Publicstory. in
Baraguru: ಚುನಾವಣೆ ಮುಗಿಯುವವರೆಗೂ ಶಿರಾದಲ್ಲೆ ಮೊಕ್ಕಾಂ ಹೂಡುತ್ತೇನೆ. ಜನರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡುವೆ. ಮನೆಮನೆಗೂ ಭೇಟಿ ನೀಡುವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಬರಗೂರಿನಲ್ಲಿ ಮಳೆಯ ನಡುವೆಯೂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಅ ಸತ್ಯನಾರಾಯಣ್ ಅಕಾಲಿಕ ನಿಧನ ಹೊಂದಿದರು. ಅವರು ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತ. ಬೇರೆ ಪಕ್ಷದವರು ಹಣದ ಆಸೆ ತೋರಿಸಿದರು ಪಕ್ಷ ತೊರೆಯಲಿಲ್ಲ. ಆದರೆ ಇಲ್ಲೊಬ್ಬರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಾಡಿದರು ಪಕ್ಷ ತೊರೆದು ಹೋಗಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.
ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿವೆ. ನಮಗೆ ಪ್ರಾದೇಶಿಕ ಪಕ್ಷ ಏಕೆ ಬೇಡ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ. ಆದರೆ ಕರ್ನಾಟಕಕ್ಕೆ ಪ್ರಧಾನಿಯವರು ಮಾಡುತ್ತಿರುವ ತಾರತಮ್ಯದ ಬಗ್ಗೆ ಯುವಕರು ಚಿಂತಿಸಲಿ ಎಂದರು.
ಶಿರಾ, ಪಾವಗಡ ಈ ಭಾಗದ ನೀರಾವರಿ ಸಮಸ್ಯೆ ಬಗ್ಗೆಯೂ ನನಗೆ ಅರಿವಿದೆ. ನನ್ನನ್ನು ತುಮಕೂರಿಗೆ ಕರೆದುಕೊಂಡು ಬಂದು ಸೋಲಿಸಿದ ಬಗ್ಗೆಯೂ ನನಗೆ ಗೊತ್ತಿದೆ. ಇವೆಲ್ಲವಕ್ಕೂ ನನ್ನ ಬಳಿ ಉತ್ತರವಿದೆ ಎಂದರು.
ರೈತರಿಗಾಗಿ ಸತ್ಯನಾರಾಯಣ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರೈತರಿಗೆ ನ್ಯಾಯ ಸಿಕ್ಕ ನಂತರ ಮಂತ್ರಿ ಸ್ಥಾನ ಸ್ವೀಕರಿಸಿವೆ ಎಂದರು. ನಾನೇ ಮನವೊಲಿಸಿದರು ಸಹ ಅವರು ಮಂತ್ರಿ ಆಗಲಿಲ್ಲ. ಅಂತಹ ನಿಷ್ಠಾವಂತ ಕಾರ್ಯಕರ್ತ ಅವರು. ಇದಕ್ಕಾಗಿಯೇ ಅವರ ಪತ್ನಿಗೆ ಟಿಕೆಟ್ ನೀಡಿರುವೆ ಎಂದರು.
ನನ್ನ ಕಾಲದಲ್ಲಿ, ಕುಮಾರಸ್ವಾಮಿ ಕಾಲದಲ್ಲಿ ರೈತರಿಗೆ ಏನು ಕೊಟ್ಟಿದ್ದೇವೆ. ಸಿದ್ದರಾಮಯ್ಯ, ಬೇರೆ ಮುಖ್ಯಮಂತ್ರಿಗಳು ಏನು ಕೊಟ್ಟಿದ್ದಾರೆ ಎಂಬುದು ಚರ್ಚೆಯಾಗಲಿ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ಚಂದ್ರಶೇಖರ್ ಅವರಿಗೆ ಹೇಳಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸಿದೆ. ಹೀಗಾಗಿ ಇಂದು ಹದಿನೈದು ಮಂದಿ ಶಾಸಕರಾಗುತ್ತಿದ್ದಾರೆ. ಇಬ್ಬರು ಸಂಸದರಾಗುತ್ತಿದ್ದಾರೆ. ನಾನು ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ.
ಗೊಲ್ಲ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮೊದಲ ಸಲ ಮಂತ್ರಿಯಾಗಿ ಮಾಡಿದೆ. ದೇವರಾಜ್ ಅರಸ್ ಅವರ ಬಳಿಕ ಸಾಮಾಜಿಕ ನ್ಯಾಯ ಸಾಧ್ಯವಾಗಿದ್ದು ನಾನು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದಾಗ. ಆದರೆ ಇದನ್ನು ನನ್ನ ವಿರೋಧ ಪಕ್ಷದ ಸ್ನೇಹಿತರು ಹೇಳಲ್ಲ ಅಷ್ಟೇ ಎಂದು ಹೇಳಿದರು.
ಅಮ್ಮಾಜಮ್ಮ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿದ್ದೆ. ಆದರೂ ಕಾಂಗ್ರೆಸ್ ನವರು ದುಂಬಾಲು ಬಿದ್ದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು ಎಂದರು.
ಸಭೆಯಲ್ಲಿ ಅಭ್ಯರ್ಥಿ ಅಮ್ಮಾಜಮ್ಮ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸತ್ಯಪ್ರಕಾಶ್ ಇದ್ದರು.