ತುಮಕೂರು: ನಗರದ ಹೊರವಲಯದ ಅಮಲಾಪುರದಲ್ಲಿ ನ್ಯಾಯಾಲಯಕ್ಕೆ ಭೂಮಿ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ಇನ್ನೂ, ಒಂದು ವಾರದ ಗಡವು ನೀಡಲು ಇಲ್ಲಿ ನಡೆದ ಸಭೆಯಲ್ಲಿ ವಕೀಲರು ನಿರ್ಧರಿಸಿದರು.
ಮಂಗಳವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಕೀಲರು ಈ ನಿರ್ಧಾರ ಕೈಗೊಂಡರು.
‘ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಭೆ ನಡೆಸಿ ಹೋದ ಬಳಿಕ ಜಾಗ ನೀಡುವ ಸಂಬಂಧ ಒಂದಿಷ್ಟು ಪ್ರಕ್ರಿಯೆಗಳು ಮುಗಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಇನ್ನೂ ಸ್ವಲ್ಪದಿನ ಕಾಲಾವಕಾಶ ನೀಡೋಣ’ ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ ಸಭೆಗೆ ತಿಳಿಸಿದರು.
ನ್ಯಾಯಾಲಯ ಸಂಕೀರ್ಣಕ್ಕಾಗಿ ಕನಿಷ್ಠ 20 ಎಕರೆ ಜಾಗ ನೀಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಆದರೆ ಈ ಸಂಬಂಧ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಜಾಗದ ಸಂಬಂಧ ಹದಿನೈದು ದಿನ ಕಾಲಾವಕಾಶ ನೀಡುವಂತೆ ಈ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕೋರಿದ್ದರು. ಕಾಲಾವಕಾಶ ಮುಗಿದಿದೆ. ಆದರೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 20 ಎಕರೆ ಜಾಗ ನೀಡಬೇಕು. ಇಲ್ಲದಿದ್ದರೆ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಷ್ಟವಾಗಬಹುದು. ಈಗಿರುವ ನ್ಯಾಯಾಲಯದಲ್ಲಿ ಕಲಾಪ ನಡೆಸುವುದೇ ಕಷ್ಟವಾಗಿದೆ. ಕಕ್ಷಿದಾರರು, ವಕೀಲರು, ನ್ಯಾಯಾಂಗ ಸಿಬ್ಬಂದಿ ಸರಿಯಾದ ಜಾಗ ಇಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಹೇಳಿದರು.
ಸಭೆಯಲ್ಲಿ ಹಿರಿಯ ವಕೀಲರಾದ ಮಂಜುನಾಥ್ ಮಾತನಾಡಿ, ಜಾಗಕ್ಕಾಗಿ ಪ್ರತಿಭಟನೆ ಮಾಡದೇ ನಮಗೆ ಬೇರೆ ಮಾರ್ಗ ಇಲ್ಲ ಎಂದರು. ವಕೀಲರಾದ ಶಿವಕುಮಾರ್, ನವೀನ್ ಕುಮಾರ್ ಎಂ.ಬಿ., ಸಿ.ಕೆ.ಮಹೇಂದ್ರ, ಓಬಣ್ಣ, ಬಿ.ಜಿ.ನಾಗರಾಜ್ ಅವರುಗಳ ಮಾತನಾಡಿ, ಜಿಲ್ಲಾಡಳಿತಕ್ಕೆ ಇನ್ನೊಂದು ವಾರ ಸಮಯ ನೀಡೋಣ. ಅಷ್ಟರಲ್ಲಿ ಜಾಗ ನೀಡದಿದ್ದರೆ ಪ್ರತಿಭಟನೆ ಮಾಡುವ ನಿರ್ಧಾರ ತೆಗೆದುಕೊಳ್ಳೋಣ’ ಎಂದು ಸಲಹೆ ನೀಡಿದರು.
ಇದೇ ತಿಂಗಳು 15 ರಂದು ಸಭೆ ವಕೀಲರ ಸಭೆ ಕರೆಯುವುದಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಜಯಂತ್ ಕುಮಾರ್ ಪ್ರಕಟಿಸಿದರು. ಸಂಘದ ಅಧ್ಯಕ್ಷರಾದ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ ಅನ್ಯ ಕಾರ್ಯ ನಿಮಿತ್ತ ಸಭೆಗೆ ಹಾಜರಾಗಲಿಲ್ಲ. ಎಂ.ಬಿ, ಸಂಘದ ಸಹ ಕಾರ್ಯದರ್ಶಿ ಧನಂಜಯ್, ಪದಾಧಿಕಾರಿಗಳಾದ ಸಿಂಧೂ, ಗೋವಿಂದರಾಜು, ವಕೀಲರಾದ ನಿರಂಜನ್ ಇತರರು ಇದ್ದರು.
ಅಮಲಾಪುರದಲ್ಲಿ ಎಂಎಸ್ಎಂಇಗೆ ಗುರುತಿಸಲಾಗಿದ್ದ ಜಾಗದಲ್ಲಿ ಮೊದಲ ಕಂತಿನಲ್ಲಿ 10 ಎಕರೆ ಜಾಗ ನೀಡುವ ಸಂಬಂಧ ಜಿಲ್ಲಾಧಿಕಾರಿ ಅವರು ಎನ್.ಒ.ಸಿ. (ನಿರಪ್ರೇಕ್ಷಣಾ ಪ್ರಮಾಣ ಪತ್ರ) ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಅಲ್ಲದೇ ಜಾಗದ ಸರ್ವೆ ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಈ ನಡುವೆ, ರಾಜ್ಯ ಕಂದಾಯ ಆಯುಕ್ತರು ವಿಶೇಷ ತನಿಖಾ ತಂಡ ರಚಿಸಿದ್ದು, ಅಮಲಾಪುರದಲ್ಲಿರುವ ಸರ್ಕಾರಿ ಜಾಗ, ಅರಣ್ಯ ಇಲಾಖೆ ಜಾಗದ ಒತ್ತುವರಿ ಬಗ್ಗೆ ತನಿಖೆಗೆ ಆದೇಶಿಸಿರುವುದು ಕುತೂಹಲ ಮೂಡಿಸಿದೆ.