Publicstory. in
ಬೆಂಗಳೂರು: 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ಪ್ಲೀಸ್ ಮಾಮ Forget ಅಂದ.
ಚಿರು ಮದುವೆ ಹೇಗೆ ನಡೆಯಿತು ಎಂಬುದನ್ನು ಜಗ್ಗೇಶ್ ಹೀಗೆ ನೆನಪಿಸಿಕೊಂಡಿದ್ದು, ಮುಂದೆ ಓದಿ.
ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಎಂದು ಚಿರು ಹೇಳಿದ. ಸುಂದರ್ ರಾಜ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಣಾಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅಮ್ಮಣ್ಣಾಯ ಅವರು ‘ಜಗ್ಗೇಶ್… ಅಷ್ಟಮಕುಜ ದೋಷ ಇದೆ. ಅದಕ್ಕೆ ಕೆಲ ಪೂಜೆ ಮುಖ್ಯ. ಅದನ್ನು ಮಾಡಿ ಮುಂದುವರೆಯಿರಿ’ ಎಂದರು. ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು.
ನಟ ಗಣೇಶನ ಜೊತೆ ಒಂದು ಅತಿಥಿ ಪಾತ್ರ ನಿಗದಿಯಾಗಿತ್ತು. ಆ ಚಿತ್ರೀಕರಣ ಮೇಘನಾ ಮನೆ ಮುಂದೆಯೇ ನಡೆಯಿತು. ಚಿತ್ರೀಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು, ಅವರ ಮದುವೆಯ ವಿಷಯ ಮಾತಾಡಿದೆ. ಮದುವೆ ನಿಗದಿಯಾಯಿತು. ಮೇಘನಾ ಹಾಗೂ ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು. ದೇವರ ದಯೆಯಿಂದ ಮದುವೆಯು ಮುಗಿಯಿತು.
ನಂತರ ಚಿರು ಅನೇಕ ಬಾರಿ ಕರೆಮಾಡಿ ‘ಮಾಮ ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ’ ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ. ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು (ಭಾನುವಾರ) ನಾನು ಮತ್ತು ಪರಿಮಳ ಚಿರು ಬಗ್ಗೆ ಮಾತಾಡುತ್ತಾ ‘ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ ಗ್ಯಾಪ್? ಇಷ್ಟೊತ್ತಿಗೆ ಸಿಹಿಸುದ್ದಿ ಬೇಕಿತ್ತು’ ಎಂದು ಚರ್ಚಿಸಿದೆವು. ನಂತರ ಮಧ್ಯಾಹ್ನ ಊಟ ಮಾಡಿ ಮಲಗಿದೆ.
ಚಾಲಕ ಪದ್ದು ಕರೆಮಾಡಿ, ‘ಬಾಸ್ ಟೀವಿ ನೋಡಿದ್ರಾ..? ಚಿರು ಹೋಗಿಬಿಟ್ಟಾ,’ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು? ಇದಕ್ಕಾ ನಮ್ಮ ಹೋರಾಟ.? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ? ಎಂಥ ದೌರ್ಭಾಗ್ಯ? ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ?
ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ? ಓ ದೇವರೆ ಈ ಸಾವು ನ್ಯಾಯವೆ?
ಹೀಗೆಂದು ಜಗ್ಗೇಶ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.