Publicstory.in
ತುಮಕೂರು: ತುಮಕೂರು ಮಹಾನಗರ ಪಾಲಿಕೆ ಸದಸ್ಯ ಕುಮಾರ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸದಸ್ಯ ಟಿ.ಆರ್. ನಾಗರಾಜ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇಶಪಾಂಡೆ ಗೋವಿಂದ ರಾಜಶಂಕರ್ ಸೋಮವಾರ ವಜಾಗೊಳಿಸಿದರು.
ಕುಮಾರ್ ಅವರಿಗೆ ಮೇಯರ್, ಉಪ ಮೇಯರ್ ಸೇರಿದಂತೆ ಯಾವುದೇ ಸಮಿತಿಗಳ ನೇಮಕದಲ್ಲಿ ಮತದಾನದ ಹಕ್ಕು ನೀಡಬಾರದು ಹಾಗೂ ಅವರನ್ನು ಸಭೆಯಲ್ಲಿ ಪಾಲ್ಗೊಳ್ಳುವ ಅಧಿಕಾರ ರದ್ದುಗೊಳಿಸಬೇಕು ಸೇರಿ ಚುನಾವಣಾ ತಕರಾರು ಅರ್ಜಿಯನ್ನು ನಾಗರಾಜ್ ಸಲ್ಲಿಸಿದ್ದರು.
ಚಿಕ್ಕಪೇಟೆ ವಾರ್ಡ್ ನಿಂದ ನಾಗರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರ್ (ಬನಶಂಕರಿ ಕುಮಾರ್) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಹಿಂದಿನ ಅವಧಿಯಲ್ಲಿ ಇದೇ ವಾರ್ಡ್ ನಿಂದ ನಾಗರಾಜ್ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಅಲ್ಲದೇ ಉಪ ಮೇಯರ್ ಸಹ ಆಗಿದ್ದರು.
ಮತದಾನದ ವೇಳೆ ವಾರ್ಡ್ ಗಳ ಮತದಾರರನ್ನು ಆಚೀಚೆ ಮಾಡಲಾಗಿದೆ. ವಾರ್ಡ್ ನ ಮತದಾರರಲ್ಲದವರನ್ನು ಮತದಾನ ಪಟ್ಟಿಗೆ ಸೇರಿಸಲಾಗಿದೆ. ವಾರ್ಡ್ ನ ಕೆಲವು ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಅಲ್ಲದೇ ವಾರ್ಡ್ ವಿಂಗಡಣೆಯಲ್ಲೂ ತಪ್ಪಾಗಿದೆ, ಹೀಗಾಗಿ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಕುಮಾರ್ ಪರವಾಗಿ ವಾದ ಮಂಡಿಸಿದ ವಕೀಲರಾದ ಎಸ್.ರಮೇಶ್ ಅವರು ಇದೊಂದು ದುರುದ್ದೇಶ ಪೂರಿತ ಅರ್ಜಿಯಾಗಿದೆ. ಅರ್ಜಿದಾರರು ಈ ಹಿಂದೆ ಅದೇ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದರು. ವಾರ್ಡ್ ವಿಂಗಡನೆ ಮಾಡಿದಾಗ, ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ವೇಳೆ ನಾಗರಾಜ್ ಅವರು ಪಾಲಿಕೆಯ ಸದಸ್ಯರೇ ಆಗಿದ್ದರು. ಆಗ ಅವರು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಅಲ್ಲದೇ ಮತದಾನದ ದಿನ ಅಥವಾ ಮತದಾನದ ನಂತರವೂ ಚುನಾವಣಾಧಿಕಾರಿಗೆ ಯಾವುದೇ ಆಕ್ಷೇಪ ಸಲ್ಲಿಸಿಲ್ಲ ಎಂದು ವಾದಿಸಿದ್ದರು.
ಕ್ರಮಾದೇಶ 7 ನಿಯಮ 11 ಡಿ ಉಲ್ಲಂಘನೆಯಾಗಿದ್ದು, ತಕರಾರು ಅರ್ಜಿಯನ್ನೇ ವಜಾಗೊಳಿಸಬೇಕು ಎಂದು ಕುಮಾರ್ ಪರ ವಕೀಲರು ಕೇಳಿದ್ದರು.
ಚುನಾವಣಾ ಅರ್ಜಿಯು ಕಾರ್ಪೋರೇಷನ್ ಅಧಿನಿಯಮ 33 ಮತ್ತು 35ರ ಅಡಿ ಪೂರಕವಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಪ್ರತಿವಾದಿಗಳಾಗಿ ಮಾಡಿಲ್ಲ. ಇದು ಚುನಾವಣಾ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಈ ತಕರಾರು ಅರ್ಜಿ ಊರ್ಜಿತವಲ್ಲ ಎಂದು ವಕೀಲ ರಮೇಶ್ ನ್ಯಾಯಾಲಯದ ಎದುರು ವಾದಿಸಿದ್ದರು. ಎರಡೂ ಕಡೆಯ ವಾದ-ವಿವಾದ ಆಲಿಸಿದ ನ್ಯಾಯಾಧೀಶರು, ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತು.