ಪಾವಗಡ ತಾಲ್ಲೂಕಿನ ನೀಲಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಂಕಿಯ ಅವಘಡದಿಂದ ಬೀದಿಗೆ ಬಂದಿದ್ದ ನರಸಿಂಹಪ್ಪ, ಅನಿತಾ ದಂಪತಿಗಳಿಗೆ ಸ್ವಾಮಿ ಜಪಾನಂದ ಜಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಕುಟುಂಬದ ಪಾಲಿನ ಅಪದ್ಭಾಂದವರಾಗಿದ್ದಾರೆ.
ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ದಿನ ನಿತ್ಯ ಬಟ್ಟೆಗಳನ್ನು ಶುದ್ಧಿಗೊಳಿಸಿ ಜೀವನ ಸಾಗಿಸುತ್ತಿದ್ದರು. ಬೆಂಕಿಯ ಅವಘಡ ಜರುಗಿ ಇದ್ದ ಪುಟ್ಟ ಗುಡಿಸಿಲು ಆಹುತಿಯಾಗಿ ಬೂದಿಯಾಯಿತು. ಮನೆಯಲ್ಲಿದ್ದ ಸರ್ವಸ್ವವೂ ಭಸ್ಮವಾಗಿದ್ದವು. ಬಟ್ಟೆ, ಪಾತ್ರೆ ಮತ್ತಿತರ ಸಮಸ್ತ ವಸ್ತುಗಳು ಒಂದು ಕಪಾಟು ಸಮೇತ ಸಂಪೂರ್ಣವಾಗಿ ಕರಕಲಾಗಿದ್ದನ್ನು ಸಮಸ್ತ ಜನತೆ ಮಾಧ್ಯಮದ ಮೂಲಕ ಅರಿಯುವಂತಾಯಿತು. ಈ ಬಗ್ಗೆ ಪಬ್ಲಿಕ್ ಸ್ಟೋರಿ ವರದಿ ಮಾಡಿ, ಕುಟುಂಬ ಸದಸ್ಯರ ಸ್ಥಿತಿಯ ಬಗ್ಗೆ ಸ್ವಾಮೀಜಿಯವರ ಗಮನಕ್ಕೆ ತಂದಿತ್ತು.
ಬಡ ಕುಟುಂಬಕ್ಕೆ ತತ್ ಕ್ಷಣದ ಆಸರೆಯಾಗಿ ರಾಮಕೃಷ್ಣ ಸೇವಾಶ್ರಮ ಗೃಹೋಪಯೋಗಿ ವಸ್ತುಗಳನ್ನು, ಪಾತ್ರೆಗಳನ್ನು ಮತ್ತು ಚಳಿಯ ಈ ಸ್ಥಿತಿಯಲ್ಲಿ ಮಕ್ಕಳಿಗೆ ಹಾಗೂ ದಂಪತಿಗಳಿಗೆ ನೂತನ ಸ್ವೆಟರ್ಗಳು, ಕಂಬಳಿಗಳು, ಸೀರೆಗಳು, ದವಸ ಧಾನ್ಯಗಳನ್ನು ನೀಡಲಾಯಿತು. ಚುಮು ಚುಮು ಚಳಿಯಲ್ಲಿ ಮೂರು ದಿನಗಳಿಂದ ಉಟ್ಟ ಬಟ್ಟೆಯಲ್ಲಿಯೇ ಇದ್ದಂತಹ ಪುಟ್ಟ ಮಕ್ಕಳ ಮುಖದಲ್ಲಿ ಬೆಚ್ಚನೆಯ ಸ್ವೆಟರ್ ಗಳನ್ನು ಪೂಜ್ಯ ಸ್ವಾಮೀಜಿಯವರೇ ತೊಡಿಸಿದ ಸಂದರ್ಭದಲ್ಲಿ ಆನಂದದ ಸೆಲೆ ಹರಿದು ಬರುತ್ತಿರುವುದನ್ನು ಕಾಣಬಹುದಾಗಿತ್ತು.
ಕೊಟ್ಟ ವಸ್ತುಗಳನ್ನು ಕೊಂಡೊಯ್ಯುವ ಬಗ್ಗೆಯೂ ಚಿಂತಿಸುತ್ತಿದ್ದ ಅವರ ನಿಸ್ಸಹಾಯ ಸ್ಥಿತಿ ಗಮನಿಸಿ ಸಂಸ್ಥೆಯ ವಾಹನದಲ್ಲಿ ಅವರ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆಯನ್ನೂ ಸ್ವಾಮೀಜಿ ಮಾಡಿದರು. ಮುಖಂಡ ಕಿರಣ್ ಇದ್ದರು.