Publicstory
ತುಮಕೂರು: ನಗರದ ರಿಂಗ್ ರಸ್ತೆಯ ಸಲಾಂ ಕೋವಿಡ್ ಕೇರ್ ಸೆಂಟರ್ ಗೆ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು.
ಅವರು ನಗರದ ಹಿರಿಯ ಕಾಂಗ್ರೆಸ್ ಮಖಂಡ ಹಾಗು ಮಾಜಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಇಕ್ಬಾಲ್ ಅಹಮದ್ ರವರು ನಡೆಸುತ್ತಿರುವ ಉಚಿತ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಬಳಿ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದು ಇಕ್ಬಾಲ್ ಅಹಮದ್ ರವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಇದೇ ವೇಳೆ ಅವರು ಸುದ್ಧಿಗಾರರೊಂದಿಗೆ ಮಾತನಾಡಿ ಕೊರೋನಾ ಮಹಾಮಾರಿಯಿಂದ ಇಡೀ ಪ್ರಪಂಚ ತಲ್ಲಣಿಸಿ ಹೋಗಿದೆ. ಬಂಧು ಬಳಗ ಆಪ್ತರು ಹೀಗೆ ಎಲ್ಲರನ್ನು ಕಳೆದುಕೊಂಡು ಜನರ ಜೀವನ ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದೆ. ಇಂಥಹ ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಇಕ್ಬಾಲ್ ಅಹಮದ್ ರವರು ಉಚಿತವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿ ಬಡವರು ಅಶಕ್ತರಿಗೆ ಸಂಪೂರ್ಣ ಉಚಿತವಾಗಿ ಆರೋಗಯ ಸೇವೆ ನೀಡುತ್ತಾ ಅವರ ಜೀವ ಉಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹವಾದುದ್ದು ಎಂದರು.
ಸಮಾಜದಲ್ಲಿ ಸಹಾಯ ಮಾಡುವ ಶಕ್ತಿಯುಳ್ಳವರು ಬಹಳ ವಿರಳವಾಗಿರುವ ಈ ಸಂದರ್ಭದಲ್ಲಿ ಇಕ್ಬಾಲ್ ಅಹಮದ್ ರವರ ಸಾಮಾಜಿಕ ಕಾರ್ಯ ಶ್ಲಾಘನೀಯವಾದುದ್ದು. ಒಂದು ವರ್ಷಗಳಿಂದ ಫೀವರ್ ಕ್ಲಿನಿಕ್ ನಡೆಸಿಕೊಂಡು ಬಂದಿರುವುದು, ಬಡ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿರುವುದು, ಸಂಕಷ್ಟದಲ್ಲಿದ್ದ ಕಲಾವಿದರಿಗೆ ಆಹಾರ ಪದಾರ್ಥಗಳ ವಿತರಣೆ ಖಾಸಗೀ ಶಾಲಾ ಶಿಕ್ಷಕರಿಗೆ ಫೇಸ್ ಶೀಲ್ಡ್ ಮಾಸ್ಕ ವಿತರಣೆ, ಉಚಿತ ಆಂಬ್ಯುಲೆನ್ಸ್ ಸೇವೆ, ಅನಾಥ ಶವಗಳ ಅಂತ್ಯಸಂಸ್ಕಾರ ಹೀಗೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ಇಕ್ಬಾಲ್ ಅಹಮದ್ ರವರು ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ಸಾಮಾಜಿಕ ಕಾಳಜಿಗೆ ಹಿಡಿದಿರುವ ಕನ್ನಡಿಯಾಗಿದೆ. ಹೀಗೆ ಅವರ ಸಾಮಾಜಿಕ ಕಾರ್ಯಗಳು ನಿರಂತರವಾಗಿ ಸಾಗಲಿ ಸಮಾಜದ ಎಲ್ಲ ವರ್ಗದ ಜನರಿಗೂ ಅವರ ಸೇವೆ ದೊರೆಯುವಂತಾಗಲಿ ಎಂದು ಆಶಿಸಿದರು.
ಇದೇ ವೇಳೆ ಸಲೀಂ ಅಹಮದ್ ರವರನ್ನು ಸಲಾಂ ಹೆಲ್ತ್ ಸರ್ವೀಸಸ್ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ರಾಮಕೃಷ್ಣ, ಹಿರಿಯ ಕಾಂಗ್ರೆಸ್ ಮುಖಂಡ ಮುರುಳೀಧರ ಹಾಲಪ್ಪ, ಮುಂತಾದವರು ಉಪಸ್ಥಿತರಿದ್ದರು.