ಕೆ.ಇ.ಸಿದ್ದಯ್ಯ
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದ ರಾಜ್ಯ ಸರ್ಕಾರ ದಬ್ಬಾಳಿಕೆ, ದಮನಕಾರಿ ನೀತಿ ಅನುಸರಿಸುತ್ತಿರುವುದು ಬಿಡಬೇಕು ಎಂದು ಪಿಯುಜಿಎಲ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ದೊರೈರಾಜ್ ಹೇಳಿದ್ದಾರೆ.
ತುಮಕೂರಿನ ಅಮಾನಿಕೆರೆಯಲ್ಲಿ ಅಂಗನವಾಡಿ ನೌಕರರ ಸಂಘ ಸಿಐಟಿಉ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ನಡೆಸುತ್ತಿರುವ ಧರಣಿನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು 1975ರಿಂದ ಮಕ್ಕಳ ಪೋಷಣೆ ಮತ್ತು ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಬೇಡಿಕೆಗಳು ಸರಿಯಾಗಿವೆ. ಹಾಗಾಗಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಮಾತೃದೇವೋಭವ ಎನ್ನುವವರು ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದ್ದಾರೆ. ಅಂಗನವಾಡಿಗಳನ್ನ ರಾಜ್ಯ ಸರ್ಕಾರ ದಮನ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಅಂಗನವಾಡಿಗಳನ್ನು ಬಲಿಷ್ಠಗೊಳಿಸಲು ಪ್ರಯತ್ನಿಸಬೇಕು. ಅಂಗನವಾಡಿಗಳನ್ನು ಮುಚ್ಚಿದರೆ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬೀಳುತ್ತದೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಪಾದಯಾತ್ರೆ ನಡೆಸಲು ಮುಂದಾಗಿದ್ದರೆ ಅದಕ್ಕೆ ಸರ್ಕಾರ ಅವಕಾಶ ನೀಡಿಲ್ಲ. ಇದು ಸಮರ್ಥನೀಯವಲ್ಲ. ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಇದುವರೆಗೆ ಅಂಗನವಾಡಿಗಳಲ್ಲಿ ಶಿಕ್ಷಣ ಪಡೆದಿರುವ ಪೋಷಕರೊಂದಿಗೆ ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. ಪಿಯುಸಿಎಲ್ ಮತ್ತುಜನಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಬೆಂಬಲ ನೀಡುತ್ತದೆ. ಮುಂದೆಯೂ ಕೂಡ ನಿಮ್ಮೊಂದಿಗೆ ಇರಲಿದ್ದೇವೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇಂತಹ ಹೋರಾಟಗಳನ್ನು ಹತ್ತಿಕ್ಕುವ ಮೂಲಕ ಬಡವರ ಮಕ್ಕಳ ಶಿಕ್ಷಣ ಹಕ್ಕನ್ನು ಮೊಟುಕುಗೊಳಿಸದಂತೆ ಆಗುತ್ತದೆ. ಮಹಿಳೆಯರ ಸಬಲೀಕರಣದ ಮಾತನಾಡುವ ಸರ್ಕಾರ ಈ ರೀತಿ ಹತ್ತಿಕ್ಕುವುದು ಸಹನೀಯವಲ್ಲ ಎಂದು ಕಿಡಿಕಾರಿದರು.
ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ ಮಾತನಾಡಿ, ಸರ್ಕಾರ ಅಂಗನವಾಡಿ ತಾಯಂದಿರ ನೆರವಿಗೆ ಬರಬೇಕು. ಅಂಗನವಾಡಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಅವರು ಕೇಳುತ್ತಿರುವ ಬೇಡಿಕೆಗಳು ನ್ಯಾಯಯುತವಾಗಿವೆ. ಕೂಡಲೇ ಅಂಗನವಾಡಿ ನೌಕರರ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ರಾತ್ರಿಯೆಲ್ಲ ಇಲ್ಲೇ ಕಾಲಕಳೆದಿದ್ದಾರೆ. ಅವರ ನೋವು, ಕಷ್ಟಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅವರ ನೆರವಿಗೆ ಬರಬೇಕು. ಅಂಗನವಾಡಿ ತಾಯಂದಿರು ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಾಮಾಣಿಕವಾಗಿ ದುಡಿಯುತ್ತ ಮಕ್ಕಳನ್ನು ತಿದ್ದುವ ತಾಯಂದಿರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ, ಎನ್.ಕೆ.ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಮೊದಲಾದವರು ಉಪಸ್ಥಿತರಿದ್ದರು
ಅಂಗನವಾಡಿ ಕಾರ್ಯಕರ್ತೆ ಯರ ಬೇಡಿಕೆ ನ್ಯಾಯೋಚಿತ ವಾದುದು ಅವರ ಆಶೋತ್ತರಗಳಿಗೆ ಸರ್ಕಾರ ಸ್ಪಂದಿಸಬೇಕು.
ಇವರಿಂದ ಮಕ್ಕಳಿಗೆ ಇಂಗ್ಲಿಷ್ ಕಳಿಸಲಾಗದು ಎಂಬ ಕುಂಟುನೆಪವೊಡ್ಡಿ ಸರ್ಕಾರ ಬೇಡಿಕೆ ನಿರಾಕರಿಸದಿರಲಿ. ತರಬೇತಿ ಕೊಟ್ಟರೆ ಸಮರ್ಥಶಾಲಿಗಳಾಗುವರು