ತುಮಕೂರು:
ಮಕ್ಕಳು ಏನು ಮಾಡಿದರು ಅದು ಚೆಂದವಾಗೆ ಕಾಣುತ್ತೆ. ಮುಗ್ದ ಮನಸ್ಸಿನಿಂದ ಮಾತನಾಡುವುದನ್ನು ಕೇಳುವುದೇ ಅದೊಂದು ಆನಂದ. ಅಂತಹ ಮಕ್ಕಳು ಇನ್ನು ವೇಶಭೂಷಣ ತೊಟ್ಟು ಹಿರಿಯರಂತೆ ನಟಿಸಿ, ನರ್ತನ ಮಾಡಿದರೆ ಅಬ್ಬಾ.. ನಯನ ಮನೋಹರವೇ ಸರಿ.
ಕೃಷ್ಣ, ಕುಚೇಲ, ಭೀಮ, ಧುರ್ಯೋಧನ, ಅರ್ಜುನ, ಧರ್ಮರಾಯ, ಬಲರಾಮ, ಈಶ್ವರ, ಯಮಧರ್ಮ, ಸಾತ್ಯಕಿ, ನರ್ತಕಿ ಹೀಗೆ ಘತಕಾಲದ ಪೌರಾಣಿಕ ಪಾತ್ರದಾರಿಗಳೆ ಅಲ್ಲಿ ಮೈಳೈಸಿದ್ದರು. ಈ ಒಂದು ವೇದಿಕೆಗೆ ಸಾಕ್ಷಿಯಾಗಿದ್ದು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ.
ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯನ್ನು ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಿತ್ತು. ಕ್ಲಸ್ಟರ್ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ಬಗೆಯ ಉಡುಗೆ ತೊಡೆಗೆಯಲ್ಲಿ ಕಂಗೊಳಿಸುತ್ತಿದ್ದರು. ಬೆಳಿಗ್ಗೆ 10.30ಕ್ಕೆ ಇದ್ದ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿದೆಡೆಗಳಿಂದ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳನ್ನು ಶಿಕ್ಷಕರು, ಪೋಷಕರು ಆಟೋಗಳಲ್ಲಿ, ದ್ವಿಚಕ್ರವಾಹನಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಶಾಲಾ ಆವರಣಕ್ಕೆ ಕರೆತಂದು ಒಂದೊಮ್ಮೆ ಪೂರ್ವತಯಾರಿ ನಡೆಸುತ್ತಿದ್ದದ್ದು ಕಂಡು ಬಂತು. ಈ ವೇಳೆ ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ `ಹೀಗಲ್ಲಾ, ಹೀಗೆ, ಇನ್ನೂ ಸರಿಯಾಗಿ ಅಭಿನಯ ಬರಬೇಕು. ಅಟ್ಟಹಾಸದ ನಗು ಇರಬೇಕು. ಮಂಕಾಗಿ ಇರಬೇಡ, ನಗ್ತಾನಗ್ತಾ ಇರು’ ಎಂದೆಲ್ಲಾ ಒತ್ತಿಒತ್ತಿ ಹೇಳುತ್ತಿದ್ದರು. ಇದಕ್ಕೆ ಮಕ್ಕಳು ತಲೆಯಾಡಿಸಿ ಅಪ್ಪಣೆ ಸೂಸುತ್ತಿದ್ದವು.
ಭಷ್ಯದ ಕಥೆಗಾರರು, ಹಾಡುಗಾರರು, ವಚನಕಾರರು, ಮಾತುಗಾರರು, ಬರಹಗಾರರು, ಕವಿಗಳು, ಚಿತ್ರಕಾರರು, ಕಲಾವಿದರು.. ಅಬ್ಬಾ.. ಎತ್ತ ನೋಡಿದರು ಪುಟಾಣಿ ಪ್ರತಿಭೆಗಳಿಂದ ಶಾಲಾ ಆವರಣ ತುಂಬಿ ತುಳುಕುತ್ತಿತ್ತು. ಪುಟಾಣಿ ಕೈಗಳಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸುತ್ತಿದ್ದ ದೃಶ್ಯ ಎಂತಹ ಕಲಾಕಾರನ್ನು ನಾಚುಸುವಂತಿತ್ತು. ಪೌರಾಣಿಕ ತುಣುಕುಗಳಲ್ಲಿ ಭೀಮಾರ್ಜುನರ ಕಾಳಗದಲ್ಲಿ ಪುಟಾಣಿ ಮಕ್ಕಳ ಡೈಲಾಗ್ ಗಳು ನುರಿತ ಕಲಾವಿದರನ್ನೇ ಮೂದಲಿಸುತ್ತಿತ್ತು.
ಡೊಳ್ಳು ಕುಣಿತ, ಯಕ್ಷಗಾನ, ವೀರಗಾಸೆ, ಸೋಮನ ಕುಣಿತ, ಕರಡಿ ಕುಣಿತ, ಕುಚುಪುಡಿ, ಕಥಕ್ಕಳಿ, ಭರನಾಟ್ಯ. ಕೋಲಾಟ ಹೀಗೆ ಜಾನಪದ ಲೋಕವನ್ನೆ ಶಿಕ್ಷಕರು ಸೃಷ್ಟಿ ಮಾಡಿದ್ದರು. ಇದನ್ನೂ ಮೀರಿಸುವಂತೆ ಆಧುನಿಕ ಹಾಡುಗಳಿಗೆ ಪುಟಾಣಿ ಮಕ್ಕಳು ಹೆಜ್ಜೆ ಹಾಕುತ್ತಿದ್ದ ದೃಶ್ಯ ನೋಡುಗರ ಕಣ್ಮನ ಸೆಳೆದಿತ್ತು.
ಸ್ಪರ್ಧೆಗಿಂತಲೂ ಮಕ್ಕಳು ಮುಗ್ದ ಮನಸ್ಸಿನಲ್ಲಿ ಪ್ರತೀ ವಿಭಾಗಕ್ಕೂ ತಮ್ಮದೇ ಆದ ಶೈಲಿಯಲ್ಲಿ ತಯಾರಾಗಿ ಬಂದಿದ್ದ ರೀತಿ ಶಿಸ್ತುಬದ್ಧವಾಗಿತ್ತು. ಈ ಒಂದು ಸನ್ನಿವೇಶ ಸಮಾರಂಭ ಆಯಾಯ ಶಾಲೆಯಲ್ಲಿನ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಕರೆತಂದಿದ್ದರು. ಒಬ್ಬರಿಗಿಂತ ಒಬ್ಬರು ಏನೂ ಕಮ್ಮಿ ಇಲ್ಲವೇನೋ ಎಂಬಂತೆ ಪುಟಾಣಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆಯ್ಕೆ ಮಾಡಲು ಕುಳಿತಿದ್ದ ತೀರ್ಪುಗಾರರಿಗೂ ಯಾರನ್ನು ಆಯ್ಕೆ ಮಾಡಬೇಕು. ಎಲ್ಲರೂ ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಸ್ಪರ್ಧೆ ಒಡ್ಡುತ್ತಿದ್ದಾರೆ ಎಂಬ ಗೊಂದಲ ಉಂಟು ಮಾಡಿದ್ದಂತೂ ಸತ್ಯ. ಏನೇ ಇರಲಿ ಮಕ್ಕಳು ಏನೇ ಮಾಡಿದರೂ ಚೆನ್ನ ಎಂಬುದಕ್ಕೆ ಈ ಕಾರ್ಯಕ್ರಮ ಅಕ್ಷರ ಸಹ ಸಾಕ್ಷಿಯಾಗಿತು.