ರಂಗನಕೆರೆ ಮಹೇಶ
ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯ ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕೆ ಅಳಿಉಂಟು ಜಂಗಮಕ್ಕೆ ಅಳಿವಿಲ್ಲ.. ಇಂದು ಇನ್ನು ಬೇಕು, ಇನ್ನು ಬೇಕು ಎಂದು ಹಂಬಲಿಸುತ್ತಿರುವ ಮಾನವನ ಆಸೆಯ ಬದುಕನ್ನು ಆರ್ಥೈಸಿಕೊಳ್ಳಲು ಇದೊಂದು ವಚನ ಸಾಕು….
12 ನೆಯ ಶತಮಾನ ಅದೊಂದು ಪರ್ವಕಾಲ, ಶರಣ ಪರಂಪರೆಯ ಉತ್ತುಂಗ ಕಾಲಘಟ್ಟದಲ್ಲಿ ಮಹಾನ್ ಸಂತರು ಉದಯಿಸಿದರು.
ಶರಣರ ಮೂಲ ತತ್ವವೇ ಕಾಯಕವಾಗಿತ್ತು. ದುಡಿದು ತಿನ್ನುವುದು ಶರಣರ ಗುರಿಯಾಗಿತ್ತು. ಇಂತಹ ಶರಣರ ಸಂಗಮದಲ್ಲಿ ಮಹಾನ್ ಶಕ್ತಿಯೊಂದು ಉದಯಿಸಿತ್ತು.
ಆ ಶಕ್ತಿಯೇ ಬಸವೇಶ್ವರರು. ದೀನ-ದಲಿತ, ಹೆಣ್ಣು-ಗಂಡು, ಮೇಲು-ಕೀಳೆಂಬ ಅಂದಿನ ಸಮಾವನ್ನು ಸರಿ ದಾರಿಗೆ ತರಲು ಜನಿಸಿದ ಪುಣ್ಯಾತ್ಮ ಪುರುಷರೇ ಬಸವೇಶ್ವರರು.
ಮೇಲ್ವರ್ಗದಲ್ಲಿ ಜನಿಸಿ ಮನೆಯಲ್ಲಿ ತನ್ನ ಒಡಹುಟ್ಟಿದ ಸಹೋದರಿಗೆ, ಕೆಳ ವರ್ಗದ ಜನರಿಗೆ ನೀಡುತ್ತಿದ್ದ ಸ್ಥಾನಮಾನವನ್ನು ಧಿಕ್ಕರಿಸಿ ಮನೆಯಿಂದ ಹೊರಬಂದು ಅಂತಹವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಬಸವಣ್ಣ ಪಟ್ಟ ಕಷ್ಟ ನಾವೆಲ್ಲ ಓದಿ ತಿಳಿದಿದ್ದೇವೆ.
ಶರಣ ಪರಂಪರೆಯ ಬಸವಣ್ಣನವರ ನೇತೃತ್ವದಲ್ಲಿ ಶರಣರು ತಮ್ಮ ಜೀವನದ, ಬದುಕಿನ ಮೌಲ್ಯಗಳನ್ನು ಗುರುತಿಸಿಕೊಂಡರು.
ಕೇವಲ ಮೌಲ್ಯಗಳನ್ನು ಗುರುತಿಸಿಕೊಂಡು ಅವುಗಳನ್ನು ಪಠಿಸಲಿಕ್ಕೆ, ಹೇಳುವುದಕ್ಕೆ ಸೀಮಿತವಾಗಿರಿಸದೆ ಅವುಗಳನ್ನು ಕಾಯ, ವಾಚಾ, ಮನಸಾ ಬದುಕಿನಲ್ಲಿ ಅಳವಡಿಸಿಕೊಂಡವರು ಬಸವಣ್ಣನವರು.
ದಮನಿತರ ಬದುಕು ಹಸನಾಗಿಸಲು ಅವರುಗಳಿಗೆ ವಿದ್ಯೆಯೆಂಬ ಜ್ಯೋತಿ ಬೆಳಗಿಸಿ ಶೋಷಿತರು, ಸ್ತ್ರೀ ಯರಿಗೆ ಸಮಾನತೆಯ ಪಾಠ ಮಾಡಿದರು. ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವೇಶ್ವರರು ಅಂದೇ ಸಂಸತ್ತಿನ ರೂಪ ಕೊಟ್ಟು ಅದರಲ್ಲಿ ಎಲ್ಲಿರಿಗೂ ಸಮಾನ ಅವಕಾಶ ಕಲ್ಪಿಸಿದ್ದರು.
