ಗುಬ್ಬಿ: ಕೋವಿಡ್ 19 ವೈರಸ್ ಸೋಂಕಿಗೆ ತೀವ್ರ ಅಸ್ವಸ್ಥರಾಗಿದ್ದ ಪತ್ರಕರ್ತ ಎಸ್.ಎಚ್.ಜಯಣ್ಣ
(37) ಶುಕ್ರವಾರ ತಡರಾತ್ರಿ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ
ನಿಧನರಾದರು. ನಿಧನ ಬಗ್ಗೆ ತಾಲ್ಲೂಕಿನ ಜನರು ಮರುಗಿದರು.
ಈ ಸಂಬಂಧ ಶನಿವಾರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಕಾರ್ಯನಿರತ
ಪತ್ರಕರ್ತರ ಸಂಘದ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.
ನುಡಿನಮನ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ
ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ಮಾತನಾಡಿ 10 ವರ್ಷದ ಬಾಲಕನಿಂದ
ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಾ ಕಷ್ಟಪಟ್ಟು ಸ್ನಾತಕೋತ್ತರ ಪದವಿ
ಪಡೆದು ಅರೆಕಾಲಿಕ ವರದಿಗಾರನಾಗಿ ಪ್ರಜಾವಾಣಿ ಪತ್ರಿಕೆಗೆ ಕೆಲಸ ನಿರ್ವಹಿಸುತ್ತಿದ್ದರು ಎಂದರು.
ಜಯಣ್ಣ ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದರು. ಬಡತನದ ಬೇಗೆಯಲ್ಲಿ ಅರಳಿದ ಈ
ವ್ಯಕ್ತಿ ಸ್ನೇಹಜೀವಿಯಾಗಿ 25 ವರ್ಷಗಳ ಕಾಲ ಪೇಪರ್ ವಿತರಣೆ ನಡೆಸಿಕೊಂಡು ಜೀವನ
ನಿರ್ವಹಣೆ ಮಾಡಿದ್ದರು.
ಪೇಪರ್ ಹಂಚುವ ಜೊತೆಯಲ್ಲೇ ಎಂಎ ಅರ್ಥಶಾಸ್ತ್ರ ಸ್ನಾತ್ತಕೋತ್ತರ ಪದವಿ ಮಾಡಿ
ನೂರಾರು ಮಕ್ಕಳಿಗೆ ಪಾಠ ಮಾಡುವ ಮೂಲಕ ಉತ್ತಮ ಶಿಕ್ಷಕನಾಗಿ
ಗುರುತಿಸಿಕೊಂಡಿದ್ದರು. ಇಂತಹ ವ್ಯಕ್ತಿಯ ಅಕಾಲಿಕ ಮರಣ ತೀವ್ರ ನೋವು ತಂದಿದೆ
ಎಂದು ವಿಷಾದಿಸಿದರು.
ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿ ಅರುಣ್‍ಕುಮಾರ್ ಮಾತನಾಡಿ ನಮ್ಮ
ಸಂಸ್ಥೆಯಲ್ಲಿ ಐದು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದ ಜಯಣ್ಣ ಅವರು ಉತ್ತಮ
ಬೋಧನೆಯಿಂದ ನೂರಾರು ಶಿಷ್ಯರಿಗೆ ದಾರಿ ದೀಪವಾಗಿದ್ದರು. ಅವರ ಕುಟುಂಬಕ್ಕೆ ನೆರವು
ನೀಡುವ ದೃಷ್ಟಿಯಿಂದ ಆತನ ಮಗುವಿಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ರಾಜೇಶ್‍ಗುಬ್ಬಿ, ಸಾಮಾಜಿಕ ಕಾರ್ಯಕರ್ತ ನಾಗಸಂದ್ರ
ವಿಜಯ್‍ಕುಮಾರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆಂಜಿನಪ್ಪ ಸೇರಿದಂತೆ
ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಕೆಲಕಾಲ ಮೌನಾಚರಣೆ
ಮೂಲಕ ಶ್ರದ್ದಾಂಜಲಿ ಸಮರ್ಪಿಸಿದರು.