ನೋವು ಅಪಾತ್ರಕ್ಕೊಳಗಾಗುವ ಭಾವನೆ ಆದರೆ ರಂಗಮ್ಮಹೋದೆಕಲ್ ಅವರು ನೋವನ್ನು ಹೃದ್ಯವಾಗಿಸಬಹುದು ಎಂದಿದ್ದಾರೆ. ನೋವು ಇಲ್ಲಿ ವೇದ್ಯ ಎನ್ನುತ್ತಾರೆ. ಶ್ವೇತಾರಾಣಿ ಹೆಚ್
ರಂಗಮ್ಮ ಹೊದೇಕಲ್ ಅವರ ನೋವು ಒಂದು ಹೃದ್ಯಕಾವ್ಯ ಹನಿಗವನಗಳ ಸಂಕಲನ. ಅದರ ಅಂದವಾದ ಮುಖಪುಟ ಹಾಗೂ ಕೈಬರಹದಿಂದ ಮನಾ್ಸೆಳೆಯುತ್ತದೆ. ಮುದ್ರಣವಾದ ತಿಂಗಳಲ್ಲೇ ಮರುಮುದ್ರಣಗೊಂಡ ಕೃತಿ.ಈ ಸಂಕಲನದ ತುಂಬೆಲ್ಲಾ ಹೂವು ಮತ್ತು ನೋವು ಬದುಕಿನ ಗಂಭೀರ ಪಾಠಗಳನ್ನು ಸರಳವಾಗಿ ಹೇಳುತ್ತಾ ಹೋಗುತ್ತವೆ.
ಬದುಕು ಹಲವು ವಿಪರ್ಯಾಸಗಳ ಆಗರ. ಕಟುವಾಸ್ತವವನ್ನು ಹೂ ನಗೆ ಯೊಂದಿಗೆ ಹೇಳುವುದು ಕಷ್ಟ. ಆ ಕಷ್ಟವನ್ನು ಕವಯತ್ರಿ ಇಲ್ಲಿ ಸಾಧ್ಯವಾಗಿಸಿದ್ದಾರೆ.ನೋವು ಅಪಾತ್ರಕ್ಕೊಳಗಾಗುವ ವೇದನೆ. ಅದನ್ನು ಹಿತವಾಗಿಸುವ ಬಗೆ ಇಲ್ಲಿದೆ.ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಗಾದೆ ಮಾತಿದೆ. ಮೌನ ಸುಲಭಕ್ಕೆ ದಕ್ಕುವುದಿಲ್ಲ
ಆದರೆ
” ಮಾತುಗಳಾಚೆಗಿನ
ಮೌನ ದಕ್ಕಿದ ದಿನ
ಕವಿತೆ ಹೂವಾಗುತ್ತದೆ!”
ಹೌದು ಮೌನದ ಭಾಷೆ ತಿಳಿಯದೆ, ಅರಿಯದೆ ಕಾವ್ಯ ಕಟ್ಟಲು ಸಾಧ್ಯವಿಲ್ಲ. ಮೌನದಾಚೆಗಿನ ವೇದನೆ ತಿಳಿಯದೆ ಕಾವ್ಯ ಆಸ್ವಾದಿಸಲು ಸಾಧ್ಯವಿಲ್ಲ.
ಕ್ರೌರ್ಯ ಮತ್ತು ಕರುಣೆ ಎರಡೂ ಒಂದೇ (ಮನಸ್ಸಿನಲ್ಲಿರುತ್ತವೆ) ಹೃದಯದಲ್ಲಿರುತ್ತವೆ. ಅದನ್ನು ಕವಿತೆಯಲ್ಲಿ ಪ್ರಕಟಗೊಳಿಸುವಾಗ ಕವಯತ್ರಿ ಬಳಸಿರುವ ರೂಪಕ ಸೊಗಸಾಗಿದೆ.” ಕಲ್ಲಿನ ಮಗ್ಗುಲಲ್ಲೇ
ಹೂವರಳುತ್ತದೆ.
ಕ್ರೌರ್ಯ, ಕಾರುಣ್ಯ ಒಂದೇ ದಾರಿಯಲ್ಲಿ ನಡೆದ ಹಾಗೆ! ”
ಎಷ್ಟೋಂದು ಭಿನ್ನತೆ, ಭಿನ್ನತೆಗಳ ಅಂತರ ದೂರ ಇರಬಹುದು ಆದರೇ ಅವಿರುವುದು ಒಂದೇ ಮನುಷ್ಯನಲ್ಲಿ ಅಲ್ಲವೇ.
“ಮೌನದ ಬಯಲನ್ನು
ಹಾದು ಬರುವುದೆಂದರೆ
ಹೂ ಗಂಧವನ್ನು
ಎದೆಗೆ ತುಂಬಿಕೊಂಡ ಹಾಗೆ !