ದೇವರಲ್ಲಿ ಭಕ್ತಿ ಇರಬೇಕು ಆದರೆ ದೇವರ ಹೆಸರಿನಲ್ಲಿ ಮೂಡನಂಬಿಕೆಗಳಿಗೆ ಸ್ಥಾನವಿರಲಿಲ್ಲ. ಸ್ವರ್ಗ – ನರಕಗಳು ಬೇರೆಡೆ ಇಲ್ಲ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಪ್ರತಿಪಾದಿಸಿ, ಸಮಾಜದ ನವ ಕಲ್ಪನೆಗೊಂದು ಹೊಸ ಭಾಷ್ಯ ಬರೆದರು.
ಕಾಯಕ, ದಾಸೋಹ ತತ್ವಗಳನ್ನು ಮುಂದಿಟ್ಟು ಹುಟ್ಟಿನಿಂದ ಅಥವಾ ಅವರು ಮಾಡುವ ಕಾಯಕದಿಂದಾಗಲೀ ಯಾರೂ ಶ್ರೇಷ್ಟರಲ್ಲ, ಯಾರೂ ಕನಿಷ್ಠರೂ ಅಲ್ಲ. ಸತ್ಯ ಮತ್ತು ಕಾಯಕವೇ ಎಲ್ಲಕ್ಕಿಂತ ಶ್ರೇಷ್ಠ ಎಂದು ಜಗಕ್ಕೆ ಸಾರಿದರು.
ಜಗತ್ತಿನ ಸಮುದಾಯದವರಿಗೂ ಸಹ ಸಮಾನ ಸ್ಥಾನ ಮಾನ ನೀಡಿ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಬಸವಣ್ಣ 800 ವರ್ಷಗಳ ಹಿಂದೆಯೇ ನಿರ್ಮಿಸಿದ್ದು ಈಗ ಇತಿಹಾಸ.
ಬುದ್ಧ ಹಾಕಿದ ಸಮಾನತೆಯ ಬೀಜವನ್ನು ಬಸವೇಶ್ವರರು ನೀರೆರದು ಸಾಕಿ ಹೆಮ್ಮರವನ್ನಾಗಿಸಿದರು. ಆ ಮರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಫಲವಾದ ಕಾರಣದಿಂದಲೇ ಇಂದು ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಇಂದಿಗೂ ಒಂದೇ ಸಾಲಿನಲ್ಲಿ ನೋಡುತ್ತೇವೆ.
ಬಸವೇಶ್ವರರು ಎತ್ತಲ್ಲ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಎತ್ತಲು ಬಂದ ಮಹಾನ್ ಸಂತ. ಇಂದಿಗೂ ಕೆಲವರು ಬಸವನ ರೂಪದಲ್ಲಿ ಬಸವೇಶ್ವರರನ್ನು ಕಾಣುತ್ತಾರೆ. ಬಸವನಂತೆ ಬಸವೇಶ್ವರರು ಸಹ ಅನ್ಯರಿಗೆ ಕೆಡುಕನ್ನು ಬಯಸದೆ ಎಲ್ಲರನ್ನೂ ಒಂದೇ ಮಾರ್ಗದಲ್ಲಿ ನೋಡಿದವರು.
ಸ್ತ್ರೀಯರಿಗೆ ಸಮಾನತೆ, ಜಾತಿ ಪದ್ದತಿಯ ವಿರುದ್ಧ ದ್ವನಿ ಎತ್ತಿದ ಅಂತಹ ಮಹಾನ್ ಪುಣ್ಯ ಪುರುಷರ ಜನ್ಮ ದಿನ ಅಜಾರಾಮರವಾಗಿ ಉಳಿಯಲಿ……
Nice
ಸರ್ ದಯಮಾಡಿ ಕೊನೆಯ ವಾಕ್ಯದಲ್ಲಿ ಬಸವನಲ್ಲಿ ಬಸವಣ್ಣನನ್ನ ನೋಡುತ್ತಾರೆ ಆ ವಾಕ್ಯವನ್ನ ತಗೆಯಿರಿ.. ಕಾರಣ ಬಸವ (ಹಸು ಮೂಖ ಪ್ರಾಣಿ ಅಷ್ಟೆ) ಬಸವಣ್ಣ ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿಯಾದವರು ಬಸವಣ್ಣ ಬ್ರಾಹ್ಮಣ್ಯದ ವಿರುದ್ಧ ಹೋರಾಡಿದವರು ಮತ್ತದೇ ಬ್ರಾಹ್ಮಣ್ಯವನ್ನ ಮೆತ್ತಿ ಅವರನ್ನ ಮಲೀನ ಮಾಡಬೇಡಿ..
ಸ್ವಲ್ಪ ಖಾರವಾಗಿದೆ ನನ್ನ ಮಾತು ಕಾರಣ ಬಸವಣ್ಣ ಅಂದರೇ ನೇರ..