಗಾವಹಿಸಿದೆ.
ಈವರೆಗೂ ಬೇರೆ ಬೇರೆ ದೇಶಗಳಿಂದ 212 ಮಂದಿ ತುಮಕೂರಿಗೆ ಬಂದಿದ್ದು ಅವರೆಲ್ಲರ ಮೇಲೆ ನಿಗಾ ಇಡುವ ಕೆಲಸವನ್ನು ಜಿಲ್ಲಾಡಳಿತ ಈಗಾಗಲೇ ಆರಂಭಿಸಿದೆ.
ಅವರಲ್ಲಿ ತಪಾಸಣೆಗೊಳಪಡುತ್ತಿರುವವರ ಸಂಖ್ಯೆ 83, ಕೆಲವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಅವರ ಚಲನ ವಲನಗಳ ಮೇಲೆ ನಿಗಾ ಇಡಲು ಕೆಲವು ಕಡೆ ಸಿಬ್ಬಂದಿಯನ್ನು ಸಹ ನೇಮಕ ಮಾಡಲಾಗಿದೆ.
ನಿಗಾವಣೆಯಲ್ಲಿ 28 ದಿನಗಳ ಅವಧಿ ಮುಗಿಸಿರುವವರ ಸಂಖ್ಯೆ 8, ರಕ್ತ ಗಂಟಲು ಮಾದರಿಗಳ ಪರೀಕ್ಷೆ ನಡೆಸಿರುವವರ 8 ಮಂದಿಯ ವರದಿ ಬಂದಿದ್ದು ಇವರಲ್ಲಿ ಸೋಂಕು ಕಂಡುಬಂದಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿದಿನ ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲಾ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗೆ 3 ಹಂತದ ತರಬೇತಿ ನೀಡಲಾಗಿದೆ.
ಆರೋಗ್ಯ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಜಾರದೊಂದಿಗೆ ಮನೆ-ಮನೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‍ಗಳನ್ನು ಗುರಿತಿಸಲಾಗಿದೆ. ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಸೂಚನೆ ನೀಡಲಾಗಿದೆ.
ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್ ಗಳನ್ನು ತೆರೆಯಲಾಗಿದೆ. ಅಲ್ಲದೇ ಪ್ರತಿನಿತ್ಯ ಖಾಸಗಿ ಕ್ಲಿನಿಕ್‍ಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಅದೇಶಿಸಲಾಗಿದೆ. ಎಂ
ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತಹ ಸೋಂಕು ಕಂಡುಬಂದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಲು ಮನವಿ ಮಾಡಲಾಗಿದೆ.