Publicstory
ತುರುವೇಕೆರೆ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುಂದಿನ ದಿನಗಳಲ್ಲಿ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಬೇಕೆಂಬ ಚಿಂತನೆ ಇದೆ ಎಂದು ನೂತನ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು.
ತಾಲ್ಲೂಕಿನ ನೂತನ ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಅವರಿಗೆ ಅಭಿನಂಧನೆ ಸಲ್ಲಿಸಿ ಸುದ್ದಿಗಾರರರೊಂದಿಗೆ ಮಾತನಾಡಿದರು.
ಪಟ್ಟಣದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕನ್ನಡ ಭವನದ ಮೇಲ್ಭಾಗದ ಹಂತ ಅಪೂರ್ಣಗೊಂಡಿದ್ದುಅದನ್ನು ಪೂರ್ಣಗೊಳಿಸುವುದು, ಸಂಪಿಗೆ ಗ್ರಾಮದಲ್ಲಿನ ಬಿ.ಎಂ.ಶ್ರೀ ಭವನ ಶಿಥಿಲವಾಗಿದ್ದು ಅಧಿಕಾರಿಗಳು ಹಾಗು ಎಲ್ಲ ಸಹಕಾರ ಪಡೆದು ಕಾಯಕಲ್ಪ ರೂಪಿಸುವುದು, ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿನ ಯುವ ಕವಿಗಳನ್ನು ಕಾವ್ಯದ ಮೂಲ ಪರಿಚಯಿಸುವುದು,
ಜನಪದ ಕಲೆಗಳಿಗೆ ಒತ್ತು ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ಪೀಳಿಗೆಯ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲ್ಲೂಕಿನ ಪಂಚಾಯಿತಿಗೊಂದು ಜನಪದ ಮೇಳ ಏರ್ಪಡಿಸಿ ಅಲ್ಲಿನ ಕಲಾವಿದರನ್ನು ಪ್ರೋತ್ಸಾಹಿಸುವುದು, ಕನ್ನಡ ಭವನದಲ್ಲಿನ ಗ್ರಂಥಾಲಯವನ್ನು ಬಹುಪಯೋಗಿ ಆಗುವಂತೆ ಉನ್ನತೀಕರಿಸುವುದು, ಕಾವ್ಯ ಕಮ್ಮಟಗಳು, ದಾನಿಗಳ ಹೆಸರಿನಲ್ಲಿ ದತ್ತಿ ಉಪನ್ಯಾಸ ಏರ್ಪಡಿಸುವುದು.
ಜಿಲ್ಲಾಧ್ಯಕ್ಷರ ಸಲಹೆ ಮೇರೆಗೆ ತಾಲ್ಲೂಕು ಅಥವಾ ಜಿಲ್ಲಾ ಸಮ್ಮೇಳನ ಏರ್ಪಡಿಸುವುದು, ಕಸಾಪ ಆ ಜೀವಸದಸ್ಯರು, ಕಲಾವಿದರು, ಸಾಹಿತಿಗಳು, ಜನಪ್ರತಿನಿಧಿಗಳು, ಮುಖಂಡರುಗಳ ಹೀಗೆ ಅನೇಕರ ಸಲಹೆ, ಸಹಕಾರ ಪಡೆದು ತಾಲ್ಲೂಕಿನ ಸಾಹಿತ್ಯ ಚಟುವಟಿಕೆಗಳನ್ನ ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.
ಸಾಹಿತ್ಯದ ಜೊತೆಗೆ ನಾನು ಪಟ್ಟಣದ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾಗಿಯೂ, ಹಾಲಿ ನಿರ್ದೇಶಕರೂ ಆಗಿದ್ದೇನೆ. ತಾಲ್ಲೂಕು ಒಕ್ಕಲಿಗರ ಸಂಘದ ಆಂತರಿಕ ಲೆಕ್ಕಪರಿಶೋಧಕರಾಗಿದ್ದು, ಡಿ.ಕಲ್ಕೆರೆ ವಿಎಸ್ಎಸ್ಎನ್ನ ಮಾಜಿ ಅಧ್ಯಕ್ಷ ಹಾಗು ಹಾಲಿ ನಿರ್ದೇಶಕರಾಗಿದ್ದೇನೆ, ಕೃಷಿಕ ಸಮಾಜ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದರು.
ನಾನು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರೂ ನನ್ನ ಪಕ್ಷ ಕನ್ನಡ ನಾಡು, ನಾನು ಪಕ್ಷಾತೀತವಾಗಿ ಕನ್ನಡಕ್ಕಾಗಿ ದುಡಿಯುವೆ ಜೊತೆಗೆ ತಾಲ್ಲೂಕಿನ ಕಲೆ, ಸಾಹಿತ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದು ಆಶಾಭಾವ ವ್ಯಕ್ತಪಡಿಸಿದರು.