ಹೌದು ಮೌನದ ಬಯಲನ್ನು ಹಾದು ಬರುವುದು ಸುಲಭವಲ್ಲ
ಮೌನದ ಬಯಲನ್ನು ಹಾದು ಬರುವುದರೊಳಗೆ ಹೂವಿನ ಪರಿಮಳವನ್ನು ಎದೆಗೆ ಇಳಿಸಿಬಿಡುವಷ್ಚು ಕಸುವು ದಕ್ಕಿರುತ್ತದೆ.
ಕಾವ್ಯ ಹುಟ್ಟುವುದೇ ನೋವಿನಲ್ಲಿ… ನೋವಿನಲ್ಲಿ ಕಾವ್ಯ ನರಳುವುದಿಲ್ಲ ಅರಳುತ್ತದೆ.
” ಸಾಲು ಸೋಲುಗಳ
ಹತಾಶೆಯಲ್ಲಿಯೇ
ಸಾಲು ದೀಪಗಳ ಬೆಳಗಿಕೋ!
ಸೋತಾಗ ಹತಾಶೆಗೆ ಒಳಗಾಗದೆ
ಸೋಲಿನಿಂದ ಅನುಭವ ವೇದ್ಯವಾಗಿ ಬದುಕಿನ ಬೆಳಕು ಮೂಡಿಸಿಕೊಳ್ಳಬೇಕು ಎಂದಿದ್ದಾರೆ.
” ಕಡಲು ಥೇಟು
ತಾಯಂದಿರ
ಒಡಲು”
ಕಡಲು ತನ್ನ ಒಡಲೊಳಗೆ ಎಲ್ಲವನ್ನೂ ತುಂಬಿಕೊಳ್ಳುತ್ತದೆ.
ಜೀವ ನಿರ್ಜೀವ, ರಕ್ಷಕ ಭಕ್ಷಕ ಎಲ್ಲವೂ ತುಂಬಿರುತ್ತದೆ.
ತಾಯಿಯೂ ಹಾಗೆ ಮಕ್ಕಳ ಎಲ್ಲಾ ತಪ್ಪುಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡು ಕ್ಷಮಿಸಿಬಿಡುತ್ತಾಳೆ.ಕೆಲವೊಮ್ಮೆ ನೋವು ಕೂಡ ಹಿತವೆನಿಸುತ್ತವೆ.
“ಹೊತ್ತು ಮಾರಲು
ನೋವು ಅಮೂರ್ತ!
ಸುಮ್ಮನೆ ಬಿಕ್ಕಲು
ಲೋಕದ ಕಣ್ಣಲ್ಲಿ ಅನರ್ಥ”
” ಗಾಯಗಳಿರಲಿ ಬಿಡು
ನೆಲವು ನೋಯುತ್ತದಲ್ಲ”
ಪ್ರಕೃತಿ ಹೇಗೆ ವಿಶಾಲ ಮನೋಭಾವನೆ ಯಿಂದ
ಮನುಷ್ಯ ಸಂತತಿಯನ್ನು ಸಲಹುತ್ತಿದೆ ಆದರೆ ಮನುಷ್ಯ ಮಾತ್ರ ಪ್ರಕೃತಿಯ ವಿಶಾಲ ಗುಣಗಳಿಂದ ತಾಳ್ಮೆ, ಸಹನೆ ಯಾವುದನ್ನು ಕಲಿಯದೇ ಇನ್ನಷ್ಟು ಸಣ್ಣವನಾಗುತ್ತಿರುವ.
“ಇರಿಯದಿದ್ದರೆ ಮಾತೂ ಬಂಗಾರವೇ
ಕೆಡುಕಿರದ ಮೌನವೂ ಧ್ಯಾನವೇ”
” ಗಾಯಗಳನ್ನು
ತೊರಬಾರದು
ಉಪ್ಪು ಸವರುಮ
ಲೋಕವಿದು”
ಲೋಕದ ನಡೆಗೆ ಇಲ್ಲಿ ವಿಡಂಬನೆಯನ್ನು ಕಾಣಬಹುದು. ಸಂಬಂಧಗಳು ಹೇಗೆ ನೀರಸವಾಗುತ್ತವೆ ಎಂಬುದು ಇಲ್ಲಿನ ಕವಿತೆಗಳಲ್ಲಿ ವೇದ್ಯವಾಗಿವೆ. ರಂಗಮ್ಮನವರ ನೋಟ ಅಂತರಂಗದ ನೋಟ.
ಮನುಷ್ಯನಿಗೆ ಇರಬೇಕಾದ ಅಂತರಗದ ಅನಾವರಣವಿಲ್ಲಿ ಕಾಣಬಹುದು. ನೋವಿತ್ತು ನೇವರಿಸಿದೆ ಎನ್ನುವ ಅವರ ಮಾತುಗಳಲ್ಲಿ ನೋವು ಕೂಡ ಸ್ವೀಕಾರಾರ್ಹ ಎಂಬುದನ್ನು ಮನಗಾಣಬಹುದು.